ಬೆಂಗಳೂರು: ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಓ)ಗಳಿಗೆ 2-3 ಪಂಚಾಯತಿಯ ಹೊಣೆ ನೀಡುವ ಬದಲು, ಆಯಾ ಪಂಚಾಯತಿಯ ಗ್ರೇಡ್ 1 ಕಾರ್ಯದರ್ಶಿಗಳಿಗೆ ಹೆಚ್ಚುವರಿ ಹೊಣೆ ವಹಿಸಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.
ವಿಕಾಸಸೌಧದಲ್ಲಿಂದು ರಾಜ್ಯದ ಎಲ್ಲ ಜಿಲ್ಲಾ ಪಂಚಾಯತಿಗಳ ಕಾರ್ಯನಿರ್ವಹಣಾಧಿಕಾರಿ (ಸಿಇಓ)ಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಪಿಡಿಓಗಳಿಗೆ 2-3 ಪಂಚಾಯತಿಗಳ ಹೆಚ್ಚುವರಿ ಹೊಣೆ ನೀಡಿದರೆ ಯಾವುದೇ ಗ್ರಾಮ ಪಂಚಾಯತಿಗೆ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಗ್ರೇಡ್ 1 ಕಾರ್ಯದರ್ಶಿಗಳಿಗೆ ಹೊಣೆ ನೀಡಿ ಎಂದರು.
ರಾಜ್ಯದ ಎಲ್ಲ 5927 ಗ್ರಾಮ ಪಂಚಾಯತಿ ಕಚೇರಿಯಲ್ಲಿ ಅಧಿಕಾರಿ, ಸಿಬ್ಬಂದಿಗಳು ಕಚೇರಿಯಲ್ಲಿ ಹಾಜರಿದ್ದು, ಸಾರ್ವಜನಿಕರ ಅಹವಾಲು ಆಲಿಸಬೇಕು. ಈ ನಿಟ್ಟಿನಲ್ಲಿ ಸಿಇಓಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಪಿಡಿಓ, ಕಾರ್ಯದರ್ಶಿ, ಸಿಬ್ಬಂದಿಗೆ ಕರ್ತವ್ಯ ಆಪ್ ಕಡ್ಡಾಯ:
ಪಿಡಿಓಗಳು, ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿ ಪಂಚಾಯತಿಯಲ್ಲಿ ಎಲ್ಲ ಕೆಲಸದ ದಿನಗಳಂದು ಕಚೇರಿಗೆ ಕಡ್ಡಾಯವಾಗಿ ಹಾಜರಾಗಬೇಕು. ಈ ಬಗ್ಗೆ ಕರ್ತವ್ಯ ಆಪ್ ನಲ್ಲಿ ಹಾಜರಾತಿಯನ್ನು ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸುವಂತೆ ಸೂಚಿಸಿದರು.
ಗ್ರಾ.ಪಂ. ಆಸ್ತಿ ಸಂರಕ್ಷಣೆಗೆ ಸೂಚನೆ:
ಕೊಳವೆ ಬಾವಿ ಸೇರಿದಂತೆ ಗ್ರಾಮ ಪಂಚಾಯತಿಗಳಿಂದ ಗ್ರಾಮಗಳಲ್ಲಿ ಸೃಜಿಸಲಾದ ಯಾವುದೇ ಆಸ್ತಿಯನ್ನು ಗ್ರಾಮದ ಬಲಿಷ್ಠರು ಕಬಳಿಸದಂತೆ ಎಲ್ಲ ಸ್ವತ್ತಿಗೂ ಜಿಯೋ ಟ್ಯಾಗ್ ಮಾಡಲು ಮತ್ತು ಸಂರಕ್ಷಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಈಶ್ವರ ಖಂಡ್ರೆ ಸೂಚಿಸಿದರು.
ಎಲ್ಲ ಜಿಲ್ಲೆಗಳಲ್ಲಿ ಅಭಿಲೇಖಾಲಯ (ರೆಕಾರ್ಡ್ ರೂಂ) ನಿರ್ವಹಣೆ ಮಾಡುವ ಅಗತ್ಯ ಪ್ರತಿಪಾದಿಸಿದ ಸಚಿವರು, ಪ್ರತಿ ಗ್ರಾಮ ಪಂಚಾಯತಿಯಲ್ಲೂ ಕಡತ ನಿರ್ವಹಣೆಗೆ ಮೊದಲ ಆದ್ಯತೆ ನೀಡುವಂತೆ ಹಾಗೂ ಗ್ರಾಮೀಣ ಆಸ್ತಿ ದಾಖಲೆಗಳ ಡಿಜಿಟಲೀಕರಣಕ್ಕೆ ಕ್ರಮ ವಹಿಸುವಂತೆ ಸೂಚಿಸಿದರು.
ಕುಡಿಯುವ ನೀರು ಪೂರೈಕೆಯ ಪರಿಶೀಲನೆಗೆ ಸೂಚನೆ:
ರಾಜ್ಯದಲ್ಲಿ ಈ ಬಾರಿ ಮಳೆಯ ಕೊರತೆಯಿಂದ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಪರ್ಯಾಯ ಜಲ ಮೂಲ ಗುರುತಿಸಿ, ಟ್ಯಾಂಕರ್ ಗಳ ಮೂಲಕ ನೀರು ಪೂರೈಸಲು, ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಲು ಎಲ್ಲ ಪಿಡಿಓಗಳಿಗೆ ನಿರ್ದೇಶಿಸುವಂತೆ ಮತ್ತು ಮೇಲುಸ್ತುವಾರಿ ಮಾಡುವಂತೆ ಸಿಇಓಗಳಿಗೆ ಸೂಚಿಸಿದರು.
ಆಟಿಸಂ ತಪಾಸಣಾ ಶಿಬಿರ ನಡೆಸಲು ಸೂಚನೆ:
ಅಂಗನವಾಡಿ ಮತ್ತು ಗ್ರಾಮೀಣ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಲ್ಲಿ ಆಟಿಸಂ (ಸಾಮಾಜಿಕ ಸಂವಹನ, ಭಾಷೆ, ನಡವಳಿಕೆ ಮತ್ತು ಜಗತ್ತನ್ನು ಗ್ರಹಿಸುವ ರೀತಿಯ ಮೇಲೆ ಪರಿಣಾಮ ಬೀರುವ ಜೀವನಪರ್ಯಂತದ ಬೆಳವಣಿಗೆಯ ಸ್ಥಿತಿ) ಸಮಸ್ಯೆ ಇದೆಯೇ ಎಂಬುದನ್ನು ಆರಂಭದಲ್ಲೇ ಅರಿಯಲು ಗ್ರಾಮ ಮಟ್ಟದಲ್ಲಿ ತಪಾಸಣಾ ಶಿಬಿರ ಆಯೋಜಿಸಲು ಕ್ರಮ ವಹಿಸುವಂತೆ ಸಿಇಓಗಳಿಗೆ ಈಶ್ವರ ಖಂಡ್ರೆ ಸೂಚನೆ ನೀಡಿದರು.
ವಿವಿಧ ಜಿಲ್ಲೆಗಳಲ್ಲಿ ಆಗಿರುವ ಯಶೋಗಾಥೆ (ಸಕ್ಸಸ್ ಸ್ಟೋರಿ)ಗಳನ್ನು ಸಭೆಗೆ ತಿಳಿಸುವಂತೆ ಹೇಳಿದ ಈಶ್ವರ ಖಂಡ್ರೆ, ಒಂದು ಜಿಲ್ಲೆಯಲ್ಲಿ ಯಶಸ್ವಿಯಾಗಿರುವ ಕಾರ್ಯಕ್ರಮಗಳನ್ನು, ಉತ್ತಮ ರೂಢಿಗಳನ್ನು ಇತರ ಜಿಲ್ಲೆಗಳಲ್ಲಿಯೂ ಅಳವಡಿಸಿಕೊಳ್ಳುವಂತೆ ತಿಳಿಸಿದರು.
ಸಿಇಓಗಳ ಸಭೆಯಲ್ಲಿ ಮಾಸ್ತಿಯವರ ಜೀವನ ಘಟನೆ ಹೇಳಿದ ಈಶ್ವರ್ ಖಂಡ್ರೆ |ಜನ ಸೇವೆ ಮಾಡಿ ಪುಣ್ಯಾತ್ಮರೆನಿಸಿ:
ಬೆಂಗಳೂರು, ನ.20: ಅನ್ನದಾತರೇ ಹೆಚ್ಚಾಗಿರುವ ಗ್ರಾಮೀಣ ಜನರಿಗೆ ಮೂಲಸೌಕರ್ಯ ಕಲ್ಪಿಸುವ ಗುರುತರ ಜವಾಬ್ದಾರಿ ಸಿಇಓಗಳ ಮೇಲಿದ್ದು, ಜನ ಸೇವೆ ಮಾಡಿ ಮಾಸ್ತಿಯವರಂತೆ ಪುಣ್ಯಾತ್ಮರೆನಿಸಿ ಎಂದು ಈಶ್ವರ ಬಿ ಖಂಡ್ರೆ ತಿಳಿಸಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಮಾಸ್ತಿಯವರು ಚಿಕ್ಕಮಗಳೂರಿನಲ್ಲಿ ಉನ್ನತಾಧಿಕಾರಿಯಾಗಿದ್ದಾಗ ಬರ ಪೀಡಿತ ಪ್ರದೇಶದಲ್ಲಿ ಬಾವಿಯೊಂದನ್ನು ತೋಡಿಸಿದ್ದರು. ಒಂದು ಬಾರಿ ಅವರು ಧರ್ಮಸ್ಥಳಕ್ಕೆ ಹೋಗುವಾಗ ಬಾಯಾರಿಕೆ ಆಗಿ ತಾವೇ ತೋಡಿಸಿದ್ದ ಬಾವಿಯಲ್ಲಿ ನೀರು ಕುಡಿಯಲು ಹೋದಾಗ ಅಲ್ಲಿದ್ದ ಸ್ಥಳೀಯರು ಮೊದಲು ಒಂದು ಕೊಡ ನೀರು ಸೇದಿ ಅಲ್ಲಿದ್ದ ತೊಟ್ಟಿಗೆ ಹಾಕಿದರು. ನಂತರ ಮಾಸ್ತಿಯವರಿಗೆ ನೀರು ನೀಡಿದರು.
ಹೀಗೇಕೆ ಮಾಡಿದಿರಿ ಎಂದಾಗ ಜಿಲ್ಲೆಯ ಅಧಿಕಾರಿಯಾಗಿದ್ದ ಪುಣ್ಯಾತ್ಮ, ಬರಗಾಲದಲ್ಲಿ ಬಾವಿ ತೋಡಿಸಿದಾಗ, ಒಂದು ಕೊಡ ನೀರನ್ನು ಈ ತೊಟ್ಟಿಗೆ ಹಾಕಿ ಜಾನುವಾರು, ಪಶುಪಕ್ಷಿಗಳಿಗೂ ಬಾಯಾರಿಕೆ ಆಗುತ್ತದೆ ಎಂದಿದ್ದರು. ಅದನ್ನು ಪಾಲಿಸುತ್ತಿದ್ದೇವೆ. ನಮಗೆ ನೀರು ಕೊಟ್ಟ ಆ ಪುಣ್ಯತ್ಮ ಹಾಗೂ ಅವರ ಕುಟುಂಬದವರು ತಣ್ಣಗಿರಲಿ ಎಂದು ಹರಸಿದನಂತೆ.
ಈ ಜನಪ್ರಿಯ ಸಂಗತಿಯನ್ನು ಹೇಳಿದ ಈಶ್ವರ ಖಂಡ್ರೆ, ಒಬ್ಬ ಅಧಿಕಾರಿ ಪ್ರಾಮಾಣಿಕವಾಗಿ, ನಿಸ್ವಾರ್ಥವಾಗಿ ಸೇವೆ ಮಾಡಿದರೆ ಜನ ನಿಮ್ಮನ್ನೂ ಪುಣ್ಯಾತ್ಮ ಎಂದು ಗುರುತಿಸುತ್ತಾರೆ. ನೀವೆಲ್ಲರೂ ಜನ ಮೆಚ್ಚುವಂತೆ ಕೆಲಸ ಮಾಡಿ, ಮುಗ್ಧ ಗ್ರಾಮೀಣ ಜನರು ನಿಮ್ಮನ್ನೂ, ನಿಮ್ಮ ಮಕ್ಕಳನ್ನೂ ಹರಸುತ್ತಾರೆ ಎಂದರು.
