ಭಾರತದ ಕೃತಕ ಬುದ್ಧಿಮತ್ತೆ ರಾಜಧಾನಿ ಬೆಂಗಳೂರು
ಬೆಂಗಳೂರು: ʼಕರ್ನಾಟಕದ ಉದ್ಯಮಶೀಲತೆ ಮತ್ತು ನಾವೀನ್ಯತೆಯ ಪಯಣಕ್ಕೆ ಹೊಸ ದಿಕ್ಕು ನೀಡುವ ಆಶಯವನ್ನು ಬೆಂಗಳೂರು ನಾವೀನ್ಯತೆ ವರದಿ 2026 ವ್ಯಕ್ತಪಡಿಸಿದ್ದು, ಜಾಗತಿಕ ತಂತ್ರಜ್ಞಾನ ಕಂಪನಿಗಳನ್ನು ರಾಜ್ಯದ ವಿವಿಧ ನಗರಗಳಿಗೆ ಆಕರ್ಷಿಸುವ ಮೂಲಕ, ಬೆಂಗಳೂರು ಮಾತ್ರವಲ್ಲದೆ ಕಲಬುರಗಿ, ಹುಬ್ಬಳ್ಳಿ ಮತ್ತು ಮಂಗಳೂರಿನಂತಹ ನಗರಗಳನ್ನೂ ಭವಿಷ್ಯದ ತಂತ್ರಜ್ಞಾನ ಕೇಂದ್ರಗಳನ್ನಾಗಿ ರೂಪಿಸುವ ಗುರಿಯನ್ನು ಇದು ಹೊಂದಿದೆʼ ಎಂದು ಗೃಹ, ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಎಂ. ಖರ್ಗೆ ಅವರು ಹೇಳಿದ್ದಾರೆ.
ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ನಡೆದ ಬೆಂಗಳೂರು ಟೆಕ್ ಶೃಂಗಸಭೆ 2026ರ ಎರಡನೇ ದಿನದ ಕಾರ್ಯಕ್ರಮದಲ್ಲಿ ಬೆಂಗಳೂರು ನಾವೀನ್ಯತೆ ವರದಿ- 2026 ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು, ಉದ್ಯಮ ಕ್ಷೇತ್ರದ ಪ್ರಮುಖರು, ಹೂಡಿಕೆದಾರರು ಹಾಗೂ ನವೋದ್ಯಮ ಸಂಸ್ಥಾಪಕರು ಉಪಸ್ಥಿತರಿದ್ದರು.
ಕರ್ನಾಟಕ ಡಿಜಿಟಲ್ ಆರ್ಥಿಕತೆ ಮಿಷನ್ (ಕೆಡಿಇಎಂ) ಮತ್ತು 3ಒನ್4 (3one4 ) ಕ್ಯಾಪಿಟಲ್ ಜಂಟಿಯಾಗಿ, ಟ್ರಾಕ್ಸನ್ನ ದತ್ತಾಂಶಗಳ ನೆರವಿನಿಂದ ಈ ವರದಿಯನ್ನು ಸಿದ್ಧಪಡಿಸಿವೆ.
ದೇಶಿ ಸ್ಟಾರ್ಟ್ಅಪ್ ಮತ್ತು ಮಾರುಕಟ್ಟೆ ದತ್ತಾಂಶಗಳನ್ನು ಆಧರಿಸಿ ಸಿದ್ಧಪಡಿಸಿರುವ ಈ ವರದಿಯು ಬೆಂಗಳೂರಿನ ಪ್ರತಿಭಾ ಸಂಪನ್ಮೂಲ, ಹೂಡಿಕೆ, ಯುನಿಕಾರ್ನ್ ಕಂಪನಿಗಳು, ನೀತಿಗಳು, ಬೆಂಗಳೂರು ಆಚೆಗಿನ ಉದ್ಯಮ ಸಮೂಹಗಳು ಹಾಗೂ ಆರು ಪ್ರಮುಖ ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳ ಬೆಳವಣಿಗೆಯನ್ನು ವಿಶ್ಲೇಷಿಸಿದೆ. ಈ ವರದಿಯಲ್ಲಿನ ದತ್ತಾಂಶಗಳನ್ನು ಸೆಪ್ಟೆಂಬರ್ 23, 2026ರವರೆಗೆ ನವೀಕರಿಸಲಾಗಿದೆ.
ವರದಿಯ ಮುಖ್ಯಾಂಶಗಳು:
ಡೀಪ್ಟೆಕ್ ಮತ್ತು ಎಐ: 2010ರಿಂದ ಬೆಂಗಳೂರಿನಲ್ಲಿ ಆರಂಭವಾದ 1,556 ಡೀಪ್ಟೆಕ್ ಸ್ಟಾರ್ಟ್ಅಪ್ಗಳ ಪೈಕಿ 1,319 ಸಕ್ರಿಯವಾಗಿದ್ದು, ಹೂಡಿಕೆ ಪಡೆದಿವೆ. ಇವು ಒಟ್ಟಾರೆಯಾಗಿ 3.77 ಶತಕೋಟಿ ಡಾಲರ್ ಹೂಡಿಕೆ ಸಂಗ್ರಹಿಸಿವೆ. 799 ಸ್ವದೇಶಿ ಎಐ ಸ್ಟಾರ್ಟ್ಅಪ್ಗಳ ಪೈಕಿ 764 ಸಕ್ರಿಯವಾಗಿದ್ದು, ಹೂಡಿಕೆ ಪಡೆದಿವೆ. ಭಾರತದ ಸ್ವದೇಶಿ ಎಐ ಸ್ಟಾರ್ಟ್ಅಪ್ಗಳಿಗೆ ದೊರೆತ ಒಟ್ಟು ಹೂಡಿಕೆಯಲ್ಲಿ ಬೆಂಗಳೂರಿನ ಪಾಲು ಶೇಕಡ 36.3ರಷ್ಟಿದೆ. ಇದು ದೇಶದ ಇತರ ನಗರಗಳಿಗಿಂತ ಹೆಚ್ಚಾಗಿದೆ. 2023ರಿಂದ ದೇಶದಲ್ಲಿ ಸೃಷ್ಟಿಯಾಗಿರುವ ಎಐ ಮತ್ತು ಡೀಪ್ಟೆಕ್ ಯುನಿಕಾರ್ನ್ ಕಂಪನಿಗಳ ಪೈಕಿ ಶೇಕಡ 71ರಷ್ಟು ಬೆಂಗಳೂರಿನಲ್ಲಿವೆ.
ಹೂಡಿಕೆ ಬಂಡವಾಳ: 2010ರಿಂದ ಬೆಂಗಳೂರಿನ ಸ್ಟಾರ್ಟ್ಅಪ್ಗಳು ಸುಮಾರು 85 ಶತಕೋಟಿ ಡಾಲರ್ ಹೂಡಿಕೆ ಸಂಗ್ರಹಿಸಿವೆ. ಇದು ಭಾರತದ ಸ್ಟಾರ್ಟ್ಅಪ್ಗಳು ಪಡೆದಿರುವ ಒಟ್ಟು ವೆಂಚರ್ ಕ್ಯಾಪಿಟಲ್ ಹೂಡಿಕೆಯ ಶೇಕಡ 47ರಷ್ಟಿದೆ. ಈ ಪೈಕಿ ಕಳೆದ ಹತ್ತು ವರ್ಷಗಳಲ್ಲಿ 76.5 ಶತಕೋಟಿ ಡಾಲರ್ ಹೂಡಿಕೆ ಬಂದಿದೆ. 2010ರಿಂದ ಆರಂಭವಾಗಿರುವ 3,810 ಸಕ್ರಿಯ ಹಾಗೂ ಹೂಡಿಕೆ ಪಡೆದ ಸ್ಟಾರ್ಟ್ಅಪ್ಗಳು ಬೆಂಗಳೂರಿನಲ್ಲಿವೆ. ಇದು ಮುಂಬೈನಲ್ಲಿರುವ 1,982 ಸ್ಟಾರ್ಟ್ಅಪ್ಗಳಿಗಿಂತ ಸುಮಾರು ಎರಡು ಪಟ್ಟು ಹೆಚ್ಚಾಗಿದೆ.
ಮಹಿಳಾ ಉದ್ಯಮಿಗಳು: ಭಾರತದ ಡೀಪ್ಟೆಕ್ ಮತ್ತು ಸ್ವದೇಶಿ ಕೃತಕ ಬುದ್ಧಿಮತ್ತೆಯ ಎಐ ಕ್ಷೇತ್ರಗಳಲ್ಲಿನ ಸಕ್ರಿಯ ಹಾಗೂ ಹೂಡಿಕೆ ಪಡೆದ ಮಹಿಳಾ ನೇತೃತ್ವದ ಸ್ಟಾರ್ಟ್ಅಪ್ಗಳ ಪೈಕಿ ಶೇಕಡ 30ರಷ್ಟು ಬೆಂಗಳೂರಿನಲ್ಲಿ ಆರಂಭವಾಗಿವೆ. ಈ ಸಂಸ್ಥೆಗಳು ಒಟ್ಟಾರೆಯಾಗಿ 323.65 ದಶಲಕ್ಷ ಡಾಲರ್ ಹೂಡಿಕೆ ಸಂಗ್ರಹಿಸಿವೆ.
ಐಪಿಒ ಮತ್ತು ನಿರ್ಗಮಿಸುವ ಹಂತ: ನವೆಂಬರ್ 2024ರಿಂದ ಬೆಂಗಳೂರಿನೊಂದಿಗೆ ಸಂಬಂಧ ಹೊಂದಿರುವ 16 ಕಂಪನಿಗಳು ಷೇರುಪೇಟೆಯಲ್ಲಿ ನೋಂದಣಿಯಾಗಿವೆ. ಷೇರುಪೇಟೆಯಲ್ಲಿ ನೋಂದಣಿಯಾದ ಸಂದರ್ಭದಲ್ಲಿ ಈ ಕಂಪನಿಗಳ ಒಟ್ಟು ಮೌಲ್ಯ ಸುಮಾರು 42 ಶತಕೋಟಿ ಡಾಲರ್ ಆಗಿತ್ತು. ಈ ಅವಧಿಯಲ್ಲಿ ಭಾರತದಲ್ಲಿ ಹೂಡಿಕೆ ಪಡೆದ ಕಂಪನಿಗಳ ಒಟ್ಟು 226 ಐಪಿಒಗಳ ಪೈಕಿ 33 ಬೆಂಗಳೂರಿನ ಕಂಪನಿಗಳದ್ದಾಗಿವೆ. ಕರ್ನಾಟಕದಲ್ಲಿ ಪ್ರಧಾನ ಕಚೇರಿ ಹೊಂದಿರುವ ಕಂಪನಿಗಳ ಐಪಿಒಗಳ ಸಂಖ್ಯೆ 37ರಷ್ಟಿದ್ದು, ಇದು ಒಟ್ಟು ಐಪಿಒಗಳ ಸುಮಾರು ಶೇಕಡ 16ರಷ್ಟಿದೆ. ಈ ಉದ್ಯಮ ವಲಯದ ಸ್ಟಾರ್ಟ್ಅಪ್ಗಳು ಆರಂಭವಾದ ದಿನದಿಂದ ಹೂಡಿಕೆದಾರರಿಗೆ ಷೇರು ಮಾರಾಟ ಮಾಡುವುದು ಅಥವಾ ಕಂಪನಿಯನ್ನು ಮತ್ತೊಂದು ಸಂಸ್ಥೆಗೆ ಮಾರಾಟ ಮಾಡುವಂತಹ ನಿರ್ಗಮನ ಹಂತ (Exit) ತಲುಪಲು ಸರಾಸರಿ 8.2 ವರ್ಷಗಳನ್ನು ತೆಗೆದುಕೊಳ್ಳುತ್ತವೆ. ಜಾಗತಿಕ ಸರಾಸರಿ 11.1 ವರ್ಷಗಳಾಗಿದೆ.
ಯುನಿಕಾರ್ನ್ ಕಂಪನಿಗಳು: ಬೆಂಗಳೂರಿನ 57 ಯುನಿಕಾರ್ನ್ ಕಂಪನಿಗಳ ಒಟ್ಟು ಮೌಲ್ಯ 211 ಶತಕೋಟಿ ಡಾಲರ್ ಆಗಿದೆ. ಇದು ಭಾರತದ 131 ಯುನಿಕಾರ್ನ್ ಕಂಪನಿಗಳ ಪೈಕಿ ಶೇಕಡ 44ರಷ್ಟಿದ್ದು, ಅವುಗಳ ಒಟ್ಟು ಮೌಲ್ಯದ ಶೇಕಡ 55.3ರಷ್ಟಿದೆ. ಈ ಮೂಲಕ ಬೆಂಗಳೂರು ವಿಶ್ವದ ಐದನೇ ಅತಿದೊಡ್ಡ ಯುನಿಕಾರ್ನ್ ಕೇಂದ್ರವಾಗಿ ಗುರುತಿಸಿಕೊಂಡಿದೆ. ಅಮೆರಿಕ, ಯುರೋಪ್ ಮತ್ತು ಚೀನಾ ಹೊರತುಪಡಿಸಿದರೆ ವಿಶ್ವದಲ್ಲೇ ಅತಿದೊಡ್ಡ ಯುನಿಕಾರ್ನ್ ಕೇಂದ್ರವಾಗಿದೆ. 2020ರಿಂದ ಭಾರತದಲ್ಲಿ ಸೃಷ್ಟಿಯಾಗಿರುವ 100 ಯುನಿಕಾರ್ನ್ ಕಂಪನಿಗಳ ಪೈಕಿ 46 ಬೆಂಗಳೂರಿನಲ್ಲಿವೆ. ಇತರ ಭಾರತೀಯ ಉದ್ಯಮ ಕೇಂದ್ರಗಳಲ್ಲಿ ಯುನಿಕಾರ್ನ್ ಸ್ಥಾನ ತಲುಪಲು ಏಳರಿಂದ 11 ವರ್ಷಗಳು ಬೇಕಾಗುತ್ತಿದ್ದರೆ, ಬೆಂಗಳೂರಿನ ಸ್ಟಾರ್ಟ್ಅಪ್ಗಳು ಸುಮಾರು ಆರು ವರ್ಷಗಳಲ್ಲೇ ಈ ಸಾಧನೆ ಮಾಡುತ್ತಿವೆ.
ಶೀಘ್ರದಲ್ಲೇ ಯುನಿಕಾರ್ನ್ ಆಗಲಿರುವ ಕಂಪನಿಗಳು (ಸೂನಿಕಾರ್ನ್): ಭಾರತದ 589 ಸೂನಿಕಾರ್ನ್ ಕಂಪನಿಗಳ ಪೈಕಿ 212 ಬೆಂಗಳೂರಿನಲ್ಲಿವೆ. ಇದು ಒಟ್ಟು ಕಂಪನಿಗಳ ಶೇಕಡ 36ರಷ್ಟಾಗಿದೆ. ದೆಹಲಿ ಎನ್ಸಿಆರ್ನಲ್ಲಿರುವ 134 ಮತ್ತು ಮುಂಬೈನಲ್ಲಿರುವ 121 ಕಂಪನಿಗಳಿಗಿಂತ ಬೆಂಗಳೂರಿನ ಸಂಖ್ಯೆ ಹೆಚ್ಚಾಗಿದೆ. ಇತರ ನಗರಗಳಿಗಿಂತ ವೇಗವಾಗಿ, ಬೆಂಗಳೂರಿನ ಸ್ಟಾರ್ಟ್ಅಪ್ಗಳು ಸುಮಾರು ಐದು ವರ್ಷಗಳಲ್ಲಿ ಸೂನಿಕಾರ್ನ್ ಸ್ಥಾನ ತಲುಪುತ್ತಿವೆ. ಭಾರತದ ಸೂನಿಕಾರ್ನ್ ಕಂಪನಿಗಳು ಸಂಗ್ರಹಿಸಿರುವ ಒಟ್ಟು ಹೂಡಿಕೆಯ ಪೈಕಿ ಸುಮಾರು ಶೇಕಡ 38ರಷ್ಟು ಬೆಂಗಳೂರಿನ ಕಂಪನಿಗಳಿಗೆ ದೊರೆತಿದೆ.
ಹೂಡಿಕೆದಾರರು ಮತ್ತು ದೀರ್ಘಾವಧಿ ಹೂಡಿಕೆ ಬಂಡವಾಳ: ನವೋದ್ಯಮಗಳಲ್ಲಿ ಬಂಡವಾಳ ಹೂಡಿಕೆ ಮಾಡುವ 300 ವೆಂಚರ್ ಕ್ಯಾಪಿಟಲ್ ಸಂಸ್ಥೆಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರಿನಲ್ಲಿ ಭಾರತದ ಒಟ್ಟು ಕೆಟಗರಿ-1 ಪರ್ಯಾಯ ಹೂಡಿಕೆ ನಿಧಿಗಳಲ್ಲಿ (ಎಐಎಫ್) ಶೇಕಡ 21ರಷ್ಟು ಅಂದರೆ 75 ನಿಧಿಗಳಿವೆ. ಈ ಸಂಖ್ಯೆಯಲ್ಲಿ ಮುಂಬೈ ನಂತರ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಆರಂಭಿಕ ಹಂತದ ಹೂಡಿಕೆಯಲ್ಲಿ ಸರಾಸರಿ ಮೂಲ ನಿಧಿ ಹೂಡಿಕೆ 810,000 ಡಾಲರ್ ಹಾಗೂ ಸರಣಿ-ಎ ಹಂತದ ಹೂಡಿಕೆ 5.9 ದಶಲಕ್ಷ ಡಾಲರ್ ಆಗಿದೆ.
ದೇಶೀಯ ಹೂಡಿಕೆ ಬಂಡವಾಳವೂ ಹೆಚ್ಚುತ್ತಿದೆ ಕೆಟಗರಿ-1 ಮತ್ತು ಕೆಟಗರಿ-2 ‘ಎಐಎಫ್’ಗಳು ಸಂಗ್ರಹಿಸುತ್ತಿರುವ ಒಟ್ಟು ಬಂಡವಾಳದ ಶೇಕಡ 52ರಷ್ಟು ಈಗ ದೇಶೀಯ ಹೂಡಿಕೆದಾರರಿಂದ ಬರುತ್ತಿದೆ. ಬೆಂಗಳೂರಿನ 10 ಕುಟುಂಬ ಆಧಾರಿತ ಹೂಡಿಕೆ ಸಂಸ್ಥೆಗಳು ಡೀಪ್ಟೆಕ್ ಕ್ಷೇತ್ರದಲ್ಲಿ ಸಕ್ರಿಯವಾಗಿವೆ. ಇವು ಡೀಪ್ಟೆಕ್ ಕ್ಷೇತ್ರದ 57 ಮತ್ತು ಸ್ವದೇಶಿ ಎಐ ಕ್ಷೇತ್ರದ 45 ಷೇರು ಹೂಡಿಕೆ ಸುತ್ತುಗಳಲ್ಲಿ ಭಾಗವಹಿಸಿವೆ.
ಎಲಿವೇಟ್ ಮತ್ತು ಬೆಂಗಳೂರು ಆಚೆಗಿನ ಉದ್ಯಮ ಬೆಳವಣಿಗೆ: ರಾಜ್ಯ ಸರ್ಕಾರದ ಎಲೆವೇಟ್ (ELEVATE) ಅನುದಾನ ಕಾರ್ಯಕ್ರಮದಡಿ 2017ರಿಂದ ಈವರೆಗೆ 1,479 ಸ್ಟಾರ್ಟ್ಅಪ್ಗಳಿಗೆ ಒಟ್ಟು ₹393.58 ಕೋಟಿ ನೆರವು ನೀಡಲಾಗಿದೆ. ಇವುಗಳ ಪೈಕಿ ಶೇಕಡ 38.6ರಷ್ಟು ಸ್ಟಾರ್ಟ್ಅಪ್ಗಳು ಬೆಂಗಳೂರಿನ ಆಚೆಗಿನ ಪ್ರದೇಶಗಳಲ್ಲಿ ಸ್ಥಾಪನೆಯಾಗಿವೆ.
ಬೆಂಗಳೂರು ಆಚೆಗಿನ ಉದ್ಯಮ ಸಮೂಹಗಳ ಅಭಿವೃದ್ಧಿಗಾಗಿ ₹75 ಕೋಟಿ ಮೊತ್ತದ ಕ್ಲಸ್ಟರ್ ಸೀಡ್ ಫಂಡ್ ಸ್ಥಾಪಿಸಲಾಗಿದ್ದು, ಇದನ್ನು ಭಾರತದ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ)ಯಲ್ಲಿ ನೋಂದಾಯಿತ ಕೆಟಗರಿ-1 ‘ಎಐಎಫ್’ ಆಗಿ ರೂಪಿಸಲಾಗಿದೆ. ಮೈಸೂರು, ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಜಾಗತಿಕ ತಂತ್ರಜ್ಞಾನ ಕೇಂದ್ರಗಳು ಸ್ಥಾಪನೆಯಾಗುತ್ತಿವೆ. ಐದು ವರ್ಷಗಳಲ್ಲಿ ಐದು ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯೊಂದಿಗೆ ₹1,000 ಕೋಟಿ ಮೊತ್ತದ ಸ್ಥಳೀಯ ಆರ್ಥಿಕತೆ ವೇಗವರ್ಧಕ ಕಾರ್ಯಕ್ರಮ (ಎಲ್ ಇಎಪಿ ) ಜಾರಿಗೊಳಿಸಲಾಗುತ್ತಿದೆ.
ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಸಚಿವ ಪ್ರಿಯಾಂಕ್ ಎಂ. ಖರ್ಗೆ ಅವರು ‘ಕರ್ನಾಟಕದ ಉದ್ಯಮಶೀಲರು ಈವರೆಗೆ ಸಾಧಿಸಿರುವ ಪ್ರಗತಿ ಮತ್ತು ಮುಂದಿನ ದಿನಗಳಲ್ಲಿ ಅವರು ಸಾಧಿಸಬಹುದಾದ ಬೆಳವಣಿಗೆಯ ಚಿತ್ರಣವನ್ನು ಬೆಂಗಳೂರು ನಾವೀನ್ಯತೆ ವರದಿ 2026 ನೀಡುತ್ತದೆ. ಈಗ ನಮ್ಮ ಮುಂದಿರುವ ಪ್ರಮುಖ ಕೆಲಸವೆಂದರೆ, ಜಾಗತಿಕ ಮಟ್ಟದ ಎಐ, ಕ್ವಾಂಟಮ್ ಅಥವಾ ಸೆಮಿಕಂಡಕ್ಟರ್ ಕಂಪನಿಗಳು ಕಲಬುರಗಿ, ಹುಬ್ಬಳ್ಳಿ ಅಥವಾ ಮಂಗಳೂರಿನಲ್ಲಿಯೂ ಯಶಸ್ವಿಯಾಗಿ ಬೆಳೆಯಲು ಅಗತ್ಯವಾದ ಅವಕಾಶಗಳನ್ನು ಸೃಷ್ಟಿಸುವುದು. ಡೀಪ್ಟೆಕ್ ಕ್ಷೇತ್ರದಲ್ಲಿ ತಾಳ್ಮೆ ಮತ್ತು ದೀರ್ಘಾವಧಿಯ ಬದ್ಧತೆ ಅಗತ್ಯ. ಕರ್ನಾಟಕ ಈ ದಾರಿಯಲ್ಲಿ ನಿರಂತರವಾಗಿ ಮುನ್ನಡೆಯಲಿದೆ’ ಎಂದು ಹೇಳಿದರು.
ಕರ್ನಾಟಕ ಸರ್ಕಾರದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಮಂಜುಳಾ ಎನ್. ಅವರು ಮಾತನಾಡಿ, “ಎಲೆವೇಟ್ ಅನುದಾನದಿಂದ ಹಿಡಿದು ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆ ಮತ್ತು ಹೊಸ ಜಾಗತಿಕ ತಂತ್ರಜ್ಞಾನ ಕೇಂದ್ರಗಳವರೆಗೆ, ಈ ವರದಿಯ ಪ್ರತಿಯೊಂದು ಅಂಕಿ-ಅಂಶವೂ ಹಲವು ವರ್ಷಗಳ ನಿರಂತರ ಪ್ರಯತ್ನದ ಫಲಿತಾಂಶವನ್ನು ಪ್ರತಿಬಿಂಬಿಸುತ್ತದೆ. ಎಲೆವೇಟ್ ಕಾರ್ಯಕ್ರಮದಡಿ 1,479 ಸ್ಟಾರ್ಟ್ಅಪ್ಗಳಿಗೆ ನೆರವು ನೀಡಲಾಗಿದೆ. ನಮ್ಮ 31 ಜಿಲ್ಲೆಗಳ ಪೈಕಿ 30 ಜಿಲ್ಲೆಗಳ ಸ್ಟಾರ್ಟ್ಅಪ್ಗಳು ಈ ಕಾರ್ಯಕ್ರಮದಲ್ಲಿ ಯಶಸ್ಸು ಸಾಧಿಸಿವೆ. ಆರಂಭಿಕ ಹಂತದಲ್ಲಿ ನೀಡುವ ನೆರವನ್ನು ದೊಡ್ಡ ಮಟ್ಟದ ಉದ್ಯಮ ಬೆಳವಣಿಗೆಯಾಗಿ ಪರಿವರ್ತಿಸುವುದು ಈಗ ಇಲಾಖೆಯ ಪ್ರಮುಖ ಗುರಿಯಾಗಿದೆ. ಇದಕ್ಕಾಗಿ ಸರ್ಕಾರವೇ ಮೊದಲ ಗ್ರಾಹಕನಾಗಿ ಕಾರ್ಯನಿರ್ವಹಿಸುವುದು, ಡೀಪ್ಟೆಕ್ ಕ್ಷೇತ್ರಕ್ಕೆ ದೀರ್ಘಾವಧಿಯ ಹೂಡಿಕೆ ಬಂಡವಾಳ ಒದಗಿಸುವುದು ಹಾಗೂ ಸಂಶೋಧನಾ ಪ್ರಯೋಗಾಲಯಗಳಲ್ಲಿ ನಡೆಯುವ ಸಂಶೋಧನೆಗಳನ್ನು ಮಾರುಕಟ್ಟೆಗೆ ತಲುಪಿಸುವುದಕ್ಕೆ ಆದ್ಯತೆ ನೀಡಲಾಗುತ್ತಿದೆ” ಎಂದು ಹೇಳಿದರು.
ಕೆಡಿಇಎಂ ಅಧ್ಯಕ್ಷ ಬಿ.ವಿ. ನಾಯ್ಡು ಅವರು ಮಾತನಾಡಿ, “ಬೆಂಗಳೂರು ನಾವೀನ್ಯತೆ ವರದಿಯು ಹೂಡಿಕೆದಾರರು, ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿ) ಮತ್ತು ಉದ್ಯಮ ಸಂಸ್ಥಾಪಕರಿಗೆ, ಇತರ ಉದ್ಯಮ ಸಮೂಹಗಳವರೆಗೆ ಕರ್ನಾಟಕದಲ್ಲಿರುವ ಅವಕಾಶಗಳ ಬಗ್ಗೆ ದತ್ತಾಂಶ ಆಧಾರಿತ ಸಮಗ್ರ ಚಿತ್ರಣ ನೀಡುತ್ತದೆ.
ಬೆಂಗಳೂರು ಆಚೆಗಿನ ಉದ್ಯಮ ಅಭಿವೃದ್ಧಿ ಮಿಷನ್, ಬ್ಲೂ (ಬಿಎಲ್ಇಯು) ಹೂಡಿಕೆದಾರರ ಸಮಾವೇಶಗಳು ಮತ್ತು ಕ್ಲಸ್ಟರ್ ಸೀಡ್ ಫಂಡ್ ಮೂಲಕ ರಾಜ್ಯದ ವಿವಿಧ ಭಾಗಗಳಲ್ಲಿರುವ ಪ್ರತಿಭೆ, ಹೂಡಿಕೆ ಬಂಡವಾಳ ಮತ್ತು ಕಂಪನಿಗಳನ್ನು ಸಂಪರ್ಕಿಸುವ ಕಾರ್ಯವನ್ನು ಕೆಡಿಇಎಂ ಮುಂದುವರಿಸಲಿದೆ. ಉದ್ಯಮ ಸಂಸ್ಥೆಗಳು ಮತ್ತು ಹೂಡಿಕೆದಾರರು ನಮ್ಮೊಂದಿಗೆ ಕೈಜೋಡಿಸಿ ರಾಜ್ಯದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕೆಂದು ಆಹ್ವಾನಿಸುತ್ತೇವೆ” ಎಂದು ಹೇಳಿದರು.
ಕರ್ನಾಟಕ ಸರ್ಕಾರದ ಸ್ಟಾರ್ಟ್ಅಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಅವರು ಮಾತನಾಡಿ, “ಬೆಂಗಳೂರಿನ ಸ್ಟಾರ್ಟ್ಅಪ್ಗಳು ಸುಮಾರು ಆರು ವರ್ಷಗಳಲ್ಲಿ ಯುನಿಕಾರ್ನ್ ಸ್ಥಾನ ತಲುಪುತ್ತಿವೆ. ಆರಂಭದಿಂದ ನಿರ್ಗಮಿಸುವ ಹಂತ ತಲುಪಲು ಸುಮಾರು 8.2 ವರ್ಷಗಳನ್ನು ತೆಗೆದುಕೊಳ್ಳುತ್ತವೆ. ಇದು ಜಾಗತಿಕ ಸರಾಸರಿಯಾದ 11.1 ವರ್ಷಗಳಿಗಿಂತ ಬಹಳ ಕಡಿಮೆ ಅವಧಿಯಾಗಿದೆ. ‘ಎಐಎಫ್’ಗಳ ಒಟ್ಟು ಹೂಡಿಕೆ ಬಂಡವಾಳದ ಶೇಕಡ 52ರಷ್ಟು ಈಗ ದೇಶೀಯ ಹೂಡಿಕೆದಾರರಿಂದ ಬರುತ್ತಿದೆ. ಡೀಪ್ಟೆಕ್ ಕ್ಷೇತ್ರಕ್ಕೆ ಅಗತ್ಯವಿರುವ ದೀರ್ಘಾವಧಿಯ ಬಂಡವಾಳ ಇದಾಗಿದೆ. ಭಾರತದ ಸ್ವದೇಶಿ ಎಐ ಸ್ಟಾರ್ಟ್ಅಪ್ಗಳ ಒಟ್ಟು ಹೂಡಿಕೆಯಲ್ಲಿ ಈಗಾಗಲೇ ಶೇಕಡ 36.3ರಷ್ಟು ಬೆಂಗಳೂರಿಗೆ ಲಭಿಸಿದೆ. ಕರ್ನಾಟಕದಿಂದ ಜಗತ್ತಿಗೆ ಅಗತ್ಯವಿರುವ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಉದ್ಯಮಶೀಲರ ಪಾಲಿಗೆ ಮುಂದಿನ ದಶಕ ಮಹತ್ವದ್ದಾಗಿರಲಿದೆ” ಎಂದು ಹೇಳಿದರು.
ಬೆಂಗಳೂರು ನಾವೀನ್ಯತೆ ವರದಿ 2026* ಅನ್ನು https://karnatakadigital.in/resource/– ನಲ್ಲಿ ಪಡೆಯಬಹುದು.
ಕರ್ನಾಟಕ ಡಿಜಿಟಲ್ ಆರ್ಥಿಕತೆ ಮಿಷನ್ (ಕೆಡಿಇಎಂ) ಕುರಿತು
ಕರ್ನಾಟಕ ಡಿಜಿಟಲ್ ಆರ್ಥಿಕತೆಯ ಬೆಳವಣಿಗೆಯನ್ನು ವೇಗಗೊಳಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮತ್ತು ಉದ್ಯಮ ವಲಯ ಜಂಟಿಯಾಗಿ ಕರ್ನಾಟಕ ಡಿಜಿಟಲ್ ಆರ್ಥಿಕತೆ ಮಿಷನ್ (ಕೆಡಿಇಎಂ) ಅನ್ನು ಸ್ಥಾಪಿಸಿವೆ.
ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಸಹಯೋಗದೊಂದಿಗೆ ಕಾರ್ಯನಿರ್ವಹಿಸುವ ಕೆಡಿಇಎಂ, ಮಾಹಿತಿ ತಂತ್ರಜ್ಞಾನ ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿ), ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್ (ಇಎಸ್ಡಿಎಂ), ಸ್ಟಾರ್ಟ್ಅಪ್ಗಳು ಮತ್ತು ನಾವೀನ್ಯತೆ, ಬೆಂಗಳೂರು ಹೊರಗಿನ ಉದ್ಯಮ ಅಭಿವೃದ್ಧಿ ಹಾಗೂ ಪ್ರತಿಭಾ ಸಂಪನ್ಮೂಲ ವೇಗವರ್ಧನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಮುನ್ನಡೆಸುತ್ತಿದೆ.
-ದೇಶದ ಸ್ವದೇಶಿ ಎಐ ನವೋದ್ಯಮಗಳಿಗೆ ದೊರೆತಿರುವ ಒಟ್ಟು ಹೂಡಿಕೆಯಲ್ಲಿ ಬೆಂಗಳೂರಿನ ಪಾಲು ಶೇಕಡ 36.3ರಷ್ಟಿದೆ. ಇದು ದೇಶದ ಇತರ ನಗರಗಳಿಗಿಂತ ಹೆಚ್ಚಾಗಿದೆ. 2023ರಿಂದ ಸೃಷ್ಟಿಯಾಗಿರುವ ಭಾರತದ ಎಐ ಮತ್ತು ಡೀಪ್ಟೆಕ್ ಯುನಿಕಾರ್ನ್ ಕಂಪನಿಗಳ ಪೈಕಿ ಶೇಕಡ 71ರಷ್ಟು ಬೆಂಗಳೂರಿನಲ್ಲಿವೆ.
-ಡೀಪ್ಟೆಕ್ ಕ್ಷೇತ್ರದಲ್ಲಿ ಬೆಂಗಳೂರಿನ ಸದೃಢ ಬೆಳವಣಿಗೆ: 2010ರಿಂದ ಬೆಂಗಳೂರಿನಲ್ಲಿ ಆರಂಭವಾದ 1,556 ಡೀಪ್ಟೆಕ್ ಸ್ಟಾರ್ಟ್ಅಪ್ಗಳ ಪೈಕಿ 1,319 ಸಕ್ರಿಯವಾಗಿದ್ದು, ಹೂಡಿಕೆಯನ್ನೂ ಪಡೆದಿವೆ. ಇವು ಒಟ್ಟಾರೆಯಾಗಿ 3.77 ಶತಕೋಟಿ ಡಾಲರ್ ಹೂಡಿಕೆ ಸಂಗ್ರಹಿಸಿವೆ. ನಗರದ 799 ಸ್ವದೇಶಿ ಎಐ ಸ್ಟಾರ್ಟ್ಅಪ್ಗಳ ಪೈಕಿ 764 ಸಕ್ರಿಯವಾಗಿದ್ದು, ಹೂಡಿಕೆ ಪಡೆದಿವೆ.
