ಮೈಸೂರು:ವಿಜ್ಞಾನ ಮತ್ತು ಆಧ್ಯಾತ್ಮದ ಪರಂಪರೆ ಭಾರತದಲ್ಲಿ ಸದಾ ಜೊತೆಯಾಗಿ ಬೆಳೆದುಬಂದಿವೆ. ಆಧ್ಯಾತ್ಮವು ನಮ್ಮೊಳಗೆ ನೋಡುವಂತೆ, ಬ್ರಹ್ಮಾಂಡದ ಅಧ್ಯಯನವು ನಮ್ಮ ದೃಷ್ಟಿಯನ್ನು ಆಕಾಶದತ್ತ ಹರಿಸುವಂತೆ ಪ್ರೇರೇಪಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಜಯಚಾಮರಾಜ ಒಡೆಯರ್ ಸೆಂಟರ್ ಫಾರ್ ಹೈಯರ್ ಲರ್ನಿಂಗ್ ಆವರಣದಲ್ಲಿ ವಿಶ್ವದ ಮೊದಲ ಟಿಲ್ಟೆಡ್ ಎಲ್ಇಡಿ ಡೋಮ್ ತಾರಾಲಯವಾದ ಕಾಸ್ಮೋಸ್–ಮೈಸೂರು ಅನ್ನು ರಾಷ್ಟ್ರಕ್ಕೆ ಸಮರ್ಪಿಸಿ ಮಾತನಾಡಿದ ಅವರು, ಮೈಸೂರಿಗೆ ಮತ್ತೊಮ್ಮೆ ಆಗಮಿಸಿರುವುದು ಸಂತಸ ತಂದಿದೆ. ಕೆಲವು ತಿಂಗಳ ಹಿಂದೆಯಷ್ಟೇ ವಿವೇಕಾನಂದರಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದೆ. ಇಂದು ಕಾಸ್ಮೋಸ್ ತಾರಾಲಯವನ್ನು ರಾಷ್ಟ್ರಕ್ಕೆ ಸಮರ್ಪಿಸುವ ಅವಕಾಶ ದೊರೆತಿದೆ ಎಂದರು.
ಭಾರತದ ಪೂರ್ವಜರು ಆಕಾಶವನ್ನು ಅತ್ಯಂತ ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಿದ್ದರು. ನಕ್ಷತ್ರಗಳು ಮತ್ತು ಗ್ರಹಗಳ ಚಲನೆಯನ್ನು ಅರ್ಥಮಾಡಿಕೊಂಡು ಪಂಚಾಂಗಗಳನ್ನು ರೂಪಿಸಿದ್ದರು. ಸೂರ್ಯ ಮತ್ತು ಚಂದ್ರಗ್ರಹಣಗಳ ಸಮಯವನ್ನು ನಿಖರವಾಗಿ ಲೆಕ್ಕ ಹಾಕುತ್ತಿದ್ದರು. ಆರ್ಯಭಟ, ವರಾಹಮಿಹಿರ, ಭಾಸ್ಕರಾಚಾರ್ಯ ಸೇರಿದಂತೆ ಅನೇಕ ಮಹಾನ್ ಖಗೋಳ ವಿಜ್ಞಾನಿಗಳು ಭಾರತದಲ್ಲಿ ಜನಿಸಿದ್ದರು. ಇಂದಿನಂತಹ ಅತ್ಯಾಧುನಿಕ ಉಪಕರಣಗಳು ಮತ್ತು ತಂತ್ರಜ್ಞಾನಗಳು ಇಲ್ಲದ ಕಾಲದಲ್ಲಿಯೇ ಅವರು ಮಹತ್ವದ ಸಂಶೋಧನೆಗಳನ್ನು ನಡೆಸಿ, ಸಂಕೀರ್ಣ ಗಣಿತದ ಲೆಕ್ಕಾಚಾರಗಳನ್ನು ಮಾಡಿದ್ದರು ಎಂದು ಸ್ಮರಿಸಿದರು.
ಜ್ಞಾನ ಮತ್ತು ಸಂಶೋಧನೆಗೆ ಮೈಸೂರಿನ ಮಹಾರಾಜರ ಕೊಡುಗೆ ಅಪಾರ
ಜ್ಞಾನ ಮತ್ತು ಸಂಶೋಧನೆಗೆ ಪ್ರೋತ್ಸಾಹ ನೀಡುವ ಸಂಸ್ಥೆಗಳನ್ನು ನಿರ್ಮಿಸುವ ಪರಂಪರೆ ಮೈಸೂರಿನಲ್ಲಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಯಾಯಿತು. ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (IISc) ಸ್ಥಾಪನೆಯಲ್ಲಿಯೂ ಒಡೆಯರ್ ಕುಟುಂಬ ಮಹತ್ವದ ಪಾತ್ರ ವಹಿಸಿದೆ. ಈ ಸಂಸ್ಥೆಗಳು ಹಲವು ತಲೆಮಾರುಗಳ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಅವಕಾಶಗಳನ್ನು ಕಲ್ಪಿಸಿವೆ.
ಇಂದು ಭಾರತ ವಿಜ್ಞಾನ ಕ್ಷೇತ್ರದಲ್ಲಿ ಒಂದರ ಹಿಂದೆ ಒಂದರಂತೆ ಹೊಸ ಸಾಧನೆಗಳನ್ನು ಮಾಡುತ್ತಿರುವ ಸಂದರ್ಭದಲ್ಲಿ ಅತ್ಯಾಧುನಿಕ ಕಾಸ್ಮೋಸ್ ತಾರಾಲಯದ ಮೂಲಕ ಮೈಸೂರು ಭಾರತದ ವೈಜ್ಞಾನಿಕ ಪಯಣಕ್ಕೆ ಹೊಸ ಅಧ್ಯಾಯವನ್ನು ಸೇರ್ಪಡೆಗೊಳಿಸಿದೆ ಎಂದರು.
ಭಾರತದ ಮೊದಲ ಎಲ್ಇಡಿ ಡೋಮ್ ತಾರಾಲಯವಾಗಿರುವ ಕಾಸ್ಮೋಸ್ ಯುವಜನರು ಮತ್ತು ದೇಶವಾಸಿಗಳಿಗೆ ಸಮರ್ಪಿತವಾಗುತ್ತಿದೆ. ತಾರಾಲಯದಲ್ಲಿ ಪ್ರದರ್ಶಿಸಲಾದ ಕಾರ್ಯಕ್ರಮವನ್ನು ವೀಕ್ಷಿಸುವ ಅವಕಾಶ ನನಗೂ ದೊರೆಯಿತು. ಇದು ಅತ್ಯಂತ ಅದ್ಭುತ ಅನುಭವವಾಗಿದೆ. ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ಯೋಜನೆಯ ನಿರ್ಮಾಣದಲ್ಲಿ ತೊಡಗಿಸಿಕೊಂಡ ಎಲ್ಲರನ್ನೂ ಅಭಿನಂದಿಸುತ್ತೇನೆ ಎಂದು ಹೇಳಿದರು.
ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಅನುಸಂಧಾನ್
ದೇಶದಲ್ಲಿ ಬಹುಕಾಲದಿಂದ ಜೈ ಜವಾನ್, ಜೈ ಕಿಸಾನ್ ಎಂಬ ಘೋಷಣೆ ಚಾಲ್ತಿಯಲ್ಲಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇದಕ್ಕೆ ಜೈ ವಿಜ್ಞಾನ್ ಸೇರಿಸಿದರು. ನಾನು ಜೈ ಅನುಸಂಧಾನ್ ಎಂಬ ಘೋಷಣೆಯನ್ನು ಸೇರ್ಪಡೆಗೊಳಿಸಿದೆ. 21ನೇ ಶತಮಾನದ ಭಾರತ ಇದೇ ದೂರದೃಷ್ಟಿಯೊಂದಿಗೆ ಮುನ್ನಡೆಯುತ್ತಿದೆ. ಈ ಪಯಣದಲ್ಲಿ ದೇಶದ ಯುವಜನರು ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದರು.
ಕಳೆದ ವರ್ಷ ಭಾರತದಲ್ಲಿ ನಡೆದ ಅಂತರರಾಷ್ಟ್ರೀಯ ಖಗೋಳ ವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರ ಒಲಿಂಪಿಯಾಡ್ನಲ್ಲಿ ನಮ್ಮ ಯುವಜನರು ಉತ್ಸಾಹದಿಂದ ಭಾಗವಹಿಸಿದ್ದರು. ಈ ವರ್ಷದ ಮುಂದಿನ ಆವೃತ್ತಿಯಲ್ಲಿ ಭಾಗವಹಿಸಲು ವಿಯೆಟ್ನಾಂಗೆ ತೆರಳಿದ ಭಾರತದ ಐವರು ವಿದ್ಯಾರ್ಥಿಗಳ ಪೈಕಿ ನಾಲ್ವರು ಚಿನ್ನದ ಪದಕ ಹಾಗೂ ಒಬ್ಬರು ಬೆಳ್ಳಿ ಪದಕ ಗೆದ್ದಿರುವುದು ದೇಶಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ಸೇರಿದಂತೆ ವಿವಿಧ ವಿಷಯಗಳ ಅಂತರರಾಷ್ಟ್ರೀಯ ಒಲಿಂಪಿಯಾಡ್ಗಳಲ್ಲಿಯೂ ಭಾರತೀಯ ವಿದ್ಯಾರ್ಥಿಗಳು ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದು ದಾಖಲೆ ಸಾಧನೆ ಮಾಡಿದ್ದಾರೆ. ಯುವಜನರಿಗೆ ಸೂಕ್ತ ಅವಕಾಶ, ಕಲಿಕೆಗೆ ಅಗತ್ಯವಾದ ಸಂಪನ್ಮೂಲ ಮತ್ತು ತಂತ್ರಜ್ಞಾನ ಒದಗಿಸಿದರೆ ಅವರು ದೊಡ್ಡ ಸಾಧನೆ ಮಾಡಬಲ್ಲರು. COSMOS ತಾರಾಲಯವು ಯುವಜನರ ಕನಸುಗಳಿಗೆ ರೂಪ ನೀಡುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಅಭೂತಪೂರ್ವ ಸಾಧನೆ
ತಂತ್ರಜ್ಞಾನ ಜಗತ್ತನ್ನು ಅತ್ಯಂತ ವೇಗವಾಗಿ ಬದಲಾಯಿಸುತ್ತಿದೆ. ಈ ಬದಲಾವಣೆಯಲ್ಲಿ ಯಾವುದೇ ದೇಶ ಹಿಂದೆ ಉಳಿಯುವ ಅಪಾಯವನ್ನು ಎದುರಿಸಲು ಸಾಧ್ಯವಿಲ್ಲ. ಕಳೆದ ಒಂದು ದಶಕದಲ್ಲಿ ಭಾರತವು ಖಗೋಳ ವಿಜ್ಞಾನ, ಖಗೋಳ ಭೌತಶಾಸ್ತ್ರ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ. ದೇಶದಲ್ಲಿ ಹೊಸ ದೂರದರ್ಶಕಗಳನ್ನು ಸ್ಥಾಪಿಸಲಾಗಿದೆ. ಬಾಹ್ಯಾಕಾಶ ಸಂಶೋಧನೆಯ ಹಲವು ಕಠಿಣ ಕ್ಷೇತ್ರಗಳಲ್ಲಿ ಭಾರತ ಇಂದು ವಿಶ್ವದ ಕೆಲವೇ ರಾಷ್ಟ್ರಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ ಎಂದರು.
ಚಂದ್ರಯಾನ-3 ಯೋಜನೆಯ ಮೂಲಕ ಚಂದ್ರನ ದಕ್ಷಿಣ ಧ್ರುವದ ಸಮೀಪ ಇಳಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಆದಿತ್ಯ ಎಲ್-1 ಯೋಜನೆಯ ಮೂಲಕ ಸೂರ್ಯನ ಅಧ್ಯಯನಕ್ಕಾಗಿ ಭಾರತದ ಮೊದಲ ಬಾಹ್ಯಾಕಾಶ ಸೌರ ವೀಕ್ಷಣಾಲಯವನ್ನು ಸ್ಥಾಪಿಸಲಾಗಿದೆ. ಬಾಹ್ಯಾಕಾಶದಲ್ಲಿ ಡಾಕಿಂಗ್ ಮತ್ತು ಅನ್ಡಾಕಿಂಗ್ ಸಾಮರ್ಥ್ಯ ಪ್ರದರ್ಶಿಸಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ.
ಇದೇ ಅವಧಿಯಲ್ಲಿ ಭಾರತೀಯ ಗಗನಯಾತ್ರಿಯೊಬ್ಬರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿ ಹಲವು ಪ್ರಯೋಗಗಳನ್ನು ನಡೆಸಿದ್ದಾರೆ. ಈ ಅನುಭವವು ಭಾರತದ ಸ್ವಂತ ಮಾನವಸಹಿತ ಬಾಹ್ಯಾಕಾಶ ಯಾನ ಯೋಜನೆಯಾದ ಗಗನಯಾನಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಬಾಹ್ಯಾಕಾಶ ಕ್ಷೇತ್ರದಲ್ಲಿ ಯುವ ಉದ್ಯಮಿಗಳಿಗೆ ಹೊಸ ಅವಕಾಶ
ಕೇಂದ್ರ ಸರ್ಕಾರ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ವಲಯಕ್ಕೂ ಮುಕ್ತಗೊಳಿಸುವ ಮೂಲಕ ಹೊಸ ಅವಕಾಶಗಳನ್ನು ಸೃಷ್ಟಿಸಿದೆ. ಇದರಿಂದ ಭಾರತದ ಸ್ಟಾರ್ಟ್ಅಪ್ಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ದೊರೆತಿದೆ. ಇಂದು ಯುವ ಉದ್ಯಮಿಗಳು ಸ್ವಂತ ರಾಕೆಟ್ಗಳನ್ನು ಉಡಾವಣೆ ಮಾಡುತ್ತಿದ್ದಾರೆ, ಉಪಗ್ರಹಗಳನ್ನು ಕಕ್ಷೆಗೆ ಸೇರಿಸುತ್ತಿದ್ದಾರೆ ಹಾಗೂ ಹಿಂದೆ ಭಾರತದಲ್ಲಿ ನಡೆಯದಿದ್ದ ಹಲವು ಹೊಸ ಪ್ರಯೋಗಗಳನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಕೈಗೊಳ್ಳುತ್ತಿದ್ದಾರೆ.
ಹೊಸ ಆವಿಷ್ಕಾರಗಳಿಗೆ ಪ್ರೋತ್ಸಾಹ, ಹೊಸ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಯುವಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವುದೇ ನವಭಾರತದ ವೈಜ್ಞಾನಿಕ ದೃಷ್ಟಿಕೋನವಾಗಿದೆ ಎಂದರು.
ಮಾನವ ಕಲ್ಯಾಣಕ್ಕೆ ಸಮರ್ಪಿತ ಭಾರತದ ಬಾಹ್ಯಾಕಾಶ ಯೋಜನೆ
ಭಾರತವು ಸದಾ ಮಾನವೀಯತೆಯ ಹಿತಾಸಕ್ತಿಗೆ ಆದ್ಯತೆ ನೀಡುತ್ತಾ ಬಂದಿದೆ. ಭಾರತದ ಬಾಹ್ಯಾಕಾಶ ಯೋಜನೆಗಳೂ ಮಾನವ ಕಲ್ಯಾಣಕ್ಕೆ ಸಮರ್ಪಿತವಾಗಿವೆ. ಮೀನುಗಾರರ ಸುರಕ್ಷತೆಗಾಗಿ ಇಸ್ರೋ ವಿಶೇಷ ಉಪಗ್ರಹ ಆಧಾರಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರವನ್ನು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಲವು ಮಹತ್ವದ ಉಪಕ್ರಮಗಳನ್ನು ಜಾರಿಗೊಳಿಸಿದೆ. ಅಟಲ್ ಟಿಂಕರಿಂಗ್ ಲ್ಯಾಬ್ಗಳ ಮೂಲಕ ಇದುವರೆಗೆ ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳಿಗೆ ಹೊಸ ಆಲೋಚನೆಗಳ ಮೇಲೆ ಕಾರ್ಯನಿರ್ವಹಿಸಲು, ಪ್ರಯೋಗಗಳನ್ನು ನಡೆಸಲು ಹಾಗೂ ನಾವೀನ್ಯತೆಯನ್ನು ಬೆಳೆಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದರು.
ಸಂಶೋಧನೆಗೆ ಉತ್ತೇಜನ ನೀಡಲು ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಜಗತ್ತಿನ ಅತ್ಯುತ್ತಮ ವೈಜ್ಞಾನಿಕ ಸಂಶೋಧನಾ ಪ್ರಕಟಣೆಗಳು ಲಭ್ಯವಾಗಬೇಕು ಎಂಬ ಉದ್ದೇಶದಿಂದ ‘ಒಂದು ರಾಷ್ಟ್ರ, ಒಂದು ಚಂದಾದಾರಿಕೆ’ ಯೋಜನೆ ಆರಂಭಿಸಲಾಗಿದೆ. ಇದರಿಂದ ದೇಶದ ಶೈಕ್ಷಣಿಕ ಹಾಗೂ ಸಂಶೋಧನಾ ಸಂಸ್ಥೆಗಳಿಗೆ ಜಾಗತಿಕ ಮಟ್ಟದ ಪ್ರಮುಖ ವೈಜ್ಞಾನಿಕ ನಿಯತಕಾಲಿಕೆಗಳನ್ನು ಸುಲಭವಾಗಿ ಅಧ್ಯಯನ ಮಾಡಲು ನೆರವಾಗಲಿದೆ ಎಂದರು.
ಸಂಶೋಧನಾ ಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸಲು ‘ಅನುಸಂಧಾನ್ ನ್ಯಾಷನಲ್ ರಿಸರ್ಚ್ ಫೌಂಡೇಷನ್’ ಸ್ಥಾಪಿಸಲಾಗಿದೆ. ಇದರ ಮೂಲಕ ಹೆಚ್ಚಿನ ವಿಶ್ವವಿದ್ಯಾಲಯಗಳಲ್ಲಿ ಹೊಸ ಸಂಶೋಧನೆಗಳಿಗೆ ನೆರವು ನೀಡಲಾಗುತ್ತಿದೆ. ಕಳೆದ ವರ್ಷ ಒಂದು ಲಕ್ಷ ಕೋಟಿ ರೂಪಾಯಿ ಮೊತ್ತದ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತಾ ಯೋಜನೆಯನ್ನೂ ಆರಂಭಿಸಲಾಗಿದ್ದು, ಸಂಶೋಧಕರಿಗೆ ಅಗತ್ಯವಾದ ಆರ್ಥಿಕ ನೆರವು ಒದಗಿಸುವುದರ ಜತೆಗೆ ಹೊಸ ತಂತ್ರಜ್ಞಾನಗಳನ್ನು ಪ್ರಯೋಗಾಲಯಗಳಿಂದ ಪ್ರಾಯೋಗಿಕ ಬಳಕೆಗೆ ತರುವುದಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.
ದೇಶದಲ್ಲಿ ವಿಜ್ಞಾನ ಮತ್ತು ಸಂಶೋಧನೆಗೆ ಪೂರಕವಾದ ಬಲಿಷ್ಠ ವ್ಯವಸ್ಥೆ ರೂಪುಗೊಳ್ಳುತ್ತಿದೆ. ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲು ಯುವಜನರಲ್ಲಿ ಕುತೂಹಲ ಮತ್ತು ಪ್ರಶ್ನಿಸುವ ಮನೋಭಾವ ಬೆಳೆಸುವುದು ಅತ್ಯಂತ ಮುಖ್ಯ. ಈ ನಿಟ್ಟಿನಲ್ಲಿ ತಾರಾಲಯಗಳು ಮತ್ತು ವಿಜ್ಞಾನ ಕೇಂದ್ರಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಕಾಸ್ಮೋಸ್–ಮೈಸೂರು ತಾರಾಲಯದ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಎಲ್ಲರಿಗೂ ಮನವಿ ಮಾಡುತ್ತೇನೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ತಾರಾಲಯಕ್ಕೆ ಭೇಟಿ ನೀಡುವಂತೆ ಕಾರ್ಯಕ್ರಮ ರೂಪಿಸಿ, ಅವರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ಬ್ರಹ್ಮಾಂಡದ ಕುರಿತು ತಿಳಿದುಕೊಳ್ಳಲು ಇಲ್ಲಿಗೆ ಬರುವ ಮಕ್ಕಳಲ್ಲಿ ಕೆಲವರು ಭವಿಷ್ಯದಲ್ಲಿ ವಿಜ್ಞಾನಿಗಳಾಗಿ, ಬ್ರಹ್ಮಾಂಡದ ಕುರಿತು ಹೊಸ ಸಂಶೋಧನೆಗಳನ್ನು ನಡೆಸಿ ತಮ್ಮ ಆವಿಷ್ಕಾರಗಳನ್ನು ಜಗತ್ತಿಗೆ ಪರಿಚಯಿಸಬಹುದು. ಅದುವೇ ಈ ಕಾಸ್ಮೋಸ್ ತಾರಾಲಯದ ಅತ್ಯಂತ ದೊಡ್ಡ ಯಶಸ್ಸಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
