ಕಾವೇರಿ; ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುದೀರ್ಘ ಪತ್ರ ಬರೆದ ಹೆಚ್.ಡಿ.ದೇವೇಗೌಡ
ಬೆಂಗಳೂರು:ರಾಜ್ಯದಲ್ಲಿ ಉಂಟಾಗಿರುವ ತೀವ್ರ ಮಳೆ ಕೊರತೆಯಿಂದಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ತಲೆದೋರಿರುವ ಕುಡಿಯುವ ನೀರು ಮತ್ತು ಕೃಷಿ ಬಿಕ್ಕಟ್ಟಿನ ಕುರಿತು ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಕೇಂದ್ರ ಸರ್ಕಾರವು ಶೀಘ್ರವಾಗಿ ಮಧ್ಯಪ್ರವೇಶಿಸಿ ಈ ಗಂಭೀರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕೆಂದು ಅವರು ಕೋರಿದ್ದಾರೆ.
ಪತ್ರದಲ್ಲಿ ಕಾವೇರಿ ಜಲ ನಿರ್ವಹಣೆಯಲ್ಲಿರುವ ಪ್ರಮುಖ ದೋಷಗಳು, ಪ್ರಾಧಿಕಾರಕ್ಕೆ ನೀಡಿರುವ ಸಂವಿಧಾನಬಾಹಿರ ಅಧಿಕಾರಗಳು ಹಾಗೂ ಮೇಕೆದಾಟು ಯೋಜನೆಯ ಅನುಷ್ಠಾನದ ತುರ್ತು ಅಗತ್ಯವನ್ನು ಎಳೆಎಳೆಯಾಗಿ ವಿವರಿಸಿರುವ ಮಾಜಿ ಪ್ರಧಾನಿಗಳು, ರಾಷ್ಟ್ರೀಯ ಜಲನೀತಿಯ ಅಡಿಯಲ್ಲಿ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಬೇಕೆಂಬುದನ್ನು ಪ್ರಧಾನಿಯವರ ಗಮನಕ್ಕೆ ತಂದಿದ್ದಾರೆ.
ಕಾವೇರಿ ನದಿ ನೀರು ನಿರ್ವಹಣೆಯ ಸಮಸ್ಯೆಗಳು ಮತ್ತು ತಾರತಮ್ಯ:
2026ರ ವರ್ಷದಲ್ಲಿ ರಾಜ್ಯವು ಭಾರಿ ಮಳೆ ಕೊರತೆಯನ್ನು ಎದುರಿಸುತ್ತಿದ್ದು, ಕೇವಲ ಶೇ.60ರಷ್ಟು ಮಾತ್ರ ಮಳೆಯಾಗಿದೆ. ಇದರಿಂದಾಗಿ ರಾಜ್ಯದ ಜಲಾಶಯಗಳು ತಮ್ಮ ಸಾಮರ್ಥ್ಯದ ಶೇ. 50-55ರಷ್ಟು ಮಾತ್ರ ತುಂಬಿವೆ. ಇಂತಹ ಭೀಕರ ಪರಿಸ್ಥಿತಿಯಲ್ಲಿಯೂ, ಮುಂಬರುವ ಬೇಸಿಗೆಯಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಕುಡಿಯುವ ನೀರಿನ ಅಗತ್ಯಕ್ಕಾಗಿ ಕಾಯ್ದಿರಿಸಬೇಕಾದ ಅಲ್ಪ ನೀರನ್ನೂ ತಮಿಳುನಾಡಿನ ಕೃಷಿ ಅಗತ್ಯಗಳಿಗಾಗಿ ಬಿಡುವಂತೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ಪದೇಪದೇ ನಿರ್ದೇಶನ ನೀಡುತ್ತಿರುವುದು ಆತಂಕಕಾರಿ ಎಂದು ಪತ್ರದಲ್ಲಿ ದೇವೇಗೌಡರು ಕಳವಳ ವ್ಯಕ್ತಪಡಿಸಿದ್ದಾರೆ.
1990ರಲ್ಲಿ ರಚನೆಯಾದ ನ್ಯಾಯಮಂಡಳಿ, ಇತಿಹಾಸದಲ್ಲೇ ಮೊದಲ ಬಾರಿಗೆ 12 ತಿಂಗಳ ಮಾಸಿಕ ಬಿಡುಗಡೆ ವೇಳಾಪಟ್ಟಿಯನ್ನು ನಿಗದಿಪಡಿಸುವ ಅಸಹಜ ಮಧ್ಯಂತರ ಆದೇಶವನ್ನು ನೀಡಿತು. 2007ರ ಅಂತಿಮ ತೀರ್ಪಿನಲ್ಲೂ ಕರ್ನಾಟಕಕ್ಕೆ ನ್ಯಾಯಸಮ್ಮತವಾಗಿ ಸಿಗಬೇಕಿದ್ದ ಪ್ರಮಾಣಕ್ಕಿಂತ ಕಡಿಮೆ ನೀರನ್ನು ಹಂಚಿಕೆ ಮಾಡುವ ಮೂಲಕ ಸ್ಪಷ್ಟ ತಾರತಮ್ಯ ಮಾಡಲಾಗಿದೆ ಎಂದು ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
CWMAಗೆ ನೀಡಲಾದ ಸಂವಿಧಾನಬಾಹಿರ ಹೆಚ್ಚುವರಿ ಅಧಿಕಾರಗಳು:
ಜಲಸಂಪನ್ಮೂಲ ಸಚಿವಾಲಯವು 2018ರಲ್ಲಿ ಸಿದ್ಧಪಡಿಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಕರಡು ಯೋಜನೆಯು ರಾಜ್ಯಗಳ ಸಾಂವಿಧಾನಿಕ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಸಂವಿಧಾನದ ಏಳನೇ ಅನುಸೂಚಿಯ ರಾಜ್ಯಪಟ್ಟಿಯ ನಮೂದು 17ರ ಪ್ರಕಾರ ‘ನೀರಾವರಿ’ ಎಂಬುದು ಸಂಪೂರ್ಣವಾಗಿ ರಾಜ್ಯಗಳ ವ್ಯಾಪ್ತಿಗೆ ಬರುವ ವಿಷಯವಾಗಿದೆ. ಆದರೆ, ಕಾವೇರಿ ನೀರಿನ ಸಂಗ್ರಹ, ಹಂಚಿಕೆ, ಬೆಳೆ ಪದ್ಧತಿಯ ಬದಲಾವಣೆ ಮತ್ತು ಜಲಾಶಯಗಳ ಕಾರ್ಯಾಚರಣೆಯಂತಹ ಸೂಕ್ಷ್ಮ ವಿಚಾರಗಳಲ್ಲಿ ಪ್ರಾಧಿಕಾರಕ್ಕೆ ಹಸ್ತಕ್ಷೇಪ ಮಾಡಲು ವ್ಯಾಪಕ ಅಧಿಕಾರ ನೀಡಿರುವುದು ಸಂವಿಧಾನಬಾಹಿರ ಎಂದು ಮಾಜಿ ಪ್ರಧಾನಿಗಳು ಪ್ರಬಲವಾಗಿ ಪ್ರತಿಪಾದಿಸಿದ್ದಾರೆ.
“ಕರ್ನಾಟಕಕ್ಕೆ ಹಂಚಿಕೆಯಾದ ನೀರನ್ನು ತನ್ನ ಹಿತಾಸಕ್ತಿಗೆ ಅನುಗುಣವಾಗಿ ಬಳಸುವ ಸ್ವಾತಂತ್ರ್ಯವಿದೆ. ಅದಕ್ಕೆ ಹಂಚಿಕೆಯಾದ ನೀರಿನ ಪ್ರಮಾಣ ಕಡಿಮೆಯಾಗದ ಹೊರತು ಬೇರೆ ಯಾವುದೇ ರಾಜ್ಯವು ಈ ವಿಷಯದಲ್ಲಿ ಹಸ್ತಕ್ಷೇಪಿಸುವ ಹಕ್ಕಿಲ್ಲ” ಎಂಬ 2025ರ ನವೆಂಬರ್ 13ರ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಆದೇಶದ ಅನ್ವಯ, CWMAಯ ಅಧಿಕಾರವನ್ನು ಕೇವಲ ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಬಿಳಿಗುಂಡ್ಲು ಅಳತೆ ಕೇಂದ್ರದಲ್ಲಿ ನೀರಿನ ಹರಿವಿನ ಮೇಲ್ವಿಚಾರಣೆಗೆ ಮಾತ್ರ ಸೀಮಿತಗೊಳಿಸಬೇಕು ಎಂದು ದೇವೇಗೌಡರು ಒತ್ತಾಯಿಸಿದ್ದಾರೆ.
ನ್ಯಾಯಮಂಡಳಿಯ ತೀರ್ಪುಗಳ ಮರುಪರಿಶೀಲನೆಯ ಅಗತ್ಯ:
ಕಾವೇರಿ ನ್ಯಾಯಮಂಡಳಿಯು 50 ವರ್ಷಗಳಿಗಿಂತ ಹಳೆಯ ದತ್ತಾಂಶಗಳ ಆಧಾರದ ಮೇಲೆ ನೀರು ಹಂಚಿಕೆ ಮಾಡಿದೆ. ಪ್ರಸ್ತುತ ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯಿಂದಾಗಿ ಮುಂಗಾರು ಚಕ್ರ ಸಂಪೂರ್ಣವಾಗಿ ಅನಿಶ್ಚಿತವಾಗಿದೆ. ಹೀಗಾಗಿ, ಬದಲಾಗಿರುವ ಪ್ರಸ್ತುತ ಪರಿಸ್ಥಿತಿಗಳಿಗೆ ಅನುಗುಣವಾಗಿ ನ್ಯಾಯಮಂಡಳಿಯ ತೀರ್ಪು ಹಾಗೂ ಸುಪ್ರೀಂ ಕೋರ್ಟ್ನ 2018ರ ಆದೇಶಗಳನ್ನು ಸಮಗ್ರವಾಗಿ ಮರುಪರಿಶೀಲಿಸುವ ಕಾಲ ಬಂದಿದೆ ಎಂದು ಪತ್ರದಲ್ಲಿ ದೇವೇಗೌಡರು ಅಭಿಪ್ರಾಯಪಟ್ಟಿದ್ದಾರೆ.
ತಮಿಳುನಾಡು ಸರ್ಕಾರವು ಮೇಕೆದಾಟು ವಿಚಾರಕ್ಕೆ ಸಂಬಂಧಿಸಿದಂತೆ ಹೊಸ ನ್ಯಾಯಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಇತ್ತೀಚೆಗೆ ದೂರು ಸಲ್ಲಿಸಿದೆ. ಪ್ರಸ್ತಾವಿತ ಹೊಸ ನ್ಯಾಯಮಂಡಳಿ ರಚನೆಯಾದಾಗ, ಹಳೆಯ ಕಾವೇರಿ ತೀರ್ಪಿನ ಮರು ಪರಿಶೀಲನೆಯ ಜವಾಬ್ದಾರಿಯನ್ನೂ ಅದೇ ನ್ಯಾಯಮಂಡಳಿಗೆ ವಹಿಸಬೇಕೆಂದು ಅವರು ಕೋರಿದ್ದಾರೆ.
ಮೇಕೆದಾಟು ಯೋಜನೆ ಮತ್ತು ನದಿ ಜೋಡಣೆ:
ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ‘ಮೇಕೆದಾಟು ಕುಡಿಯುವ ನೀರು ಸರಬರಾಜು ಯೋಜನೆ’ ಅತ್ಯಂತ ಅಗತ್ಯವಾಗಿದೆ. ಈ ಸಂಬಂಧ ಕೇಂದ್ರ ಜಲ ಆಯೋಗಕ್ಕೆ (CWC) ಪರಿಷ್ಕೃತ ವಿವರವಾದ ಯೋಜನಾ ವರದಿಯನ್ನು (DPR) ಸಲ್ಲಿಸಲಾಗಿದ್ದು, ಇದಕ್ಕೆ ಅತ್ಯುನ್ನತ ಆದ್ಯತೆಯಲ್ಲಿ ಅನುಮೋದನೆ ನೀಡಬೇಕೆಂದು ಪತ್ರದಲ್ಲಿ ಕೋರಲಾಗಿದೆ.
ಜತೆಗೆ, ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (NWDA) ಯೋಜಿಸುತ್ತಿರುವ ಗೋದಾವರಿ-ಕೃಷ್ಣಾ-ಕಾವೇರಿ ನದಿ ಜೋಡಣೆ ಯೋಜನೆಯಲ್ಲಿ (ಒಟ್ಟು 147.7 TMC ಪೈಕಿ) ಕರ್ನಾಟಕಕ್ಕೆ ಕೇವಲ 15.9 ಟಿಎಂಸಿ ನೀರು ತಾತ್ಕಾಲಿಕವಾಗಿ ಹಂಚಿಕೆಯಾಗಿದೆ. ಈ ಪ್ರಮಾಣವು ಇತರ ರಾಜ್ಯಗಳಿಗೆ ಹೋಲಿಸಿದರೆ ತೀರಾ ಕಡಿಮೆಯಾಗಿದ್ದು, ಸಮಾನತೆ ಮತ್ತು ನೈಸರ್ಗಿಕ ನ್ಯಾಯದ ಆಧಾರದ ಮೇಲೆ ಕರ್ನಾಟಕದ ಹಂಚಿಕೆಯನ್ನು ಹೆಚ್ಚಿಸುವಂತೆಯೂ ಪ್ರಧಾನಿಯವರಲ್ಲಿ ದೇವೇಗೌಡರು ಕೋರಿದ್ದಾರೆ.
ಈ ಮೇಲಿನ ಎಲ್ಲಾ ಗಂಭೀರ ಸಮಸ್ಯೆಗಳನ್ನು ಪರಿಗಣಿಸಿ, ಕೇಂದ್ರ ಜಲಶಕ್ತಿ ಸಚಿವಾಲಯದ ಮೂಲಕ ಶೀಘ್ರ ಕ್ರಮಗಳನ್ನು ಕೈಗೊಳ್ಳುವಂತೆ ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.
