ಸಮಗ್ರ ಸುದ್ದಿ

ದೈಹಿಕ, ಮಾನಸಿಕ ಆರೋಗ್ಯ ಮತ್ತು ಕ್ರೀಡಾಸಕ್ತಿ ಉತ್ತೇಜಿಸುವಲ್ಲಿ ಪಂದ್ಯಾವಳಿ ಸಹಕಾರಿ -ಸಚಿವ ಪ್ರಿಯಾಂಕ್ ಖರ್ಗೆ

Share

27ನೇ ಅಖಿಲ ಭಾರತ ಪೊಲೀಸ್ ಲಾನ್ ಟೆನ್ನಿಸ್ ಚಾಂಪಿಯನ್‍ಶಿಪ್‍ಗೆ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ

ಬೆಂಗಳೂರು: ಪೊಲೀಸ್ ಅಧಿಕಾರಿಗಳ ವೃತ್ತಿಪರ ಜವಾಬ್ದಾರಿಗಳ ಜೊತೆಗೆ ದೈಹಿಕ ಕ್ಷಮತೆ, ಮಾನಸಿಕ ಆರೋಗ್ಯ ಮತ್ತು ಕ್ರೀಡಾಸಕ್ತಿ ಉತ್ತೇಜಿಸುವಲ್ಲಿ ಪಂದ್ಯಾವಳಿಗಳು ಸಹಕಾರಿಯಾಗುತ್ತದೆ ಎಂದು ಗೃಹ, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಅವರು ಅವರು ತಿಳಿಸಿದರು.

ಅವರು ಇಂದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವತಿಯಿಂದ ಎಸ್.ಎಂ. ಕೃಷ್ಣ ಟೆನ್ನಿಸ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 27ನೇ ಅಖಿಲ ಭಾರತ ಪೊಲೀಸ್ ಲಾನ್ ಟೆನ್ನಿಸ್ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ   ಟೆನ್ನಿ9ಸ್ ಆಟ ಆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಸಚಿವರು, ದೇಶದ ವಿವಿಧ ರಾಜ್ಯಗಳು ಹಾಗೂ ಕೇಂದ್ರ ಪೊಲೀಸ್ ಸಂಸ್ಥೆಗಳ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಈ ಕ್ರೀಡಾಕೂಟವು ಕ್ರೀಡಾಸ್ಫೂರ್ತಿ, ಪರಸ್ಪರ ಸ್ನೇಹ ಹಾಗೂ ಸೌಹಾರ್ದತೆಯನ್ನು ಬೆಳೆಸುವ ಮಹತ್ವದ ವೇದಿಕೆಯಾಗಿದೆ ಎಂದರು.

ಈ ಚಾಂಪಿಯನ್‍ಶಿಪ್‍ನಲ್ಲಿ ದೇಶದ 17 ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶ, ಆರು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಹಾಗೂ ಮೂರು ಕೇಂದ್ರ ಪೊಲೀಸ್ ಸಂಸ್ಥೆಗಳನ್ನು ಪ್ರತಿನಿಧಿಸುವ ಒಟ್ಟು 180 ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಪೊಲೀಸ್ ಅಧಿಕಾರಿಗಳ ವೃತ್ತಿಪರ ಜವಾಬ್ದಾರಿಗಳ ಜೊತೆಗೆ ಅವರ ದೈಹಿಕ ಕ್ಷಮತೆ, ಮಾನಸಿಕ ಆರೋಗ್ಯ ಮತ್ತು ಕ್ರೀಡಾಸಕ್ತಿಯನ್ನು ಉತ್ತೇಜಿಸುವಲ್ಲಿ ಇಂತಹ ಪಂದ್ಯಾವಳಿಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯವು ಈ ಪ್ರತಿಷ್ಠಿತ 27ನೇ ಅಖಿಲ ಭಾರತ ಪೊಲೀಸ್ ಲಾನ್ ಟೆನಿಸ್ ಚಾಂಪಿಯನ್‍ಶಿಪ್‍ಗೆ ಆತಿಥ್ಯ ವಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (KSLTA) ಹಾಗೂ ಕಂಠೀರವ ಕ್ರೀಡಾಂಗಣದಲ್ಲಿ ಪಂದ್ಯಾವಳಿಗಳು ನಡೆಯಲಿದ್ದು, ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಪೊಲೀಸ್ ಕ್ರೀಡಾಪಟುಗಳಿಗೆ ಉತ್ತಮ ಆತಿಥ್ಯ ಮತ್ತು ಕ್ರೀಡಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲ ತಂಡಗಳು ಹಾಗೂ ಕ್ರೀಡಾಪಟುಗಳಿಗೆ ಶುಭ ಹಾರೈಸಿದ ಸಚಿವರು, ಕ್ರೀಡಾಸ್ಫೂರ್ತಿಯಿಂದ ಸ್ಪರ್ಧಿಸಿ ಉತ್ತಮ ಪ್ರದರ್ಶನ ನೀಡುವಂತೆ ಕರೆ ನೀಡಿದರು. ಈ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟವು ರಾಜ್ಯದ ಕ್ರೀಡಾ ಆತಿಥ್ಯ ಪರಂಪರೆಗೆ ಮತ್ತೊಂದು ಹೆಮ್ಮೆಯ ಗರಿ ಮೂಡಿಸಲಿದೆ ಎಂದರು.

ಕಾರ್ಯಕಮದಲ್ಲಿ ಒಳಾಡಳಿತ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ, ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರು ಹಾಗೂ  ಪೊಲೀಸ್ ಪಡೆಯ ಮುಖ್ಯಸ್ಥರಾದ ಡಾ.ಎಂ.ಎ.ಸಲೀಂ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮತ್ತಿತರರು ಉಪಸ್ಥಿತರಿದ್ದರು.


Share

You cannot copy content of this page