ಬೆಳಗಾವಿ: 2011 ರ ಜನಗಣತಿ ಪ್ರಕಾರ ಬೀಳಗಿ ಪಟ್ಟಣ ಪಂಚಾಯ್ತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಸಾಧ್ಯವಿಲ್ಲ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಸದಸ್ಯ ಜೆ.ಟಿ.ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 2011 ರ ಪ್ರಕಾರ ಪಟ್ಟಣದಲ್ಲಿ 20 ರಿಂದ 50 ಸಾವಿರ ಇರಬೇಕು. ಆದರೆ, ಜನಸಂಖ್ಯೆ ಕಡಿಮೆ ಇದೆ. ಅಲ್ಲದೇ, ಪ್ರತಿ ಚದರ ಕಿಲೋಮೀಟರ್ ಗೆ 1500 ಜನಸಾಂದ್ರತೆ ಇರಬೇಕು. ಕೃಷಿಯೇತರ ಚಟುವಟಿಕೆಗಳು ಶೇ.50 ಕ್ಕಿಂತ ಹೆಚ್ಚಿರಬೇಕು. ಆದರೆ, ಬೀಳಗಿಯಲ್ಲಿ19731 ಜನಸಂಖ್ಯೆ ಇದೆ ಎಂದು ಮಾಹಿತಿ ನೀಡಿದರು.
ಈ ಹಿನ್ನೆಲೆಯಲ್ಲಿ ಅಗತ್ಯ ಮಾನದಂಡಗಳು ಇಲ್ಲದಿರುವ ಹಿನ್ನೆಲೆಯಲ್ಲಿ ಈ ಪಟ್ಟಣ ಪಂಚಾಯ್ತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಸದ್ಯದ ಮಟ್ಟಿಗೆ ಅಸಾಧ್ಯ. ಆದಾಗ್ಯೂ, ಇನ್ನೊಮ್ಮೆ ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಂಡು ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದು ಭರವಸೆ ನೀಡಿದರು.
ವಿಜಯಪುರ ರಸ್ತೆ ಅಭಿವೃದ್ಧಿಗೆ ಕ್ರಮ
ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿಜಯಪುರದ ಶಿವಾಜಿ ವೃತ್ತದಿಂದ ಕೆಎಸ್ಸಾರ್ಟಿಸಿ ವರ್ಕ್ ಶಾಪ್ ವರೆಗಿನ ರಸ್ತೆಯನ್ನು ಅಗಲೀಕರಣ ಮತ್ತು ಅಭಿವೃದ್ಧಿಪಡಿಸಲು ಸರ್ಕಾರ ಬದ್ಧವಾಗಿದೆ. ಆದರೆ, ಭೂಸ್ವಾಧೀನ ಮತ್ತು ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಯೋಜನಾ ವರದಿಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಮಹಾನಗರ ಪಾಲಿಕೆಗೆ ಸೂಚನೆ ನೀಡಲಾಗಿದೆ. ಅದರನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
