ಮೈಸೂರು:ಸಂವಿಧಾನದ ಮೂಲ ಆಶಯಗಳನ್ನು ಜನಸಾಮಾನ್ಯರಿಗೆ ತಲುಪಿಸುವಂತೆ ದಶಕಗಳಿಂದ ವಿವಿಧ ಸಂಘ-ಸಂಸ್ಥೆಗಳು, ಸಂಘಟನೆಗಳು ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಿದ ಹಿನ್ನೆಲೆ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ವಿಭಾಗವಾರು ರಾಜ್ಯಮಟ್ಟದ ಸಂವಿಧಾನ ದಿನವನ್ನು ವಿಜೃಂಭಣೆಯಿಂದ ಆಚರಿಸಿದೆ ಎಂದು ಕಾರ್ಯಕ್ರಮದ ಸಂಚಾಲಕರಾಗಿದ್ದ ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಹೇಳಿದರು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಗುರುವಾರ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ನಡೆದ ಸಂವಿಧಾನ ದಿನಾಚರಣೆ ಕರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈಡೇರದ ಸಂವಿಧಾದ ಆಶಯ
ಸಂವಿಧಾನ ಜಾರಿಯಾಗಿ 77 ರ್ಷಗಳು ಕಳೆದರೂ ಅಸ್ಪೃಶ್ಯತೆ, ಸಾಮಾಜಿಕ ಪಿಡುಗುಗಳು, ಆರ್ಥಿಕ ಅಸಮಾನತೆ ಹಾಗೂ ಶಿಕ್ಷಣದಲ್ಲಿನ ತಾರತಮ್ಯದಿಂದಾಗಿ ಸಂವಿಧಾನದ ಮೂಲ ಆಶಯಗಳು ಇಂದಿಗೂ ಸಂಪೂರ್ಣವಾಗಿ ಸಾಕಾರಗೊಂಡಿಲ್ಲ. ಇದರಿಂದ ಜಾಗೃತಗೊಂಡಿರುವ ಇಂದಿನ ಜೆನ್-ಜಿ ಯುವಪೀಳಿಗೆ, ಕೈಯಲ್ಲಿ ಸಂವಿಧಾನದ ಪುಸ್ತಕ ಹಿಡಿದು ಜೈ ಭೀಮ್ ಘೋಷಣೆಗಳೊಂದಿಗೆ ರಾಷ್ಟ್ರವ್ಯಾಪಿ ಆಂದೋಲನಕ್ಕೆ ಇಳಿದಿರುವುದು ಎಲ್ಲರಿಗೂ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ಹೇಳಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಏಕಾಂಗಿಯಾಗಿ ಸಂವಿಧಾನ ರಚನೆಯಲ್ಲಿ ತೊಡಗಿಸಿಕೊಂಡರು. ವೈವಿಧ್ಯಮಯ ಭಾರತಕ್ಕೆ ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಭದ್ರ ಬುನಾದಿ ಹಾಕಿದ ಸಂವಿಧಾನ ರಚನೆಯ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸಿದರು. ಇಂದು ಅವರನ್ನು ನಾವು ಪೂಜೆ ಮಾಡಿದರೂ ಋಣ ತೀರಿಸಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಕರಡು ಸಮಿತಿಯ ಏಳು ಸದಸ್ಯರಲ್ಲಿ ಬಿ.ಎಲ್. ಮಿತ್ತರ್ ರಾಜೀನಾಮೆ ನೀಡಿದ್ದರು. ಡಿ.ಪಿ. ಖೈತಾನ್ ನಿಧನರಾಗಿದ್ದರು. ಎನ್. ಮಾಧವ ರಾವ್ ಆಡಳಿತಾತ್ಮಕ ಕಾರ್ಯಗಳಲ್ಲಿ ನಿರತರಾಗಿದ್ದರು. ಸೈಯದ್ ಮೊಹಮ್ಮದ್ ಸಾದುಲ್ಲಾ ದೆಹಲಿಯಿಂದ ದೂರ ಉಳಿದಿದ್ದರು. ಕೆ.ಎಂ. ಮುನ್ಷಿ ಮತ್ತು ಎನ್. ಗೋಪಾಲಸ್ವಾಮಿ ಅಯ್ಯಂಗಾರ್ ಅವರು ಹೈದರಾಬಾದ್ ಹಾಗೂ ಕಾಶ್ಮೀರ ಸಂಸ್ಥಾನಗಳ ವಿಲೀನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ ಅನಾರೋಗ್ಯದ ಕಾರಣ ಸಭೆಗಳಿಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಡಿ.ಪಿ. ಖೈತಾನ್ ಅವರ ನಿಧನದ ನಂತರ ಸಮಿತಿ ಸೇರಿದ ಟಿ.ಟಿ. ಕೃಷ್ಣಮಾಚಾರಿ ಮಾತ್ರ ಅಂಬೇಡ್ಕರ್ ಅವರಿಗೆ ಬೆನ್ನೆಲುಬಾಗಿ ನಿಂತರು. ಉಳಿದಂತೆ ಬಾಬಾ ಸಾಹೇಬರು ತಮ್ಮ ಅನಾರೋಗ್ಯವನ್ನೂ ಲೆಕ್ಕಿಸದೆ ಸಂವಿಧಾನ ರಚನೆಯನ್ನು ಬದ್ಧತೆಯಿಂದ ಮಾಡಿದರು ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು, ವೈಯಕ್ತಿಕ ಜೀವನದಲ್ಲಿ ಪತ್ನಿಯ ಅನಾರೋಗ್ಯ, ತಂದೆ ಹಾಗೂ ಮಕ್ಕಳ ಅಗಲಿಕೆಯಂತಹ ಘೋರ ದುಃಖಗಳನ್ನು ಸಹಿಸಿಕೊಂಡು 2 ವರ್ಷ, 11 ತಿಂಗಳು ಮತ್ತು 18 ದಿನಗಳಲ್ಲಿ ಈ ಬಲಿಷ್ಠ ಸಂವಿಧಾನವನ್ನು ದೇಶಕ್ಕೆ ಸಮರ್ಪಿಸಿದರು. ಅವರು ನೀಡಿದ ಸಂವಿಧಾನದಿಂದಲೇ ಇಂದು ಬಡವರು, ಮಹಿಳೆಯರು ಗೌರವದಿಂದ ಬದುಕುವಂತಾಗಿದೆ ಎಂದು ಹೇಳಿದರು.
ನಿಷ್ಠುರವಾದಿ ಬಾಬಾ ಸಾಹೇಬರು
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಎಷ್ಟು ಜ್ಞಾನವಂತರೋ ಅಷ್ಟೇ ನಿಷ್ಠುರವಾದಿ, ಕಟುವಾದಿಯಾಗಿದ್ದರು.ಸಮಾಜದಲ್ಲಿ ಮಹಿಳೆಯರು ಎದುರಿಸುತ್ತಿದ್ದ ಶೋಷಣೆ, ಆಸ್ತಿ ಹಕ್ಕಿನ ವಂಚನೆ, ಅಸಮಾನತೆಯನ್ನು ಕಿತ್ತೊಗೆಯಲು
ಹಿಂದೂ ಕೋಡ್ ಬಿಲ್ ಪ್ರಸ್ತಾಪಿಸಿದ್ದರು.
ಮಸೂದೆಗೆ ಸಂಸತ್ತಿನಲ್ಲಿ ತೀವ್ರ ವಿರೋಧ ವ್ಯಕ್ತವಾದ
ಹಿನ್ನೆಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು
1951ರಲ್ಲಿ ತಮ್ಮ ಕಾನೂನಜ ಸಚಿವ ಸ್ಥಾನಕ್ಕೆ ರಾಜೀನಾಮೆ
ಕೊಟ್ಟಿದ್ದರು.
ಇಂದುಸಂವಿಧಾನ ಆಶಯಗಳು ಈಡೇರಿಲ್ಲ ಎಂಬ ಒಂದೇ ಕಾರಣಕ್ಕೆ ಯುವಪೀಳಿಗೆ ಹೋರಾಟಕ್ಕೆ ಇಳಿದಿದೆ. ಕೈಯಲ್ಲಿ ಸಂವಿಧಾನ ಪುಸ್ತಕ ಹಿಡಿದು, ಜೈ ಭೀಮ್ ಎಂಬ
ಘೋಷಣೆಗಳೊಂದಿಗೆ ಭವಿಷ್ಯತ್ತಿಗಾಗಿ ರಾಷ್ಟ್ರವ್ಯಾಪಿ
ಆಂದೋಲನ ಆರಂಭಿಸಿದೆ. ಜೆನ್ ಜಿ ಹೋರಾಟಕ್ಕೆ ಕಾರಣವಾಗಿದ್ದು ಇದೇ ಸಂವಿಧಾನ ಎಂಬುದರಲ್ಲಿ ಎರಡು ಮಾತಿಲ್ಲ ಎಂದರು.
ಸಂವಿಧಾನ ಯಾವುದೇ ಒಂದು ವರ್ಗಕ್ಕೆ ಸೀಮಿತವಲ್ಲ,
ಸಂವಿಧಾನ ಯಾವುದೇ ಒಂದು ಧರ್ಮ, ಜಾತಿ ಅಥವಾ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ. ಸರ್ವರಿಗೂ ಒಂದೇ, ಅದೇ ನಮ್ಮ ಸಂವಿಧಾನ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವ ಕೆ.ಎಚ್.ಮುನಿಯಪ್ಪ, ಸಚಿವರಾದ ಚೆಲುವರಾಯಸ್ವಾಮಿ, ರಿಜ್ವಾನ್ ಅರ್ಷದ್, ಎಸ್. ಪುಟ್ಟರಂಗಶೆಟ್ಟಿ, ಕೆ.ಎಂ.ಶಿವಲಿಂಗೇಗೌಡ, ಕೆ.ಎಸ್.ಬಸವಂತಪ್ಪ, ಟಿ.ರಘುಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೃಷಿ ಸಚಿವರಾದ ಪಿ.ಎಂ.ನರೇಂದ್ರ ಸ್ವಾಮಿ ಅವರು ಸಂವಿಧಾನದ ಪೀಠಿಕೆ ಬೋಧಿಸಿದರು.
ಒಂದೂವರೆ ಕಿ.ಮೀ ಮೆರವಣಿಗೆ
ಸಂವಿಧಾನ ದಿನಾಚರಣೆ ಪ್ರಯುಕ್ತ ಬೆಳಿಗ್ಗೆ ನಗರದ ಗನ್ ಹೌಸ್ ನಿಂದ ಮಹಾರಾಜ ಕಾಲೇಜುವರೆಗೆ ಸ್ತಬ್ಧಚಿತ್ರಗಳು, ಕಲಾತಂಡಗಳೊಂದಿಗೆ ಎರಡು ಸಾವಿರಕ್ಕೂ ಹೆಚ್ಚು ಜನರು ಪಾದಯಾತ್ರೆಯಲ್ಲಿ ಆಗಮಿಸಿದರು. ಸಚಿವರಾದ ಪಿ.ಎಂ.ನರೇಂದ್ರಸ್ವಾಮಿ, ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕರು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿದ್ದರು.
ರಾಮಸ್ವಾಮಿ ವೃತ್ತದಿಂದ ಕಾರ್ಯಕ್ರಮ ಸ್ಥಳದವರೆಗೂ ಸಿದ್ದರಾಮಯ್ಯ ಅವರು ಮೆರವಣಿಗೆಯಲ್ಲಿ ಭಾಗವಹಿಸಿದರು.
