ಸಮಗ್ರ ಸುದ್ದಿ

ಎ.ಐ ಬಳಕೆಯಿಂದ ಕೃಷಿಯಲ್ಲಿ ಮಹತ್ವದ ಪರಿವರ್ತನೆ|ತೋಟಗಾರಿಕೆ ಉತ್ಪನ್ನಗಳ ರಫ್ತು 15 ಪಟ್ಟು ಹೆಚ್ಚಿಸಲು ಅವಕಾಶ

Share

ಬೆಂಗಳೂರು: ಬರ ನಿರ್ವಹಣೆ, ನೀರಿನ ನಿರ್ವಹಣೆ, ಕೀಟಬಾಧೆ ಪತ್ತೆ ಹಾಗೂ ನಿರ್ವಹಣೆ, ಇಳುವರಿ ಅಂದಾಜು, ಸ್ಥಳೀಯ ಮಳೆ ಮುನ್ಸೂಚನೆ ಸೇರಿದಂತೆ ಕೃಷಿ ಚಟುವಟಿಕೆಯ ವಿವಿಧ ವಿಷಯಗಳಲ್ಲಿ ಕೃತಕ ಬುದ್ಧಿಮತ್ತೆ ಸೇರಿದಂತೆ ಆಧುನಿಕ ತಂತ್ರಜ್ಞಾನ ಬಳಕೆ ಕ್ರಾಂತಿಕಾರಕ ಬದಲಾವಣೆ ತರಲಿದೆ ಎಂದು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಉಪ ವ್ಯವಸ್ಥಾಪಕ ನಿರ್ದೇಶಕ ಗೋವರ್ಧನ್ ರಾವತ್ ಹೇಳಿದ್ದಾರೆ.

‘ಬೆಂಗಳೂರು ಟೆಕ್ ಸಮ್ಮಿಟ್’ನಲ್ಲಿ ಗುರುವಾರ ‘ಎ.ಐ. ಮೂಲಕ ಕೃಷಿ ಪರಿವರ್ತನೆ’ ವಿಚಾರ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತ್ ವಿಸ್ತಾರ್’ ಯೋಜನೆ ಮೂಲಕ ಕೇಂದ್ರ ಸರ್ಕಾರವು ಕೃಷಿ ಕುರಿತ ಪೋರ್ಟಲ್ ಗಳು ಹಾಗೂ ಭಾರತೀಯ ಕೃಷಿ ಸಂಶೋಧನಾ ಪರಿಷತ್ತು (ಐ.ಸಿ.ಎ.ಆರ್.) ಸಲಹೆಗಾರರನ್ನು ಒಂದೇ ವೇದಿಕೆಯಡಿ ತಂದಿದೆ ಎಂದರು.

ಕೃಷಿ ಕುರಿತ ಪ್ರಶ್ನೆಗಳು ಹಾಗೂ ಸಂದೇಹಗಳಿಗೆ ಎ.ಐ ಚಾಟ್ ಬಾಟ್ ಮೂಲಕ ನಿಖರ ಉತ್ತರ ನೀಡುವ ಕಿಸಾನ್-ಇ-ಮಿತ್ರ ಸ್ಥಾಪಿಸಲಾಗಿದೆ. ಇದು 11 ಭಾರತೀಯ ಭಾಷೆಗಳಲ್ಲಿ ಉತ್ತರ ನೀಡುವ ಸಾಮರ್ಥ್ಯ ಹೊಂದಿದ್ದು, ದಿನಕ್ಕೆ 8,000 ಉತ್ತರದಂತೆ ಈ ವರೆಗೆ 93 ಲಕ್ಷ ಕೋರಿಕೆಗಳಿಗೆ ಉತ್ತರ ನೀಡಿದೆ ಎಂದು ಹೇಳಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎಂ.ಎಸ್. ಶೇಷಶಾಯಿ, ಕೃಷಿಗೆ ಶುದ್ಧ ನೀರಿನ ಲಭ್ಯತೆ ಗಣನೀಯ ಇಳಿಕೆಯಾಗುತ್ತಿದ್ದು, ಕೈಗಾರಿಕೆ ಸೇರಿದಂತೆ ಇತರೆ ವಲಯಗಳಿಂದ ನೀರಿನ ಬಳಕೆ ಹೆಚ್ಚುತ್ತಿದೆ. ಕೃಷ್ಣರಾಜ ಸಾಗರ ಅಣೆಕಟ್ಟಿನ ಕಳೆದ 80 ವರ್ಷದ ದತ್ತಾಂಶ ಗಮನಿಸಿದರೆ ನೀರು ಸಂಗ್ರಹಣಾ ಸಾಮರ್ಥ್ಯ ಭಾರಿ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ನೀರಿನ ಹನಿಗೂ ಹೆಚ್ಚು ಇಳುವರಿ ಸಾಧಿಸಲು ತಂತ್ರಜ್ಞಾನದ ನೆರವು ಪಡೆಯುವುದು ಅವಶ್ಯ ಎಂದು ಹೇಳಿದರು.

‘ಸಿಮಿಟ್’ ಸಂಸ್ಥೆ ಪ್ರಾದೇಶಿಕ ನಿರ್ದೇಶಕ ಡಾ.ಬಿ.ಎಂ. ಪ್ರಸನ್ನ, ವಿವಿಧ ದತ್ತಾಂಶ ಸಂಗ್ರಹಣೆಯಲ್ಲಿ ಎ.ಐ. ಹೆಚ್ಚಿನ ನೆರವು ನೀಡುತ್ತಿದೆ. ಆದರೆ ಲಭ್ಯ ದತ್ತಾಂಶಗಳನ್ನು ನಿರ್ಧಾರಗಳಲ್ಲಿ ಹೇಗೆ ಬಳಸುತ್ತೇವೆ ಹಾಗೂ ಹೆಚ್ಚಿನ ಇಳುವರಿಗೆ ಹೇಗೆ ಉಪಯೋಗಿಸುತ್ತೇವೆ ಎಂಬುದೇ ಸವಾಲಿನ ಕಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

‘ಫಸಲ್’ ಸಂಸ್ಥೆಯ ಸಿ.ಇ.ಒ. ಶೈಲೇಂದ್ರ ತಿವಾರಿ, ಭಾರತ ಸುಮಾರು 165 ರಾಷ್ಟ್ರಗಳ ಒಟ್ಟು ಪ್ರದೇಶದಷ್ಟು ಕೃಷಿಭೂಮಿ ಹೊಂದಿದ್ದು, ಸಮರ್ಪಕ ಕೃಷಿ ಪದ್ಧತಿ ಅಳವಡಿಸಿಕೊಂಡಲ್ಲಿ ಇಡೀ ಜಗತ್ತಿನ ಆಹಾರ ಬೇಡಿಕೆಯನ್ನು ಪೂರೈಸುವ ಸಾಮರ್ಥ್ಯ ಹೊಂದಿದೆ ಎಂದರು.

ದೇಶದ ತೋಟಗಾರಿಕೆ ವಲಯದ ಪ್ರಸ್ತುತ ರಫ್ತು ಸಾಮರ್ಥ್ಯವನ್ನು ಇನ್ನೂ 15 ಪಟ್ಟು ಹೆಚ್ಚಿಸುವ ಅವಕಾಶವಿದೆ. ಭಾರತದ ಕೃಷಿ ಸಮಸ್ಯೆಗಳನ್ನು ಬಗೆಹರಿಸಿದಲ್ಲಿ ಇಡೀ ಜಗತ್ತಿನ ಕೃಷಿ ಸಮಸ್ಯೆ ಬಗೆಹರಿಯಲಿದೆ. ಈ ನಿಟ್ಟಿನಲ್ಲಿ ಕಳೆದ ಏಳೆಂಟು ವರ್ಷಗಳಲ್ಲಿ ಉತ್ತಮ ಕಾರ್ಯಗಳಾಗುತ್ತಿವೆ ಎಂದರು.

‘ಆನಂತರ ಬಯೋಟೆಕ್’ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಡಾ.ಕೆ.ಕೆ. ನಾರಾಯಣನ್, ಸಂವಾದ ನಿರ್ವಹಣೆ ಮಾಡಿದರು.


Share

You cannot copy content of this page