ಬೆಂಗಳೂರು:ಕರ್ನಾಟಕದ ಪ್ರಸ್ತಾವಿತ ಕ್ವಾಂಟಮ್ ಸಿಟಿಯಲ್ಲಿ ಹೂಡಿಕೆ ಹಾಗೂ ತಂತ್ರಜ್ಞಾನ ಸಹಭಾಗಿತ್ವಕ್ಕೆ ಮುಂದಾಗುವಂತೆ ಸ್ವಿಟ್ಜರ್ಲ್ಯಾಂಡ್ನ ಕಂಪನಿಗಳು, ಸಂಶೋಧನಾ ಸಂಸ್ಥೆಗಳು ಮತ್ತು ಉದ್ಯಮ ಪ್ರತಿನಿಧಿಗಳಿಗೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸಿಂಗ್ ಆಹ್ವಾನಿಸಿದರು.
ಬೆಂಗಳೂರಿನ ಸ್ವಿಸ್ನೆಕ್ಸ್ನಲ್ಲಿ ಸ್ವಿಟ್ಜರ್ಲ್ಯಾಂಡ್ನ ಜುರಾ ಮತ್ತು ನ್ಯೂಶಾಟೆಲ್ ಕ್ಯಾಂಟನ್ಗಳ ಸಚಿವರು ಹಾಗೂ 30ಕ್ಕೂ ಹೆಚ್ಚು ಉದ್ಯಮ ಪ್ರತಿನಿಧಿಗಳೊಂದಿಗೆ ಆಯೋಜಿಸಿದ್ದ ಔತಣಕೂಟದಲ್ಲಿ ಮಾತನಾಡಿದ ಅವರು, ಪ್ರಿಶಿಷನ್ ಎಂಜಿನಿಯರಿಂಗ್, ಸುಧಾರಿತ ಉತ್ಪಾದನೆ, ಕೈಗಾರಿಕಾ ಸ್ವಯಂಚಾಲನೆ, ವೈದ್ಯಕೀಯ ತಂತ್ರಜ್ಞಾನ ಹಾಗೂ ವಿಶೇಷ ಉತ್ಪಾದನಾ ಕ್ಷೇತ್ರಗಳಲ್ಲಿ ಸಹಭಾಗಿತ್ವ ವಿಸ್ತರಿಸುವ ಅವಕಾಶಗಳಿವೆ ಎಂದರು.
“ಸ್ವಿಟ್ಜರ್ಲ್ಯಾಂಡ್ನ ಪ್ರಿಶಿಷನ್ ಎಂಜಿನಿಯರಿಂಗ್ ಮತ್ತು ಸುಧಾರಿತ ಉತ್ಪಾದನಾ ಸಾಮರ್ಥ್ಯವನ್ನು ಕರ್ನಾಟಕದ ಸಂಶೋಧನೆ, ಡೀಪ್ಟೆಕ್ ಮತ್ತು ಕ್ವಾಂಟಮ್ ಪರಿಸರ ವ್ಯವಸ್ಥೆಯೊಂದಿಗೆ ಸಂಪರ್ಕಿಸಿದರೆ ಹೊಸ ಜಾಗತಿಕ ಅವಕಾಶಗಳನ್ನು ಸೃಷ್ಟಿಸಬಹುದು. ಸ್ವಿಸ್ ಕಂಪನಿಗಳು ಕ್ವಾಂಟಮ್ ಸಿಟಿಯಲ್ಲಿ ಹೂಡಿಕೆ ಮತ್ತು ತಂತ್ರಜ್ಞಾನ ಸಹಭಾಗಿತ್ವದ ಮೂಲಕ ಪಾಲ್ಗೊಳ್ಳಬೇಕು,” ಎಂದು ಡಾ. ಅಜಯ್ ಧರ್ಮಸಿಂಗ್ ಕರೆ ನೀಡಿದರು.
ಕರ್ನಾಟಕ ಸರ್ಕಾರ ₹1,000 ಕೋಟಿ ಕರ್ನಾಟಕ ಕ್ವಾಂಟಮ್ ಮಿಷನ್ ಮೂಲಕ ರಾಜ್ಯವನ್ನು ಭಾರತದ ಕ್ವಾಂಟಮ್ ರಾಜಧಾನಿಯನ್ನಾಗಿ ರೂಪಿಸುವ ಗುರಿ ಹೊಂದಿದೆ. ಹೆಸರಘಟ್ಟದಲ್ಲಿ ರೂಪುಗೊಳ್ಳುತ್ತಿರುವ ಕ್ವಾಂಟಮ್ ಸಿಟಿಯಲ್ಲಿ ಸಂಶೋಧನೆ, ನವೋದ್ಯಮಗಳು, ಕ್ವಾಂಟಮ್ ಹಾರ್ಡ್ವೇರ್, ಮಾದರಿ ಉತ್ಪನ್ನ ಅಭಿವೃದ್ಧಿ ಹಾಗೂ ಅಗತ್ಯ ಸಂಶೋಧನಾ ಮೂಲಸೌಕರ್ಯವನ್ನು ನಿರ್ಮಿಸಲಾಗುವುದು ಎಂದು ಸಚಿವರು ತಿಳಿಸಿದರು.
2027ರ ಜುಲೈ 19ರಿಂದ 21ರವರೆಗೆ ನಡೆಯಲಿರುವ ಕ್ವಾಂಟಮ್ ಇಂಡಿಯಾ ಬೆಂಗಳೂರು ಸಮ್ಮೇಳನದಲ್ಲಿ ಸ್ವಿಟ್ಜರ್ಲ್ಯಾಂಡ್ನ ಸಂಶೋಧಕರು, ತಂತ್ರಜ್ಞಾನ ಕಂಪನಿಗಳು, ಹೂಡಿಕೆದಾರರು ಹಾಗೂ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಚಿವರು ವಿಶೇಷ ಆಹ್ವಾನ ನೀಡಿದರು.
ಕೆ-ಸ್ಟೆಪ್ಸ್ ನಿರ್ದೇಶಕ ಡಾ. ಗಿರೀಶ್ ದಿಲೀಪ್ ಬಡೋಲೆ ಮಾತನಾಡಿ, “ಕರ್ನಾಟಕದ ಸಂಶೋಧನಾ ಸಾಮರ್ಥ್ಯ ಮತ್ತು ಸ್ವಿಟ್ಜರ್ಲ್ಯಾಂಡ್ನ ನಿಖರ ತಂತ್ರಜ್ಞಾನ ಪರಿಣತಿಯನ್ನು ಒಟ್ಟುಗೂಡಿಸುವುದರಿಂದ ಕ್ವಾಂಟಮ್ ತಂತ್ರಜ್ಞಾನದಲ್ಲಿ ಸಂಯುಕ್ತ ಸಂಶೋಧನೆ, ತಂತ್ರಜ್ಞಾನ ವರ್ಗಾವಣೆ ಮತ್ತು ಉತ್ಪನ್ನ ಅಭಿವೃದ್ಧಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ಕ್ವಾಂಟಮ್ ಸಿಟಿ ಇಂತಹ ಜಾಗತಿಕ ಸಹಭಾಗಿತ್ವಗಳಿಗೆ ಪ್ರಮುಖ ವೇದಿಕೆಯಾಗಲಿದೆ,” ಎಂದರು.
ಕರ್ನಾಟಕ–ಸ್ವಿಟ್ಜರ್ಲ್ಯಾಂಡ್ ಸಹಕಾರವನ್ನು ಕ್ವಾಂಟಮ್ ತಂತ್ರಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿ, ತಂತ್ರಜ್ಞಾನ ವರ್ಗಾವಣೆ, ನಿಖರ ಉತ್ಪಾದನೆ, ಪ್ರತಿಭಾ ವಿನಿಮಯ ಹಾಗೂ ನವೋದ್ಯಮ ಸಹಭಾಗಿತ್ವದ ಮೂಲಕ ಇನ್ನಷ್ಟು ಬಲಪಡಿಸಬೇಕು ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ಐಟಿ, ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಮಂಜುಳ, ಕೆ-ಸ್ಟೆಪ್ಸ್ ನಿರ್ದೇಶಕ ಡಾ. ಗಿರೀಶ್ ದಿಲೀಪ್ ಬಡೋಲೆ, ಕರ್ನಾಟಕ ಕ್ವಾಂಟಮ್ ಟಾಸ್ಕ್ ಫೋರ್ಸ್ ಅಧ್ಯಕ್ಷ ಪ್ರೊ. ಅರಿಂಧಮ್ ಘೋಷ್*, ಸ್ವಿಸ್ನೆಕ್ಸ್ ಪ್ರತಿನಿಧಿಗಳು, ಜುರಾ ಮತ್ತು ನ್ಯೂಶಾಟೆಲ್ ಕ್ಯಾಂಟನ್ಗಳ ಅಧಿಕಾರಿಗಳು ಹಾಗೂ 30ಕ್ಕೂ ಹೆಚ್ಚು ಸ್ವಿಸ್ ಉದ್ಯಮ ಮತ್ತು ತಂತ್ರಜ್ಞಾನ ಕ್ಷೇತ್ರದ ಪ್ರತಿನಿಧಿಗಳು ಉಪಸ್ಥಿತರಿದ್ದರು.
