ಸಮಗ್ರ ಸುದ್ದಿ

ವೃಕ್ಷ ಸಂರಕ್ಷಣೆ, ಸಂವರ್ಧನೆ ಅರಣ್ಯ ಇಲಾಖೆಯ ಆದ್ಯತೆ ಆಗಬೇಕು: ಸಚಿವ ಈಶ್ವರ ಖಂಡ್ರೆ| 3 ಎಕರೆ ಮೇಲ್ಪಟ್ಟ ಅರಣ್ಯ ಒತ್ತುವರಿ ತೆರವಿಗೆ ಸೂಚನೆ

Share

ಬೆಳಗಾವಿ: ಇಂದು ಇಡೀ ಜಗತ್ತು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮ ಎದುರಿಸುತ್ತಿದ್ದು ವೃಕ್ಷ ಸಂವರ್ಧನೆ ಮತ್ತು ವೃಕ್ಷ ಸಂರಕ್ಷಣೆ ಅರಣ್ಯ ಇಲಾಖೆಯ ಆದ್ಯತೆಯಾಗಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.

ಬೆಳಗಾವಿಯ ಸುವರ್ಣ ಸೌಧದ ಸಮಿತಿ ಸಭಾಂಗಣದಲ್ಲಿಂದು ನಡೆದ ಬೆಳಗಾವಿ ವೃತ್ತದ ಅರಣ್ಯಾಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿದ್ದ ಅವರು, ಪಶ್ಚಿಮ ಘಟ್ಟ ಹೊರತು ಪಡಿಸಿ, ಬೆಳಗಾವಿ ವೃತ್ತದ ಇತರ ಭಾಗದಲ್ಲಿ ಹೆಚ್ಚಿನ ಸಸಿಗಳನ್ನು ನೆಟ್ಟು, ನಿರ್ವಹಣೆ ಮಾಡಿ ಹಸಿರು ಹೊದಿಕೆ ವ್ಯಾಪ್ತಿ ಹೆಚ್ಚಿಸುವಂತೆ ಸೂಚಿಸಿದರು.

ಬೆಳಗಾವಿ ನಗರದ ವ್ಯಾಪ್ತಿಯಲ್ಲಿ ಬರುವ ಹೆದ್ದಾರಿಗಳು, ಜಿಲ್ಲಾ ಮುಖ್ಯ ರಸ್ತೆ ಹಾಗೂ ಇತರ ಸಂಪರ್ಕ ರಸ್ತೆಗಳ ಎರಡೂ ಬದಿಯಲ್ಲಿ ಹೆಚ್ಚಿನ ಸಸಿಗಳನ್ನು ನೆಟ್ಟು ಪೋಷಿಸುವಂತೆ ಸೂಚಿಸಿದ ಅವರು, ಈ ಸಸಿಗಳ ಪೈಕಿ ಎಷ್ಟು ಬದುಕಿ ಉಳಿದಿವೆ ಎಂಬ ಬಗ್ಗೆ ಆಡಿಟ್ ಮಾಡಿ ವರದಿ ಸಲ್ಲಿಸಲು ತಿಳಿಸಿದರು.

ಪರಿಸರ ಪ್ರವಾಸೋದ್ಯಮಕ್ಕೆ ಒತ್ತು :

ಅರಣ್ಯ ಇಲಾಖೆ ಕೈಗೊಳ್ಳುವ ಎಲ್ಲ ಕಾಮಗಾರಿಗಳಲ್ಲಿ ಪಾರದರ್ಶಕತೆ ಕಾಪಾಡುವಂತೆ ತಿಳಿಸಿದ ಅವರು,

ಗೋಕಾಕ ಘಟಪ್ರಭ ಪಕ್ಷಿಧಾಮದಲ್ಲಿ ಪ್ರವಾಸಿಗರಿಗೆ ಹೆಚ್ಚಿನ ಮೂಲಭೂತ ಸೌಕರ್ಯ ಕಲ್ಪಿಸಿ, ಹೆಚ್ಚುವರಿ ದೋಣಿಗಳನ್ನು ನಿಯೋಜಿಸಿ ಪರಿಸರ ಪ್ರವಾಸೋದ್ಯಮಕ್ಕೆ ಒತ್ತು ನೀಡುವಂತೆ ಈಶ್ವರ ಖಂಡ್ರೆ ತಿಳಿಸಿದರು.

ವಜ್ರಪೋಹ ಜಲಪಾತಕ್ಕೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ವನ್ಯಜೀವಿಗಳಿಗೆ ತೊಂದರೆ ನೀಡುತ್ತಿದ್ದಾರೆ ಎಂದು ದೂರುಗಳು ಬಂದಿದ್ದು, ಪ್ರವೇಶ ನಿರ್ಬಂಧಿಸುವಂತೆ ಹಾಗೂ ಯಾವುದೇ ಅನಾಹುತ ಸಂಭವಿಸದಂತೆ ಕಟ್ಟೆಚ್ಚರ ವಹಿಸಲು ತಿಳಿಸಿದರು.

ಅರಣ್ಯ ಒತ್ತುವರಿ ತೆರವಿಗೆ ಸೂಚನೆ:
ಪಟ್ಟಾಭೂಮಿ ಸೇರಿ ಜೀವನೋಪಾಯಕ್ಕೆ 3 ಎಕರೆಗಿಂತ ಕಡಿಮೆ ಅರಣ್ಯ ಒತ್ತುವರಿ ಮಾಡಿರುವ ಬಡವರಿಗೆ ತೊಂದರೆ ನೀಡದೆ, 3 ಎಕರೆಗಿಂತ ಹೆಚ್ಚಿನ ಹಾಗೂ 2015ರ ನಂತರದ ಎಲ್ಲ ಹೊಸ ಒತ್ತುವರಿಯನ್ನು ತೆರವುಗೊಳಿಸಲು ಅರಣ್ಯ ಸಚಿವರು ಸೂಚಿಸಿದರು.

ಒತ್ತುವರಿ ತೆರವು ಮಾಡಿದ ಪ್ರದೇಶದಲ್ಲಿ ಸ್ಥಳೀಯ ಪ್ರಭೇದದ ಸಸ್ಯಗಳನ್ನು ನೆಟ್ಟು ನೆಡುತೋಪುಗಳನ್ನು ನಿರ್ಮಿಸುವ ಮೂಲಕ ಹಸಿರು ವಲಯ ಹೆಚ್ಚಿಸುವಂತೆ ಆದೇಶ ನೀಡಿದರು.

ಜನ ಸಂಪರ್ಕ ಸಭೆ ನಡೆಸಲು ನಿರ್ದೇಶನ:
ಮಾನವ-ವನ್ಯಜೀವಿ ಸಂಘರ್ಷ ಇರುವ ಅರಣ್ಯದಂಚಿನ ಗ್ರಾಮಗಳಲ್ಲಿ ಜನ ಸಂಪರ್ಕ ಸಭೆ ನಡೆಸಿ, ಜನರಿಗೆ ಜಾಗೃತಿ ಮೂಡಿಸಲು ಮತ್ತು ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿ ವನ್ಯಜೀವಿಗಳ ಸಾವಿಗೆ ಕಾರಣವಾಗದಂತೆ ಅರಿವು ಮೂಡಿಸಲು ಹಾಗೂ ವನ್ಯಜೀವಿ ಕಾನೂನಿನ ಬಗ್ಗೆ ತಿಳಿಸುವಂತೆ ಸೂಚಿಸಿದರು.

ಸಭೆಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಚೌವ್ಹಾಣ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿ ಮತ್ತಿತರರು ಪಾಲ್ಗೊಂಡಿದ್ದರು.


Share

You cannot copy content of this page