ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ನಡೆಸುವ ಕುರಿತಂತೆ ಪರಿಶೀಲಿಸಲು ಸಮಿತಿ ರಚಿಸಲಾಗಿದೆ ಎಂದು ಗೃಹ ಸಚಿವರಾದ ಜಿ.ಪರಮೇಶ್ವರ ಅವರು ತಿಳಿಸಿದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಸುವ ಕುರಿತಂತೆ ವಿಧಾನಸೌಧದ ಉಪಸಮಿತಿ ಕೊಠಡಿಯಲ್ಲಿ ಇಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಡಿಸೆಂಬರ್ 24ರಂದು ವಿಜಯ್ ಹಜಾರೆ ಕ್ರಿಕೆಟ್ ಪಂದ್ಯ ನಡೆಸಲು ಅನುಮತಿ ನೀಡುವಂತೆ ಕೆಎಸ್‌ಸಿಎ ಮನವಿ ಮಾಡಿದೆ. ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡುವುದಿಲ್ಲ. ಪಂದ್ಯ ಮಾತ್ರ ನಡೆಸುತ್ತೇವೆ ಎಂದು ಕೆಎಸ್‌ಸಿಎ ಅವರು ಕೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರೇಕ್ಷಕರ, ಕ್ರೀಡಾಪಟುಗಳ ಸುರಕ್ಷತೆಯೆ ಹಿತಾದೃಷ್ಟಿಯಿಂದ ಜಿಬಿಎ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಲೋಕೋಪಯೋಗಿ, ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆ, ಆರೋಗ್ಯ ಇಲಾಖೆಯನ್ನೊಳಗೊಂಡ ಸಮಿತಿಯು ಚಿನ್ನಸ್ವಾಮಿ ಸ್ಟೇಡಿಯಂಗೆ ಭೇಟಿ ನೀಡಿ, ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡಲಿದ್ದಾರೆ. ಸಮಿತಿ ನೀಡುವ ವರದಿ ಆಧರಿಸಿ, ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.
ಈಗಾಗಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತರು 17 ಅಂಶಗಳ ಸಲಹೆ ಸೂಚನೆಗಳನ್ನು ಪಾಲಿಸುವುದು ಅಗತ್ಯವಾಗಿರುತ್ತದೆ ಎಂದು ಸೂಚಿಸಿ ಪತ್ರ ಬರೆದಿದ್ದರು. ಅದರಲ್ಲಿ ಏನೆಲ್ಲ ಪೂರ್ಣಗೊಳಿಸಿದ್ದಾರೆ ಎಂಬುದನ್ನು ಪರಿಶೀಲಿಸಿ, ಇಂದು ಸಂಜೆ 5 ಗಂಟೆಯೊಳಗೆ ಸಮಿತಿಯು ಸರ್ಕಾರಕ್ಕೆ ತಿಳಿಸಲಿದೆ. ಕೆಲ ದಿನಗಳ ಹಿಂದೆಯಷ್ಟೇ ಕೆಎಸ್‌ಸಿಎ ಹೊಸ ಸಮಿತಿ ರಚನೆಯಾಗಿದೆ. ಎಲ್ಲವನ್ನು ಪೂರ್ಣಗೊಳಿಸುವುದಾಗಿ ಕೆಎಸ್‌ಸಿಎ ಅವರು ಹೇಳಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಕೆಎಸ್‌ಸಿಎ ಅಧ್ಯಕ್ಷರಾದ ವೆಂಕಟೇಶ್ ಪ್ರಸಾದ್, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ. ಸಲೀಂ, ಗೃಹ ಇಲಾಖೆಯ ಕಾರ್ಯದರ್ಶಿ ಕೆ.ವಿ. ಶರತ್ ಚಂದ್ರ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಾಂತ್ ಕುಮಾರ್ ಸಿಂಗ್, ಎಡಿಜಿಪಿ ಆರ್.ಹಿತೇಂದ್ರ ಅವರು ಹಾಗೂ ಕೆಎಸ್‌ಸಿಎ ಪದಾಧಿಕಾರಿಗಳು ಉಪಸ್ಥಿತರಿದ್ದರು.
