ಬೆಂಗಳೂರು: ಹವಾಮಾನ ವೈಪರೀತ್ಯಗಳು, ಮಾರುಕಟ್ಟೆ ಸಮಸ್ಯೆ ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ಕೃಷಿಕರು ಸಮಸ್ಯೆ ಎದುರಿಸುತ್ತಿದ್ದು, ಇಂತಹ ವ್ಯತ್ಯಾಸಗಳ ನಡುವೆಯೂ ಕೆಲವು ಕೃಷಿಕರು ಯಶ್ವಸಿಯಾಗಿದ್ದಾರೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ತಿಳಿಸಿದರು.
ಸಮನ್ವಯ ಟ್ರಸ್ಟ್, ಪುಡ್ ಚೈನ್ ಕೃಷಿ ಸಂಸ್ಥೆ, ಕೃಷಿ ತಂತ್ರಜ್ಞರ ಸಂಸ್ಥೆ, ಹಾಗೂ ಐಸಿಎಆರ್- ಕೆವಿಕೆ ದಕ್ಷಿಣ ಕನ್ನಡ ಇವರ ಸಹಯೋಗದಲ್ಲಿ ಬೆಂಗಳೂರಿನ ಲ್ಲಿರುವ ಕೃಷಿ ತಂತ್ರಜ್ಞರ ಸಂಸ್ಥೆ ಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ರೈತ ದಿನಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೃಷಿಗೆ ಮತ್ತಷ್ಟು ಒತ್ತು ನೀಡಿದರೆ ಕೃಷಿಕರ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.
ರೈತರು ವೈಜ್ಞಾನಿಕ, ಸಾವಯವ, ಸಮಗ್ರ ಹಾಗು ಸುಸ್ಥಿರ ಕೃಷಿಯ ಕಡೆಗೆ ಹೆಚ್ಚು ಗಮನಹರಿಸಬೇಕು. ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿ ಪರಿವರ್ತಿಸಬೇಕು, ಇದಕ್ಕಾಗಿ ರೈತರಿಗೆ ಸರ್ಕಾರ ಹಾಗೂ ಕೃಷಿ ವಿವಿಗಳು ಸದಾ ನೇರವಾಗಲಿವೆ ಎಂದು ಸಚಿವರು ತಿಳಿಸಿದರು.
ರೈತರ ಬದುಕು ಹಸನು ಮಾಡುವುದು ನಮ್ಮ ಹೊಣೆ. ನಾನು ಕೃಷಿ ಸಚಿವನಾದ ನಂತರ ಸಾಕಷ್ಟು ಬದಲಾವಣೆ ತಂದಿದ್ದೇನೆ. ಕಳೆದ ಎರಡುವರೆ ವರ್ಷಗಳಲ್ಲಿ ರೈತರ ಬೆಳೆ ವಿಮೆಗೆ ಸರ್ಕಾರ 5000 ಕೋಟಿ ರೂಪಾಯಿ ಹಣ ನೀಡಿದ್ದು, ರೈತರ ಕೃಷಿ ಯಾಂತ್ರಿಕರಣಕ್ಕೆ 1500 ಸಾವಿರ ಕೋಟಿ ಹಣ ಸಹಾಯಧನ ನೀಡಿದೆ ಎಂದು ತಿಳಿಸಿದರು.
ನಮ್ಮ ಸರ್ಕಾರ ಕೃಷಿಗೆ ಬೆಂಬಲ, ಸಂಶೋಧನೆಗಳಿಗೆ ನೆರವು, ಪ್ರೋತ್ಸಾಹ ನೀಡಲು ಸದಾ ಸಿದ್ಧ ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಕಾಶ್, ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷ ಡಾ.ಎ.ಬಿ.ಪಾಟೀಲ್, ಸಮನ್ವಯ ಟ್ರಸ್ಟ್ ನ ಸುಮಲತಾ ಕೆ.ಹೆಚ್. ಎಫ್ ಕೆಸಿಸಿಐನ ಉಪಾಧ್ಯಕ್ಷ ಶ್ರೀರಾಮ್ ಪ್ರಸಾದ್, ರೂಪಲತಾ ಹಾಗೂ ಡಾ.ಹಿತ್ತಲಮನಿ ಭಾಗಿಯಾಗಿದ್ದರು.
ಪದ್ಮಶ್ರಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪಡೆದ ರೈತರು ಹಾಗು ಕೃಷಿ ಇಲಾಖೆಯಲ್ಲಿ ಸಾಧನೆ ಮಾಡಿದ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
ಪದ್ಮಶ್ರಿ ವಿಜೇತಾರಾದ ಹರೆಕಾಳ ಹಾಜಬ್ಬ, ಅಬ್ದುಲ್ ಖಾದರ್ ನಡಕಟ್ಟಿನ್, ಸತ್ಯನಾರಾಯಣ ಬೇಲೇರಿ, ಅಮೈ ಮಹಾಲಿಂಗ ನಾಯಕ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತಾರಾದ ಡಾ. ಹಿತ್ತಲಮನಿ, ಹಾಗೂ ಡಾ. ವಿ.ಸಿ. ರಂಗಸ್ವಾಮಿಯವರಿಗೆ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಸನ್ಮಾನಿಸಿದರು.
