ಸಮಗ್ರ ಸುದ್ದಿ

ಯುನೈಟೆಡ್ ಆಸ್ಪತ್ರೆಯ ಕ್ರಾಂತಿಕಾರಿ ‘ME Care’ ಯೋಜನೆಗೆ ಚಾಲನೆ |ಸೇವಾ ಮನೋಭಾವ ಇಲ್ಲದಿದ್ದವರು ವೈದ್ಯರಾಗಲು ಸಾಧ್ಯವಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

Share

ಬೆಂಗಳೂರು :ಮಾನವ ಧರ್ಮದ ಸೇವೆ ಮಾಡಬೇಕು ಎಂದವರು ಮಾತ್ರ ವೈದ್ಯ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸೇವಾ ಮನೋಭಾವ ಇಲ್ಲದಿದ್ದವರು ವೈದ್ಯರಾಗಲು ಸಾಧ್ಯವಿಲ್ಲ, ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.

ಜಯನಗರದ ಯುನೈಟೆಡ್ ಆಸ್ಪತ್ರೆಯ ಆವರಣದಲ್ಲಿ ಇಂದು ಆಯೋಜಿಸಿದ್ದ ಸಮಾರಂಭದಲ್ಲಿ, ಆಸ್ಪತ್ರೆಯ ಕ್ರಾಂತಿಕಾರಿ ತುರ್ತು ಚಿಕಿತ್ಸಾ ಯೋಜನೆ ‘ME Care’ (ಮಿ ಕೇರ್) ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ವೈದ್ಯ ವೃತ್ತಿಯಲ್ಲಿ ನಿಸ್ವಾರ್ಥ ಮನೋಭಾವ ಇರಬೇಕು. ಈ ಕೆಲಸದಲ್ಲಿ ಸಾಕಷ್ಟು ಸವಾಲುಗಳು ಇರುತ್ತವೆ. ಇದನ್ನು ಮೀರಿ ನಡೆಯಬೇಕು. ಈಗ ತಂತ್ರಜ್ಞಾನವೂ ಮುಂದುವರೆದು ನಿಮ್ಮ ನೆರವಿಗಿದೆ. ಇದರಿಂದ ಸಾಕಷ್ಟು ಉಪಯೋಗವಾಗಿದೆ ಎಂದರು.

ಗ್ರಾಮೀಣ ಭಾಗದಲ್ಲಿ ಕೆಲಸ ನಿರ್ವಹಣೆ ಮಾಡಿದ ವೈದ್ಯರಿಗೆ ನಗರ ಭಾಗದಲ್ಲಿ ಕೆಲಸ ಮಾಡುವುದು ಸಾಕಷ್ಟು ಸುಲಭ. ನಗರ ಭಾಗದಲ್ಲಿ ಹಿರಿಯ ವೈದ್ಯರ ಸಲಹೆ ಪಡೆದು ಕಿರಿಯ ವೈದ್ಯರು ಕೆಲಸ ಮಾಡಬೇಕಾಗುತ್ತದೆ. ನಾನು ಸ್ವಲ್ಪ ದಿನ ವೈದ್ಯಕೀಯ ಶಿಕ್ಷಣ ಸಚಿವನಾಗಿ ಕೆಲಸ ಮಾಡಿದ ಕಾರಣಕ್ಕೆ ಇದರ ಬಗ್ಗೆ ಅರಿವಿದೆ. ನನ್ನ ಮನೆಯಲ್ಲೇ ಅರ್ಧ ಡಜನ್ ವೈದ್ಯರಿದ್ದಾರೆ ಎಂದು ಸ್ಮರಿಸಿದರು.

ಕೈಗೆಟುಕುವ ದರದಲ್ಲಿ ಚಿಕಿತ್ಸೆ: ಡಿಸಿಎಂ ಮೆಚ್ಚುಗೆ:
ಡಾ. ವಿಕ್ರಮ್ ಅವರು ದೂರದ ಗುಲ್ಬರ್ಗದಿಂದ ಬಂದು ಇಲ್ಲಿ ಸೇವೆ ಸಲ್ಲಿಸಿ ಜನಪರವಾಗಿ ಕೆಲಸ ಮಾಡುತ್ತಿದ್ದಾರೆ. ದಿನಕ್ಕೆ ಕೇವಲ 10 ರೂಪಾಯಿ ನೀಡಿದರೆ 1 ಕೋಟಿವರೆಗೆ ಆರೋಗ್ಯ ವಿಮೆ ನೀಡುವುದಾಗಿ ಹೇಳಿದ್ದಾರೆ. ಖಾಸಗಿ ವಲಯವು ಸರ್ಕಾರದೊಂದಿಗೆ ಕೈಜೋಡಿಸಿ ಕಡಿಮೆ ವೆಚ್ಚದಲ್ಲಿ ಉತ್ತಮ ಆರೋಗ್ಯ ಸೇವೆ ನೀಡುವಂತಾಗಲಿ. ವಿಕ್ರಮ್ ಅವರ ತಂಡದ ಈ ಹೊಸ ಸಾಹಸಕ್ಕೆ ಶುಭವಾಗಲಿ,” ಎಂದು ಹಾರೈಸಿದರು.

ಯುನೈಟೆಡ್ ಎಂದರೆ ಕನ್ನಡದಲ್ಲಿ ಒಗ್ಗಟ್ಟು. ಈ ಒಗ್ಗಟ್ಟು ಜನರ ಆರೋಗ್ಯ ರಕ್ಷಣೆ ಮಾಡಲಿ. ‘ಶುಭಂ ಕರೋತಿ ಕಲ್ಯಾಣಂ, ಆರೋಗ್ಯ ಧನಸಂಪದಂ’ ಎಂಬ ಶ್ಲೋಕದ ಆಶಯದಂತೆ ನಿಮ್ಮೆಲ್ಲರಿಗೂ ಮಂಗಳವಾಗಲಿ ಎಂದು ಪ್ರಾರ್ಥಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಯುನೈಟೆಡ್ ಆಸ್ಪತ್ರೆಗಳ ಅಧ್ಯಕ್ಷರಾದ ಡಾ. ವಿಕ್ರಮ್ ಸಿದ್ದರೆಡ್ಡಿ, ನಮ್ಮ ಆಹ್ವಾನವನ್ನು ಮನ್ನಿಸಿ ಆಗಮಿಸಿದ ಉಪಮುಖ್ಯಮಂತ್ರಿಗಳಿಗೆ ಧನ್ಯವಾದಗಳು. ಕೇವಲ 4 ವರ್ಷಗಳ ಅವಧಿಯಲ್ಲಿ ಯುನೈಟೆಡ್ ಆಸ್ಪತ್ರೆ ಜನರ ವಿಶ್ವಾಸಗಳಿಸಿದೆ. ‘ME Care’ ಯೋಜನೆಯು ಆವಿಷ್ಕಾರ, ಕೈಗೆಟುಕುವ ದರ ಮತ್ತು ಸಹಾನುಭೂತಿಯನ್ನು ಸಂಯೋಜಿಸುವ ನಮ್ಮ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದರು.

ತುರ್ತು ಸಂದರ್ಭಗಳಲ್ಲಿ ಕುಟುಂಬಗಳ ಮೇಲಾಗುವ ಆರ್ಥಿಕ ಹೊರೆಯನ್ನು ಸಂಪೂರ್ಣವಾಗಿ ತಗ್ಗಿಸುವುದು ಮತ್ತು ಅತ್ಯುನ್ನತ ಗುಣಮಟ್ಟದ ಚಿಕಿತ್ಸೆ ನೀಡುವುದು ನಮ್ಮ ಗುರಿ. ಬೆಂಗಳೂರು ಮತ್ತು ಕಲಬುರಗಿಯಲ್ಲಿ ಸಮುದಾಯದ ಅಗತ್ಯಗಳಿಗೆ ತಕ್ಕಂತೆ ಆರೋಗ್ಯ ಸೇವೆ ನೀಡುವಲ್ಲಿ ಯುನೈಟೆಡ್ ಆಸ್ಪತ್ರೆ ಸದಾ ಮುಂದಿರುತ್ತದೆ ಎಂದು ಅವರು ತಿಳಿಸಿದರು.

ಏನಿದು ‘ME Care’ ಯೋಜನೆ?:
ಇದು ಒಂದು ವಿಶಿಷ್ಟ ತುರ್ತು ಆರೋಗ್ಯ ಯೋಜನೆಯಾಗಿದ್ದು, ದಿನಕ್ಕೆ ಕೇವಲ 10 ರೂ. (ವರ್ಷಕ್ಕೆ 3558 ರೂ.) ವೆಚ್ಚದಲ್ಲಿ 1 ಕೋಟಿ ರೂ.ವರೆಗಿನ ತುರ್ತು ವೈದ್ಯಕೀಯ ರಕ್ಷಣೆಯನ್ನು ನೀಡುತ್ತದೆ. ಇದು ಜಯನಗರದ ಯುನೈಟೆಡ್ ಆಸ್ಪತ್ರೆಯಲ್ಲಿ ಲಭ್ಯವಿದ್ದು, ಸಂಪೂರ್ಣ ನಗದು ರಹಿತ (Cashless) ಮತ್ತು ಯಾವುದೇ ಗುಪ್ತ ಶುಲ್ಕಗಳಿಲ್ಲದ ಪಾರದರ್ಶಕ ಯೋಜನೆಯಾಗಿದೆ.

ಕಾರ್ಯಕ್ರಮದಲ್ಲಿ ಬಿಬಿಎಂಪಿ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಆಸ್ಪತ್ರೆಯ ಹಿರಿಯ ವೈದ್ಯರು, ಸಿಬ್ಬಂದಿ ವರ್ಗ ಹಾಗೂ ಗಣ್ಯರು ಉಪಸ್ಥಿತರಿದ್ದರು.


Share

You cannot copy content of this page