ಬೆಂಗಳೂರು, ನ.12: ಕರ್ನಾಟಕವು ನಾವೀನ್ಯತೆಯಲ್ಲಿ ಸದಾ ಮುಂಚೂಣಿಯಲ್ಲಿದ್ದು, ಡೀಪ್‌ಟೆಕ್ ಶಕ್ತಿಯನ್ನು ಜಾಗತಿಕ ನಾಯಕತ್ವವಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದ್ದೇವೆ. ಇದರಿಂದ ರಾಜ್ಯವು ಅತ್ಯಾಧುನಿಕ ತಂತ್ರಜ್ಞಾನಗಳಿಗೆ ವಿಶ್ವದ ಅತ್ಯಂತ ವಿಶ್ವಾಸಾರ್ಹ ಕೇಂದ್ರವಾಗಲಿದೆ ಎಂದು ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಎಂ. ಖರ್ಗೆ ತಿಳಿಸಿದರು.
ಐವಿಸಿಎ ಸರ್ಕಲ್ಸ್ ಬೆಂಗಳೂರು ಆವೃತ್ತಿಯಲ್ಲಿ ಪೀಕ್ ಎಕ್ಸ್‌ವಿ ಪಾರ್ಟ್‌ನರ್ಸ್ ಮತ್ತು ಸರ್ಜ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ವಿಸಿ ಕೌನ್ಸಿಲ್‌ನ ಸಹ-ಅಧ್ಯಕ್ಷ ರಾಜನ್ ಆನಂದನ್ ಅವರೊಂದಿಗಿನ ಚರ್ಚೆಯಲ್ಲಿ ಮಾತನಾಡಿದ ಸಚಿವರು, ಡೀಪ್ ಟೆಕ್ ದಶಕವನ್ನು ಪ್ರವೇಶಿಸುತ್ತಿದ್ದೇವೆ. ಇದನ್ನು ಸುಗಮಗೊಳಿಸಲು, ಸ್ಟಾರ್ಟ್-ಅಪ್‌ಗಳನ್ನು ಯುನಿಕಾರ್ನ್‌ಗಳಾಗಿ ಪರಿವರ್ತಿಸುವಲ್ಲಿ ಹೂಡಿಕೆ ಮಾಡಲಾಗುತ್ತಿದೆ ಎಂದರು.
ಜಾಗತಿಕವಾಗಿ ಉದ್ಯೋಗಾರ್ಹ ಪ್ರತಿಭೆಗಳನ್ನು ನಿರ್ಮಿಸುವುದು, ಬೆಂಗಳೂರಿನಾಚೆ ಉದ್ಯಮಿಗಳನ್ನು ಸಬಲೀಕರಣಗೊಳಿಸುವುದು ಮತ್ತು ಭಾರತದ ಭವಿಷ್ಯವನ್ನು ವ್ಯಾಖ್ಯಾನಿಸುವ ಮುಂದಿನ ಪೀಳಿಗೆಯ ಆಳವಾದ ತಂತ್ರಜ್ಞಾನ ಪರಿಹಾರಗಳನ್ನು ಸಕ್ರಿಯಗೊಳಿಸುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.
2025-26 ರ ಕೇಂದ್ರ ಬಜೆಟ್‌ನಲ್ಲಿ ಡೀಪ್‌ಟೆಕ್ ಅಭಿವೃದ್ಧಿಗಾಗಿ ಘೋಷಿಸಲಾದ ₹10,೦೦೦ ಕೋಟಿ, ತಂತ್ರಜ್ಞಾನ ನಿಧಿ ಮತ್ತು ಖಾಸಗಿ ವಲಯದ ಸಂಶೋಧನೆ ಮತ್ತು ನಾವೀನ್ಯತೆಗಳನ್ನು ವೇಗವರ್ಧಿಸಲು ₹1 ಲಕ್ಷ ಕೋಟಿ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ ನಿಧಿ ಸೇರಿದಂತೆ ಕೇಂದ್ರ ಸರ್ಕಾರದ ಇತ್ತೀಚಿನ ನೀತಿ ಕ್ರಮಗಳ ಬಗ್ಗೆಯೂ ಸಚಿವರು ಚರ್ಚೆ ನಡೆಸಿದರು.
ಚರ್ಚೆಯಲ್ಲಿ ಹೂಡಿಕೆದಾರರು, ಸಂಸ್ಥಾಪಕರು ಮತ್ತು ನೀತಿ ನಿರೂಪಕರು ಭಾಗವಹಿಸಿದ್ದರು.
