ಬೆಂಗಳೂರು: ಪ್ಲಾಸ್ಟಿಕ್ ಉದ್ಯಮ ವಲಯದ ಬೆಳವಣಿಗೆಯನ್ನು ಉತ್ತೇಜಿಸಲು ರಾಜ್ಯ ಸರಕಾರವು ಮಂಗಳೂರು ಮತ್ತು ವಿಜಯಪುರ ಜಿಲ್ಲೆಯ ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ 200 ಎಕರೆಯಲ್ಲಿ ಸುಸಜ್ಜಿತ `ಪ್ಲಾಸ್ಟಿಕ್ ಪಾರ್ಕ್’ ಸ್ಥಾಪಿಸಲಿದೆ. ಉದ್ಯಮಿಗಳು ತಮಗೆ ಎಲ್ಲಿ ಬೇಕೋ ಅಲ್ಲಿ ಅರ್ಜಿ ಹಾಕಿಕೊಳ್ಳಬಹುದು. ಸರಕಾರ ತ್ವರಿತವಾಗಿ ಭೂಮಿ ಕೊಡುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಪ್ಲಾಸ್ಟ್ ಇಂಡಿಯಾ-2026 ಪ್ರದರ್ಶನ ಮೇಳದ ಪೂರ್ವಭಾವಿ ಉದ್ಘಾಟನಾ ಸಮಾವೇಶದಲ್ಲಿ ಅವರು ಪಾಲ್ಗೊಂಡಿದ್ದರು. ಕರ್ನಾಟಕದ ಪ್ಲಾಸ್ಟಿಕ್ ಉದ್ಯಮಿಗಳಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 12ನೇ ವರ್ಷದ ಈ ಅಂತಾರಾಷ್ಟ್ರೀಯ ಸಮಾವೇಶವು ಮುಂದಿನ ವರ್ಷ ಫೆ.5 ರಿಂದ 10ರವರೆಗೆ ದೆಹಲಿಯ ಭಾರತ ಮಂಟಪದಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಈ ವಲಯಕ್ಕೆ ಬೇಕಾದ ಪ್ರತಿಭಾವಂತ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಂಶೋಧನೆಗಾಗಿ ಕೇಂದ್ರೀಯ ಪೆಟ್ರೋಕೆಮಿಕಲ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯು (ಸಿಐಪಿಇಟಿ) ಇಲ್ಲಿ ತನ್ನ ಕ್ಯಾಂಪಸ್ ತೆರೆಯಲಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಪ್ಲಾಸ್ಟಿಕ್ ಉದ್ಯಮವು 40 ಲಕ್ಷ ಜನರಿಗೆ ಉದ್ಯೋಗ ನೀಡಿದೆ. ಮುಂದಿನ ಒಂದು ವರ್ಷದಲ್ಲಿ ಇನ್ನೂ 15 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ರಾಜ್ಯದಲ್ಲಿ ಹೂಡಿಕೆದಾರರಿಗೆ ಆದ್ಯತೆ ಇದ್ದು, ಸಮಗ್ರ ಕೈಗಾರಿಕಾ ಬೆಳವಣಿಗೆಯ ಗುರಿ ಇಟ್ಟುಕೊಳ್ಳಲಾಗಿದೆ. ಪ್ಲಾಸ್ಟಿಕ್ ಲೋಹವು ಜೀವನದ ಅವಿಭಾಜ್ಯ ಅಂಗವಾಗಿದೆ. ಹೀಗಾಗಿ ಗುಣಮಟ್ಟದ ಉತ್ಪನ್ನಗಳ ತಯಾರಿಕೆಗೆ ಆದ್ಯತೆ ಕೊಡಬೇಕಾಗಿದೆ. ರಾಷ್ಟ್ರ ಮಟ್ಟದಲ್ಲಿ ಈ ವಲಯದ ವಹಿವಾಟು 2026ರಲ್ಲಿ ವಾರ್ಷಿಕವಾಗಿ 50 ಬಿಲಿಯನ್ ಡಾಲರ್ ಮುಟ್ಟುವುದು ನಿಚ್ಚಳವಾಗಿದೆ ಎಂದು ಹೇಳಿದ್ದಾರೆ.
ಹತ್ತು ವರ್ಷಗಳ ಹಿಂದೆ ಪ್ಲಾಸ್ಟಿಕ್ ಉದ್ಯಮದ ವಹಿವಾಟು 15 ಬಿಲಿಯನ್ ಡಾಲರ್ ಇತ್ತು. ಈಗ ಇದು 37 ಬಿಲಿಯನ್ ಡಾಲರ್ ಮಟ್ಟಕ್ಕೆ ಬೆಳೆದಿದೆ. ಇದು ಪ್ರವರ್ಧಮಾನಕ್ಕೆ ಬರುತ್ತಿರುವ ಕೈಗಾರಿಕಾ ವಲಯವಾಗಿದ್ದು, ನಮ್ಮ ದೇಶದ ಜಿಡಿಪಿಗೆ ಶೇಕಡ 1.5ರಷ್ಟು ಕೊಡುಗೆ ನೀಡುತ್ತಿದೆ. ರಾಜ್ಯ ಸರಕಾರ ಕೂಡ ಈ ವಲಯದಲ್ಲಿ ಹೂಡಿಕೆಯನ್ನು ಸ್ವಾಗತಿಸಲಿದ್ದು, ಸಂಪೂರ್ಣ ಬೆಂಬಲ ಕೊಡಲಿದೆ ಎಂದು ಅವರು ಭರವಸೆ ನೀಡಿದ್ದಾರೆ.
ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಪಾಸ್ಟ್ ಇಂಡಿಯಾ ಫೌಂಡೇಶನ್ ಅಧ್ಯಕ್ಷ ರವೀಶ್ ಕಾಮತ್, ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಮುಖ್ಯಸ್ಥ ಅಲೋಕ್ ಟೈಬರ್ವಾಲಾ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ಲಾಸ್ಟ್ ಇಂಡಿಯಾ ಫೌಂಡೇಷನ್ ಸಂಘಟನೆಯ ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷ ಪ್ರದೀಪ್ ರಾಥೋಡ್ ಉಪಸ್ಥಿತರಿದ್ದರು.
