ಸಮಗ್ರ ಸುದ್ದಿ

ತುಮಕೂರು ಜಿಲ್ಲೆಯ ಪಂಡಿತನಹಳ್ಳಿ ಮತ್ತು ಹೆಗ್ಗೆರೆಯಲ್ಲಿ ರಸ್ತೆ ಮೇಲ್ಸೇತುವೆ ಭೂಮಿ ಪೂಜೆ |ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ – ಸಚಿವ ವಿ.ಸೋಮಣ್ಣ

Share

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ , ಒಟ್ಟಾರೆ ಅಭಿವೃದ್ಧಿಗಾಗಿ ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರು ಹೇಳಿದರು.

ಇಂದು ತುಮಕೂರು ಜಿಲ್ಲೆಯ ಪಂಡಿತನಹಳ್ಳಿ ಮತ್ತು ಹೆಗ್ಗೆರೆಯಲ್ಲಿ ಲೆವೆಲ್‌ ಕ್ರಾಸಿಂಗ್‌ ಗೇಟ್‌ಗಳ ಬದಲಾಗಿ ರಸ್ತೆ ಮೇಲ್ಸೇತುವೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮೇಲ್ಸೇತುವೆಗಳು ಪೂರ್ಣಗೊಂಡ ನಂತರ, ಜನರು ಲೆವೆಲ್ ಕ್ರಾಸಿಂಗ್‌ಗಳಲ್ಲಿ ಕಾಯಬೇಕಾಗಿಲ್ಲ, ಇದರಿಂದಾಗಿ ಅಮೂಲ್ಯವಾದ ಸಮಯ ಉಳಿತಾಯ ವಾಗುವುದು ಮಾತ್ರವಲ್ಲದೆ ಸುರಕ್ಷತೆಯಿಂದ ಕೂಡಿದ ಸಂಚಾರವನ್ನು ಒದಗಿಸುತ್ತದೆ ಎಂದರು.

ಹೆಗ್ಗೆರೆ ರೈಲು ನಿಲ್ದಾಣವನ್ನು ಅಗತ್ಯವಿರುವ ಎಲ್ಲಾ ಪ್ರಯಾಣಿಕರ ಸೌಲಭ್ಯಗಳೊಂದಿಗೆ ಮೇಲ್ದರ್ಜೆ ಗೇರಿಸಲಾಗುವುದು. ಮಾರ್ಗದ ಸಾಮರ್ಥ್ಯವನ್ನು ಹೆಚ್ಚಿಸಲು ಬೆಂಗಳೂರು-ತುಮಕೂರು ರೈಲು ಮಾರ್ಗವನ್ನು ಚತುಷ್ಪತ ಮಾರ್ಗವನ್ನಾಗಿ ಮಾಡಲಾಗುತ್ತದೆ ಎಂದರು.

ರಾಯದುರ್ಗ-ತುಮಕೂರು ಮತ್ತು ತುಮಕೂರು-ದಾವಣಗೆರೆ ಹೊಸ ರೈಲು ಮಾರ್ಗ ಯೋಜನೆಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸಲಾಗುವುದು. ಬೆಂಗಳೂರು ಮತ್ತು ಮುಂಬೈ ನಡುವಿನ ಪ್ರಸ್ತಾವಿತ ಹೊಸ ರೈಲು ತುಮಕೂರಿನಲ್ಲಿ ನಿಲುಗಡೆ ಹೊಂದಲಿದೆ ಇದು ಈ ಪ್ರದೇಶದ ಪ್ರಯಾಣಿಕರಿಗೆ ಉಪಯೋಗವಾಗಲಿದೆ ಎಂದರು.

ಪಂಡಿತನಹಳ್ಳಿ ಗೇಟ್‌ನಲ್ಲಿ ಎಲ್‌ಸಿ ಸಂಖ್ಯೆ 33 ರ ಬದಲಿಗೆ ರಸ್ತೆ ಮೇಲ್ಸೇತುವೆಯನ್ನು ₹20.25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈ ಆರ್‌ಒಬಿ ಪಂಡಿತನಹಳ್ಳಿ ಗ್ರಾಮ ಮತ್ತು ಎನ್‌ಎಚ್ -48 ರ ನಡುವೆ ಸಂಪರ್ಕವನ್ನು ಒದಗಿಸುವುದು ಮಾತ್ರವಲ್ಲದೆ ಸುರಕ್ಷಿತ ಮತ್ತು ಅಡೆತಡೆಯಿಲ್ಲದ ವಾಹನ ಸಂಚಾರವನ್ನು ಖಚಿತಪಡಿಸುತ್ತದೆ.

ಹೆಗ್ಗೆರೆ ಗೇಟ್‌ನಲ್ಲಿರುವ ಎಲ್‌ಸಿ ಸಂಖ್ಯೆ 44 ರ ಬದಲಿಗೆ ರಸ್ತೆ ಮೇಲ್ಸೇತುವೆಯನ್ನು ₹28.53 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದು ಹೆಗ್ಗೆರೆಯನ್ನು ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯೊಂದಿಗೆ ಸಂಪರ್ಕಿಸಿ, ಸುರಕ್ಷಿತ, ಸುಗಮ ಮತ್ತು ಅಡೆತಡೆಯಿಲ್ಲದ ಸಂಚಾರವನ್ನು ಖಚಿತಪಡಿಸುತ್ತದೆ.

ಜನರ ಬಹುದಿನಗಳ ಬೇಡಿಕೆ ಈಡೇರಿಕೆ – ಡಾ.ಜಿ.ಪರಮೇಶ್ವರ

ಈ ಸಂದರ್ಭದಲ್ಲಿ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ, ಮೇಲ್ಸೇತುವೆ ಕಾಮಗಾರಿಗಳು ಪ್ರಾರಂಭವಾಗುವ ಮೂಲಕ ಹೆಗ್ಗೆರೆ ಮತ್ತು ಪಂಡಿತನಹಳ್ಳಿ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ ಎಂದು ಹೇಳಿದರು.

ಈಗ ನಡೆಯುತ್ತಿರುವ ತುಮಕೂರು-ರಾಯದುರ್ಗ ಹೊಸ ರೈಲು ಮಾರ್ಗ ಯೋಜನೆಗೆ, ಬಹುತೇಕ ಭೂಸ್ವಾಧೀನ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ ಮತ್ತು ಉಳಿದ ಭೂಮಿಯನ್ನು ಶೀಘ್ರದಲ್ಲೇ ಹಸ್ತಾಂತರಿಸಲಾಗುವುದು ಎಂದು ಅವರು ತಿಳಿಸಿದರು.

ಮೇಲ್ಸೇತುವೆಗಳು ಹೆಚ್ಚಿನ ಸಂಪರ್ಕ ಮತ್ತು ಸುರಕ್ಷತೆ – ಸುರೇಶ್ ಗೌಡ

ತುಮಕೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಸುರೇಶ್ ಗೌಡ ಅವರು, ಜಿಲ್ಲೆಯಲ್ಲಿ ಬಾಕಿ ಇದ್ದ ರೈಲ್ವೆ ಕಾಮಗಾರಿಗಳಲ್ಲಿ ಹೆಚ್ಚಿನವುಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಅವು ಪ್ರಗತಿಯಲ್ಲಿವೆ. ಈ ಮೇಲ್ಸೇತುವೆಗಳು ಹೆಚ್ಚಿನ ಸಂಪರ್ಕ ಮತ್ತು ಸುರಕ್ಷತೆಯನ್ನು ಒದಗಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ತುಮಕೂರು ನಗರದ ಶಾಸಕರಾದ ಜ್ಯೋತಿ ಗಣೇಶ್, ಮುಖ್ಯ ಆಡಳಿತಾಧಿಕಾರಿ (ನಿರ್ಮಾಣ) ಅಜಯ್ ಶರ್ಮಾ; ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಪ್ರವೀಣ್ ಕಾತರಕಿ; ಜಿಲ್ಲಾಧಿಕಾರಿ ಶ್ರೀಮತಿ ಶುಭಾ ಕಲ್ಯಾಣ್‌, ಪೊಲೀಸ್‌ ವರಿಷ್ಠಾಧಿಕಾರಿ ಅಶೋಕ್‌ ಕೆ.ವಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು ಜಿ ಮತ್ತು ಇತರ ಹಿರಿಯ ರೈಲ್ವೆ ಅಧಿಕಾರಿಗಳು ಮತ್ತು ಪ್ರತಿನಿಧಿಗಳು ಉಪಸ್ಥಿತರಿದ್ದರು.


Share

You cannot copy content of this page