ಸಮಗ್ರ ಸುದ್ದಿ

ಕಬ್ಬು ಬೆಳೆಗಾರರು ಸೇರಿ ರೈತರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಕ್ರಮ – ಸಿಎಂ ಸಿದ್ದರಾಮಯ್ಯ

Share

ಬೆಳಗಾವಿ : ಕಬ್ಬು ಬೆಳೆಗಾರರು ಸೇರಿದಂತೆ ಎಲ್ಲಾ ರೈತರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದ್ದು, ರೈತರ ಎಲ್ಲಾ ಬೇಡಿಕೆಗಳನ್ನು ಪರಿಶೀಲಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಸುವರ್ಣಸೌಧದಲ್ಲಿ ವಿವಿಧ ರೈತ ಸಂಘಟನೆಗಳ ಪ್ರತಿನಿಧಿ ಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಅವರು, ನಮ್ಮ ಸರ್ಕಾರ ಬಂದ ಬಳಿಕ ಪ್ರತಿ ಲೀಟರ್ ಹಾಲಿಗೆ ರೂ.5 ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಪ್ರಸ್ತುತ ಪ್ರತಿದಿನ ಒಂದು ಕೋಟಿ ಲೀಟರ್ ಹಾಲು ಖರೀದಿಗೆ ರೂ.5ಕೋಟಿ ಪ್ರೋತ್ಸಾಹ ಧನವನ್ನು ರೈತರಿಗೆ ನೀಡುತ್ತಿದ್ದೇವೆ ಎಂದರು.

ಸಕ್ಕರೆ ಕಾರ್ಖಾನೆಗಳು ಕಬ್ಬಿನ ತೂಕದಲ್ಲಿ ಮೋಸವನ್ನು ತಪ್ಪಿಸಲು, ಇಳುವರಿ ನಿಗದಿಯನ್ನು ವೈಜ್ಞಾನಿಕವಾಗಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಭೂ ಸುಧಾರಣಾ ಕಾಯ್ದೆಗೆ ಹಿಂದಿನ ಸರ್ಕಾರ ಮಾಡಿರುವ ತಿದ್ದುಪಡಿಗಳನ್ನು ಹಿಂತೆಗೆದುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದರು.

ರೈತರಿಗೆ 7ಗಂಟೆ ಕಾಲ ನಿರಂತರ ಗುಣಮಟ್ಟದ ವಿದ್ಯುತ್‌ ಒದಗಿಸಲು ಸರ್ಕಾರ ಬದ್ಧವಾಗಿದೆ. ವಿದ್ಯುತ್‌ ಉತ್ಪಾದನೆ ಹೆಚ್ಚಾದಾಗ ವಿದ್ಯುತ್‌ ಪೂರೈಕೆ ಹೆಚ್ಚಿಸಲು ಕ್ರಮ. ಈ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದರು.

ರೈತರ ವಿಷಯದಲ್ಲಿ ಸರ್ಕಾರ ಯಾವುದೇ ಆತ್ಮವಂಚನೆ ಮಾಡುವುದಿಲ್ಲ. ನಮ್ಮ ಸರ್ಕಾರ ರೈತ ಪರ, ಎಲ್ಲಾ ಸಮಸ್ಯೆಗಳಿಗೂ ನ್ಯಾಯಯುತ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎಂದು ತಿಳಿಸಿದರು.

ನೀರಾವರಿಗೆ ವಿದ್ಯುತ್‌ ಸಮಸ್ಯೆಯಿದ್ದು, 12 ತಾಸು ನಿರಂತರ ವಿದ್ಯುತ್‌ ಪೂರೈಕೆ ಖಾತ್ರಿಪಡಿಸಬೇಕು. ಅಕ್ರಮ ಸಕ್ರಮ ಯೋಜನೆಯನ್ನು ಪುನಾರಂಭಿಸಬೇಕು. ಕಾಡುಪ್ರಾಣಿಗಳಿಂದ ಬೆಳೆ ಹಾನಿ ಪರಿಹಾರ ಧನ ಹೆಚ್ಚಿಸಬೇಕು. ರೈತರ ಉತ್ಪನ್ನಗಳ ಖರೀದಿಗೆ ಕಾರ್ಪಸ್‌ ಫಂಡ್‌ ಆರಂಭಿಸಬೇಕು. ಪಂಚಾಯತ್‌ ಮಟ್ಟದಲ್ಲಿ ಪಶು ವೈದ್ಯರ ನೇಮಕ ಮಾಡಬೇಕು.

ಬೆಳಗಾವಿಯಲ್ಲಿ ಆರಂಭಿಸಲಾಗಿರುವ ಸಕ್ಕರೆ ಆಯುಕ್ತರ ಕಚೇರಿಗೆ ಅಗತ್ಯ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ರೈತ ಪ್ರತಿನಿಧಿಗಳು ಮನವಿ ಸಲ್ಲಿಸಿದರು.

ಕಬ್ಬು ಬೆಳೆಗಾರರ ಹಾಗೂ ಮೆಕ್ಕೆ ಜೋಳ ರೈತರ ಸಮಸ್ಯೆಗಳನ್ನು ಬಗೆಹರಿಸಿ ರೈತರ ಬೇಡಿಕೆಗಳನ್ನು ಈಡೇರಿಸಿರುವ ಹಿನ್ನೆಲೆಯಲ್ಲಿ ವಿವಿಧ ರೈತ ಸಂಘಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರನ್ನು ಸನ್ಮಾನಿಸಿದರು.


Share

You cannot copy content of this page