ಬೆಂಗಳೂರು:ಬೆಂಗಳೂರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದು ಸರ್ಕಾರದ ಗುರಿ. ನಗರದ ಅಭಿವೃದ್ಧಿಗೆ ಸರ್ಕಾರ ವಿಶೇಷ ಆದ್ಯತೆ ನೀಡಿದ್ದು, ಕಳೆದ ಮೂರು ವರ್ಷಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಬೆಂಗಳೂರು ಇತಿಹಾಸದಲ್ಲಿ ಅಭಿವೃದ್ಧಿಗಾಗಿ ಹಿಂದೆಂದೂ ಇಷ್ಟೊಂದು ಪ್ರಮಾಣದ ಹಣ ಹೂಡಿಕೆ ಮಾಡಿರುವ ಉದಾಹರಣೆ ಇಲ್ಲ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.
ವಿಶ್ವಬ್ಯಾಂಕ್ ನೆರವಿನ ಕರ್ನಾಟಕ ಜಲ ಭದ್ರತೆ ಮತ್ತು ವಿಪತ್ತು ಸ್ಥಿತಿಸ್ಥಾಪಕತ್ವ ಕಾರ್ಯಕ್ರಮ ಅಡಿಯಲ್ಲಿ ಅಭಿವೃದ್ಧಿಗೊಳಿಸುತ್ತಿರುವ ನೀರುಗಾಲುವೆ ಮತ್ತು ಪ್ರವಾಹ ನಿಯಂತ್ರಣ ಕಾಮಗಾರಿಗಳಿಗೆ ಮಹದೇವಪುರ ವಿಧಾನಸಭಾ ಕ್ಷೇತ್ರದ ಗುಂಜೂರಿನಲ್ಲಿ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
“ಮಳೆ ಬಂದಾಗ ಹಲವು ಪ್ರದೇಶಗಳಲ್ಲಿ ನೀರು ನುಗ್ಗಿ ಜನರು ತೊಂದರೆ ಅನುಭವಿಸುತ್ತಿರುವುದನ್ನು ಸರ್ಕಾರ ಗಮನಿಸಿದೆ. ಮಳೆಗಾಲದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಸುಮಾರು 2,000 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜಕಾಲುವೆ ಮತ್ತು ಮಳೆನೀರು ಚರಂಡಿಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇನ್ನೂ ಹಲವು ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಾಣ ಹಾಗೂ ಒತ್ತುವರಿ ತೆರವು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ” ಎಂದರು.
“ಶಂಕುಸ್ಥಾಪನೆ ಎಂದರೆ ಕೇವಲ ಕಲ್ಲು ನೆಡುವ ಕಾರ್ಯಕ್ರಮವಲ್ಲ. ಜನರ ಕನಸುಗಳಿಗೆ ಸ್ಪಂದಿಸಿ, ಅವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಹಾಗೂ ಬದುಕಿನಲ್ಲಿ ಬದಲಾವಣೆ ತರುವ ಕಾರ್ಯಕ್ರಮ” ಎಂದು ತಿಳಿಸಿದರು.
ಬೆಂಗಳೂರು ಅಭಿವೃದ್ಧಿಯಲ್ಲಿ ರಾಜಕೀಯ ಮಾಡಿಲ್ಲ
“ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಜಾರಿಗೆ ಬಂದ ನರ್ಮ್ ಯೋಜನೆಯಡಿ ಬೆಂಗಳೂರು ನಗರದಲ್ಲಿ ಹಲವು ಪ್ರಮುಖ ಕಾಮಗಾರಿಗಳು ನಡೆದಿವೆ. ಹೊಸಕೋಟೆ ರಸ್ತೆ, ಕೆ.ಆರ್. ಪುರಂ ಭಾಗದ ರಸ್ತೆ, ವಿಮಾನ ನಿಲ್ದಾಣ ಫ್ಲೈಓವರ್, ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಹಾಗೂ ನೆಲಮಂಗಲ ಫ್ಲೈಓವರ್ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ರಾಜಕೀಯ ಉದ್ದೇಶದಿಂದ ಮಾಡಿದ್ದಲ್ಲ. ನಗರದ ಅಭಿವೃದ್ಧಿಯ ದೃಷ್ಟಿಯಿಂದ ಕೈಗೊಂಡ ಕೆಲಸಗಳು” ಎಂದು ತಿಳಿಸಿದರು.
“ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ದೇಶ-ವಿದೇಶಗಳಿಂದ ಉದ್ಯೋಗ ಅರಸಿ ಲಕ್ಷಾಂತರ ಜನರು ನಗರಕ್ಕೆ ಬರುತ್ತಿದ್ದಾರೆ. ನಗರದ ಬೆಳವಣಿಗೆಗೆ ಅನುಗುಣವಾಗಿ ರಸ್ತೆ, ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಮೂಲಸೌಕರ್ಯಗಳನ್ನು ವಿಸ್ತರಿಸುವ ಅಗತ್ಯವಿದೆ” ಎಂದರು.
ಬೆಂಗಳೂರು ರಸ್ತೆ ಅಭಿವೃದ್ಧಿಗೆ ಹೊಸ ಗ್ರಿಡ್ ವ್ಯವಸ್ಥೆ
“ಹಿಂದಿನ ಸರ್ಕಾರಗಳ ಅವಧಿಯಲ್ಲಿ ನಗರ ಯೋಜನೆಯಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸುವ ಉದ್ದೇಶದಿಂದ ಬೆಂಗಳೂರು ನಗರದಲ್ಲಿ ರಸ್ತೆ ಗ್ರಿಡ್ ವ್ಯವಸ್ಥೆ ರೂಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಸ್ತೆ ಗ್ರಿಡ್ಗಳ ವ್ಯಾಪ್ತಿಯಲ್ಲಿ ಅನಿಯಂತ್ರಿತ ಕಟ್ಟಡ ನಿರ್ಮಾಣವಾಗದಂತೆ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.
“ಹೊಸಕೋಟೆ ಭಾಗದಿಂದ ನಂದಗುಡಿ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರದ ಕೊನೆಯ ಅವಧಿಯಲ್ಲಿ 100 ಮೀಟರ್ ಅಗಲದ ರಸ್ತೆ ನಿರ್ಮಾಣಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಇದರಿಂದ ಸುಮಾರು 5ರಿಂದ 6 ಸಾವಿರ ಕಟ್ಟಡಗಳನ್ನು ತೆರವುಗೊಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಜನರಿಗೆ ತೊಂದರೆಯಾಗದಂತೆ ಪರ್ಯಾಯ ಮಾರ್ಗ ಕಂಡುಕೊಂಡು, ಅಗತ್ಯವಿರುವ ಕಡೆ 45 ಮೀಟರ್ ಅಗಲದಲ್ಲಿ ರಸ್ತೆ ಅಭಿವೃದ್ಧಿಪಡಿಸುವ ಹೊಸ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಸಾವಿರಾರು ಕಟ್ಟಡಗಳನ್ನು ಉಳಿಸುವುದರ ಜೊತೆಗೆ ಸರ್ಕಾರದ ಮೇಲಿನ ಭಾರೀ ಪರಿಹಾರದ ಹೊರೆ ತಪ್ಪಿಸಿದಂತಾಗಿದೆ” ಎಂದರು.
“ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಇನ್ನೂ ಎಲ್ಲಿ ರಾಜಕಾಲುವೆ ಒತ್ತುವರಿಯಾಗಿದೆ, ಎಲ್ಲಿ ತಡೆಗೋಡೆ ನಿರ್ಮಿಸಬೇಕು ಎಂಬುದರ ಕುರಿತು ಸಮಗ್ರ ನಕ್ಷೆ ಸಿದ್ಧಪಡಿಸಿ ಪರಿಶೀಲಿಸಲಾಗುತ್ತಿದೆ. ಫ್ಲೈಓವರ್, ಡಬಲ್ ಡೆಕ್ಕರ್ ರಸ್ತೆ ಹಾಗೂ ಮೆಟ್ರೋ ವಿಸ್ತರಣೆಯಂತಹ ಯೋಜನೆಗಳಿಗೂ ಸರ್ಕಾರ ಆದ್ಯತೆ ನೀಡಿದೆ” ಎಂದರು.
“ಐಟಿ-ಬಿಟಿ ಉದ್ಯಮಗಳು ಹೆಚ್ಚಾಗಿರುವ ಭಾಗದಲ್ಲಿ ಉದ್ಯೋಗಿಗಳ ಮೇಲೆ ಸಂಚಾರದ ಒತ್ತಡವೂ ಹೆಚ್ಚಾಗಿದೆ. ಅವರು ಹೆಚ್ಚಿನ ತೆರಿಗೆ ಪಾವತಿಸುತ್ತಿದ್ದು, ಈ ಭಾಗದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ. ಇಡೀ ಬೆಂಗಳೂರನ್ನು ಒಂದೇ ಬಾರಿಗೆ ಸರಿಪಡಿಸಲು ಸಾಧ್ಯವಿಲ್ಲ. ಕಟ್ಟಡಗಳನ್ನು ಒಡೆದು ರಸ್ತೆ ಅಗಲೀಕರಣ ಮಾಡುವುದೂ ಪರಿಹಾರವಲ್ಲ. ಜನರಿಗೆ ಕಡಿಮೆ ತೊಂದರೆಯಾಗುವ ರೀತಿಯಲ್ಲಿ ಯೋಜನೆಗಳನ್ನು ರೂಪಿಸಬೇಕು” ಎಂದು ಹೇಳಿದರು.
ಟನಲ್ ಯೋಜನೆಗೆ ಅಡ್ಡಿ ಒಳ್ಳೆ ಪ್ರವೃತ್ತಿಯಲ್ಲ
“ಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಣೆಗೆ ಟನಲ್ ರಸ್ತೆ ಯೋಜನೆ ಕೈಗೆತ್ತಿಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ಅನುಭವವಿಲ್ಲದ ವ್ಯಕ್ತಿಗಳಿಂದ ವಿರೋಧ ಉಂಟಾಗುತ್ತಿದೆ. ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗಿವೆ. ಅಭಿವೃದ್ಧಿ ಯೋಜನೆಗಳಿಗೆ ಅನಗತ್ಯ ಅಡ್ಡಿಪಡಿಸುವ ಪ್ರವೃತ್ತಿ ಸರಿಯಲ್ಲ. ನಗರದ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು” ಎಂದು ಹೇಳಿದರು.
ಭೂಮಾಫಿಯಾ ವಿರುದ್ಧ ಕ್ರಮ
“ಮಹದೇವಪುರ ಸೇರಿದಂತೆ ಬೆಂಗಳೂರಿಗೆ ಹೊರರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ವಾಸಿಸುತ್ತಿದ್ದಾರೆ. ಎಲ್ಲರನ್ನೂ ಒಳಗೊಳ್ಳುವ ರೀತಿಯಲ್ಲಿ ಅಭಿವೃದ್ಧಿ ಮಾಡಬೇಕಿದೆ. ಆದರೆ ಭೂಮಾಫಿಯಾಗಳಿಗೆ ಅವಕಾಶ ನೀಡಬಾರದು. ಮೂಲ ಭೂಮಾಲೀಕರಿಗೆ ತೊಂದರೆ ನೀಡುವ ಪ್ರಕರಣಗಳು ತಮ್ಮ ಗಮನಕ್ಕೆ ಬಂದಿದ್ದು, ಇಂತಹ ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕು. ಭೂಮಾಫಿಯಾಗಳೊಂದಿಗೆ ರಾಜಕಾರಣಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಶಾಮೀಲಾಗಿರುವ ಆರೋಪಗಳ ಬಗ್ಗೆ ತನಿಖೆ ಮಾಡಬೇಕಾಗುತ್ತದೆ” ಎಂದು ತಿಳಿಸಿದರು.
ಕೆಲವು ಕ್ಷೇತ್ರಗಳಲ್ಲಿ ಅಕ್ರಮ ಮತದಾರರ ಸೇರ್ಪಡೆ
ಎಸ್ಐಆರ್ ಪ್ರಕ್ರಿಯೆಯಲ್ಲಿ ಬೆಂಗಳೂರಿನಲ್ಲಿ ಸುಮಾರು 45 ಲಕ್ಷ ಮತಗಳು ಕಡಿಮೆಯಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರುಗಳ ಸೇರ್ಪಡೆ ಮತ್ತು ತೆಗೆದುಹಾಕುವಿಕೆ ಕುರಿತು ಗಂಭೀರ ಪರಿಶೀಲನೆ ಅಗತ್ಯವಿದೆ. ಕೆಲವು ಕ್ಷೇತ್ರಗಳಲ್ಲಿ ಹೊಸದಾಗಿ 12ರಿಂದ 15 ಸಾವಿರ ಮತಗಳನ್ನು ಮೂಲ ದಾಖಲೆಗಳಿಲ್ಲದೆ ಸೇರ್ಪಡೆ ಮಾಡಲಾಗಿದೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಮತದಾರರ ಪಟ್ಟಿಯಲ್ಲಿ ಅನರ್ಹ ಸೇರ್ಪಡೆಗಳು ಇರಬಾರದು. ಅದೇ ರೀತಿ ಅರ್ಹ ಮತದಾರರ ಹೆಸರುಗಳು ಕೈಬಿಡಬಾರದು. ಪ್ರತಿಯೊಬ್ಬರೂ ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಬೇಕು. ಇದು ಕೇವಲ ಮತದಾನದ ಹಕ್ಕಲ್ಲ, ಸ್ವಾಭಿಮಾನದ ಹಕ್ಕು. ಕಾರ್ಯಕರ್ತರು ಮನೆಮನೆಗೆ ತೆರಳಿ ಮತದಾರರ ಪಟ್ಟಿಯನ್ನು ಪರಿಶೀಲಿಸಬೇಕು ಎಂದು ಕರೆ ನೀಡಿದರು.
“ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಜೊತೆಗೆ ಭೂಮಿ ಗ್ಯಾರಂಟಿಯನ್ನೂ ಜನರಿಗೆ ನೀಡಲಾಗಿದೆ. ಗೃಹಲಕ್ಷ್ಮಿ ಸೇರಿದಂತೆ ಕೆಲವು ಯೋಜನೆಗಳ ಫಲಾನುಭವಿಗಳ ಬ್ಯಾಂಕ್ ಖಾತೆ ಮತ್ತು ಇತರ ವಿವರಗಳಲ್ಲಿ ಸಮಸ್ಯೆಗಳಿರುವುದು ಸಮೀಕ್ಷೆಯಲ್ಲಿ ಕಂಡುಬಂದಿದೆ. ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪುವಂತೆ ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿ, ಸಮಸ್ಯೆಗಳನ್ನು ಸರಿಪಡಿಸಲಾಗುವುದು. ಭಾರತ್ ಜೋಡೋ ಯುವ ಸಂಘಗಳ ಮೂಲಕ ಯುವಶಕ್ತಿಯನ್ನು ಜಾಗೃತಗೊಳಿಸಬೇಕು” ಎಂದರು.
ಅಭಿವೃದ್ಧಿ ಕೆಲಸಗಳಿಗೆ ಜನರ ಸಹಕಾರ ಅಗತ್ಯ
“ರಾಜಕಾರಣ ಬರುತ್ತದೆ, ಹೋಗುತ್ತದೆ. ಆದರೆ ಅಭಿವೃದ್ಧಿ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ. ಯಾರು ಜನರಿಗಾಗಿ ದುಡಿಯುತ್ತಾರೋ ಅವರಿಗೆ ಜನರು ಗೌರವ ನೀಡುತ್ತಾರೆ ಎಂಬ ವಿಶ್ವಾಸವಿದೆ. ಬೆಂಗಳೂರು ನಗರದ ಗೌರವ ಮತ್ತು ಅಭಿವೃದ್ಧಿಯನ್ನು ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಸರ್ಕಾರ ಕೈಗೊಂಡಿರುವ ಯೋಜನೆಗಳನ್ನು ಜನರಿಗೆ ತಲುಪಿಸಿ, ಅವುಗಳ ಅನುಷ್ಠಾನಕ್ಕೆ ಸಹಕರಿಸಬೇಕು” ಎಂದು ಮನವಿ ಮಾಡಿದರು.
ಮಹದೇವಪುರದ ಗುಂಜೂರಿನಲ್ಲಿ ಮಾಧ್ಯಮಗಳಿಗೆ ಸಿಎಂ ಪ್ರತಿಕ್ರಿಯೆ ನೀಡಿದ ಸಿಎಂ ಅವರು, ಮೂರು ವರ್ಷಗಳಲ್ಲಿ ಬೆಂಗಳೂರಿಗೆ ಹೆಚ್ಚಿನ ಅನುದಾನ ನೀಡಲಾಗಿದೆಯೇ ಎಂದು ಕೇಳಿದಾಗ, ”ಅಂಕಿಅಂಶಗಳ ದಾಖಲೆ ಸಮೇತ ಉತ್ತರ ನೀಡುತ್ತಿದ್ದೇನೆ. ಬಿಜೆಪಿಯವರು ಯಾವುದಾದರೂ ದೊಡ್ಡ ಮೇಲ್ಸೆತುವೆಗಳನ್ನು ಕಟ್ಟಿದ್ದಾರೆಯೇ? ಟನಲ್ ಯೋಜನೆಗೆ ಪರ್ಯಾಯ ವ್ಯವಸ್ಥೆ ತಿಳಿಸಿ ಎಂದರೂ ಅವರ ಬಳಿ ಉತ್ತರವಿಲ್ಲ. ಮೇಲ್ಸೆತುವೆ ಮಾಡಿದರೆ ಮರ ಕಡಿಯುತ್ತೀರಾ ಎಂದು ಹೇಳುತ್ತಾರೆ. ಹಾಗಾದರೆ ಜನ ಎಲ್ಲಿ ಓಡಾಡಬೇಕು?” ಎಂದರು.
ಬೆಂಗಳೂರಿನಲ್ಲಿ 20 ಸಾವಿರ ಕೋಟಿ ರೂಪಾಯಿ ಮೊತ್ತದ ಕಾಮಗಾರಿ
ನಮ್ಮ ಸರ್ಕಾರ ನಗರದ ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೂ ಸರ್ಕಾರ ಆದ್ಯತೆ ನೀಡಿದೆ. ಹೊಸ ರಸ್ತೆಗಳ ನಿರ್ಮಾಣ ಸೇರಿದಂತೆ ಬೆಂಗಳೂರಿನಲ್ಲಿ ಹೆಚ್ಚುಕಡಿಮೆ 20 ಸಾವಿರ ಕೋಟಿ ರೂಪಾಯಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಪ್ರಸ್ತುತ ಪ್ರಗತಿಯಲ್ಲಿವೆ. ಮಳೆಗಾಲದಲ್ಲಿ ಪ್ರವಾಹ ಉಂಟಾಗದಂತೆ ನೀರುಗಾಲುವೆಗಳನ್ನು ಅಭಿವೃದ್ಧಿಪಡಿಸುವುದರ ಜತೆಗೆ ಸಂಚಾರ ದಟ್ಟಣೆ ನಿವಾರಣೆಗೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
500 ಕಿ.ಮೀ. ಮೆಟ್ರೋ ಜಾಲ ನಿರ್ಮಾಣ ಗುರಿ
ಮೆಟ್ರೋ ಅಭಿವೃದ್ಧಿ ಕುರಿತ ಪ್ರಶ್ನೆಗೆ, ಬೆಂಗಳೂರಿನ ಭವಿಷ್ಯದ ಸಂಚಾರ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಮೆಟ್ರೋ ಜಾಲವನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ. ನಗರದಲ್ಲಿ ಒಟ್ಟು 500 ಕಿ.ಮೀ. ಮೆಟ್ರೋ ಜಾಲ ನಿರ್ಮಿಸುವ ಉದ್ದೇಶವಿದೆ. ಈಗಾಗಲೇ ಸುಮಾರು 300 ಕಿಮೀ ಮಾರ್ಗದ ಪ್ರಸ್ತಾವನೆಗಳು ಅನುಮೋದನೆಯ ವಿವಿಧ ಹಂತದಲ್ಲಿವೆ. ಉಳಿದ ಮಾರ್ಗಗಳಿಗೂ ಹಂತ ಹಂತವಾಗಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
