ಬೆಂಗಳೂರು: ರಾಷ್ಟ್ರಕವಿ ಕುವೆಂಪು ಜನ್ಮದಿನ ಹಾಗೂ ವೈಚಾರಿಕ ದಿನಾಚರಣೆ ಅಂಗವಾಗಿ ಇದೇ ತಿಂಗಳ 28ರಿಂದ 30ರವರೆಗೆ ಮೂರು ದಿನ ಯಾದಗಿರಿಯಲ್ಲಿ ರಾಜ್ಯಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನ-2025 ನಡೆಯುತ್ತಿದ್ದು, ವೈಚಾರಿಕ ವಿಚಾರಧಾರೆಗಳಿಗೆ ಪುರಾತನ ನಗರಿ ಸಜ್ಜುಗೊಂಡಿದೆ.
ಮೌಡ್ಯಾಚರಣೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ವೈಜ್ಞಾನಿಕತೆ ವಿಚಾರಧಾರೆಗಳನ್ನು ಮುಟ್ಟಿಸುತ್ತಿರುವ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ವೈಜ್ಞಾನಿಕ ಸಮ್ಮೇಳನದ ನೇತೃತ್ವ ವಹಿಸಿದೆ. ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಮಾನವ ಬಂಧುತ್ವ ವೇದಿಕೆಯ ರಾಜ್ಯ ಹಾಗೂ ಯಾದಗಿರಿಯ ಜಿಲ್ಲಾ ಸಂಘಟನೆಗಳ ವತಿಯಿಂದ ಸಮ್ಮೇಳನ ನಡೆಯುತ್ತಿದೆ.
ಇಸ್ರೋ, ನೆಹರು ತಾರಾಲಯ, ಭಾರತೀಯ ವಾಯುಪಡೆ, ಡಿಆರ್ ಡಿಓ, ಸಿಎಫ್ಟಿಆರ್, ವಿಶ್ವೇಶ್ವರಯ್ಯ ಕೈಗಾರಿಕೆ ಹಾಗೂ ತಾಂತ್ರಿಕ ಮ್ಯೂಸಿಯಂ ಮತ್ತಿತತರ ಸಂಸ್ಥೆಗಳು ಸಮ್ಮೇಳನದ ಸಹಭಾಗಿತ್ವ ವಹಿಸಿವೆ. ಯಾದಗಿರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಸಮ್ಮೇಳನವು `ನಮ್ಮ ನಡಿಗೆ ವಿಜ್ಞಾನದೆಡೆಗೆ’ ಎಂಬ ಘೋಷವಾಕ್ಯದೊಂದಿಗೆ ಜರುಗುತ್ತಿದೆ. ವಿಶೇಷವಾಗಿ ಸಮ್ಮೇಳನವು ವಿಜ್ಞಾನ-ಸಾಹಿತ್ಯ, ಸಂಸ್ಕೃತಿಯ ಸಮಾಗಮವಾಗಲಿದೆ.
ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ:
ಮೂರು ದಿನಗಳ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಆಧ್ಯಾತ್ಮಿಕ ಚಿಂತಕ, ಶರಣ ಸಾಹಿತಿ ಶಹಾಪುರದ ವಿಶ್ವಾರಾಧ್ಯ ಸತ್ಯಂಪೇಟೆ ವಹಿಸಲಿದ್ದಾರೆ. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಸಂಸ್ಥಾಪಕ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ಅಧ್ಯಕ್ಷತೆಯಲ್ಲಿ ಸಮ್ಮೇಳನವು ನಡೆಯುತ್ತಿದೆ. ಸಮ್ಮೇಳನದ ಯಶಸ್ವಿಗಾಗಿ ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸಲಾಗಿದೆ.
ಸಮ್ಮೇಳನದ ಯಶಸ್ವಿಗೆ ಗುರುಮಠಕಲ್ ಖಾಸಾಮಠದ ಶ್ರೀ ಶಾಂತವೀರ ಗುರು ಮುರುಘ ರಾಜೇಂದ್ರ ಸ್ವಾಮೀಜಿ, ಶಾಸಕರಾದ ಯಾದಗಿರಿಯ ಚನ್ನಾರೆಡ್ಡಿ ಪಾಟೀಲ್ ತುನ್ನೂರು, ಶರಣಗೌಡ ಕುಂದಕೂರು, ರಾಜಾ ವೇಣುಗೋಪಾಲ್ ನಾಯಕ ಇನ್ನಿತರ ಗಣ್ಯರು ಶ್ರಮಿಸುತ್ತಿದ್ದಾರೆ. ಡಿ.28ರಂದು ಸಮ್ಮೇಳನಕ್ಕೆ ಅದ್ದೂರಿಯಾಗಿ ಚಾಲನೆ ಸಿಗಲಿದೆ. ಯಾದಗಿರಿಯ ಮೈಲಾಪುರ ಅಗಸಿಯಿಂದ ವೈಜ್ಞಾನಿಕ ಮೆರವಣಿಗೆ ಆರಂಭವಾಗಲಿದ್ದು, ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಧ್ವಜ ಹಸ್ತಾಂತರ ಮಾಡಲಿದ್ದಾರೆ.
ವಿಚಾರವಾದಿಗಳು, ವೈಜ್ಞಾನಿಕ ಚಿಂತಕರ ಸಮ್ಮೀಲನ:
ನಾಡಿನ ವಿವಿಧೆಡೆಯಿಂದ ವಿಚಾರವಾದಿಗಳು, ವೈಜ್ಞಾನಿಕ ಚಿಂತಕರು, ವಿವಿಧ ಸಂಘಸಂಸ್ಥೆಗಳ ಮುಖಂಡರು ಭಾಗವಹಿಸಲಿದ್ದಾರೆ. ರಾಜ್ಯದ ನಾನಾ ಭಾಗಗಳಿಂದ ಸಹಸ್ರಾರು ಜನರು ಸಮ್ಮೇಳನಕ್ಕೆ ಸಾಕ್ಷಿಯಾಗಲಿದ್ದಾರೆ. ಕಲಾತಂಡಗಳೂ ಆಗಮಿಸಲಿದ್ದು, ಸಮ್ಮೇಳನಕ್ಕೆ ಕಲಾಮೆರಗು ನೀಡಲಿವೆ. ಡಿ.29ರಂದು ಸೋಮವಾರ ಬೆಳಿಗ್ಗೆ ಯಾದಗಿರಿ ಜಿ.ಪಂ. ಕಾರ್ಯನಿರ್ವಾಹಣಾಧಿಕಾರಿ ಲವೀಶ ಒರಾಡಿಯ ರಾಷ್ಟ್ರ ಧ್ವಜಾರೋಹಣ ಮಾಡಲಿದ್ದು, ಪರಿಷತ್ತು ಧ್ವಜಾರೋಹಣವನ್ನು ಪರಿಷತ್ತು ಸಂಸ್ಥಾಪಕ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ನೆರವೇರಿಸಲಿದ್ದಾರೆ.
ಡಾ. ಹುಲಿಕಲ್ ನಟರಾಜ್ ಅವರ 6 ಸಂಪುಟ ಪುಸ್ತಕಗಳ ಬಿಡುಗಡೆ:
ನಂತರ ಸಮಾರಂಭದ ಉದ್ಘಾಟನೆಯನ್ನು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಮಾಡಲಿದ್ದಾರೆ. ಗುರುಮಠಕಲ್ ನ ಶ್ರೀ ಶಾಂತವೀರ ಗುರು ಮುರುಘಾರಾಜೇಂದ್ರ ಸ್ವಾಮೀಜಿ, ಬೈಲೂರು ನಿಷ್ಕಲಮಂಟಪದ ಶ್ರೀನಿಜಗುಣಾನಂದ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಸಮಾರಂಭದಲ್ಲಿ ಡಾ. ಹುಲಿಕಲ್ ನಟರಾಜ್ ಅವರ 6 ಸಂಪುಟ ಪುಸ್ತಕಗಳ ಬಿಡುಗಡೆಯನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾಡಲಿದ್ದಾರೆ. ವೈಜ್ಞಾನಿಕ ಪರಿಷತ್ತು ಮಹಾ ಪೋಷಕರಾದ ಡಾ.ಎ.ಎಸ್. ಕಿರಣ್ ಕುಮಾರ್ ವಿಜ್ಞಾನಗಿರಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.
ಜೀವಮಾನ ಸಾಧನ ಪ್ರಶಸ್ತಿಗಳ ಪ್ರದಾನ:
ವಿಜ್ಞಾನ ವಸ್ತು ಪ್ರದರ್ಶನವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಉದ್ಘಾಟಿಸುವರು. ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ ಅವರು ಪ್ರಮಾಣವಚನ ಬೋಧಿಸಲಿದ್ದಾರೆ. ಶಾಸಕರುಗಳಾದ ಶರಣಗೌಡ ಕಂದಕೂರು, ರಾಜಾ ವೇಣುಗೋಪಾಲ ನಾಯಕ ಅವರು 2026ರ ಕ್ಯಾಲೆಂಡರ್ ಮತ್ತು ದಿನಚರಿಗಳನ್ನು ಬಿಡುಗಡೆ ಮಾಡಲಿದ್ದಾರೆ. ರಾಯಚೂರು ಸಂಸದ ಜಿ. ಕುಮಾರನಾಯಕ್ 2025-ಜೀವಮಾನ ಸಾಧನ ಪ್ರಶಸ್ತಿ, ಕಲಬರುಗಿ ಸಂಸದ ರಾಧಾಕೃಷ್ಣ ದೊಡ್ಡಮನಿ, ವಿಶಿಷ್ಟ ಸೇವಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಪರಿಷತ್ತು ಅಧ್ಯಕ್ಷತೆ ಡಾ. ಹುಲಿಕಲ್ ನಟರಾಜ್ ಅಧ್ಯಕ್ಷತೆ ವಹಿಸುವರು.
ಸಮಾರೋಪ:
ಸಮ್ಮೇಳನದ ಸಮಾರೋಪ ಸಮಾರಂಭವು ಡಿ.30ರಂದು ನಡೆಯಲಿದೆ. ಯಾದಗಿರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಧೀಶರಾದ ಮರುಳಸಿದ್ದಪ್ಪ ಸಮಾರೋಪದ ಅಧ್ಯಕ್ಷತೆ ವಹಿಸಲಿದ್ದಾರೆ.
ವೈಚಾರಿಕ ಚಿಂತನಗೋಷ್ಠಿ, ಪವಾಡಗಳ ಅನಾವರಣ:
ಮೂರು ದಿನಗಳ ಸಮ್ಮೇಳನದಲ್ಲಿ ʻಸಂವಿಧಾನ- ಸಂವೇದನೆʼ, ʻಕಂದಾಚಾರದ ಸುಳಿಯೊಳಗೆʼ, ʻಎ.ಐ. ಏನು ಮಾಯವೋʼ, ʻಮೌಢ್ಯತೆಯ ಮಾರಿಯನು ಹೊರದೂಡಲು ಬನ್ನಿʼ ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ, ಏನು ಮಾಡಿ ಏನು ಬಂತಣ್ಣ ಓ ರೈತಣ್ಣ, ಎಲ್ಲಾ ಮತದ ಹೊಟ್ಟ ತೂರು ಹೀಗೆ ನಾನಾ ವೈಚಾರಿಕ ವಿಷಯಗಳ ಕುರಿತ ಚಿಂತನಗೋಷ್ಠಿಗಳು ನಡೆಯಲಿವೆ. ʻಹುಚ್ಚು ಮನದ ಕುದುರೆಯನ್ನೇರಿʼ – ಪವಾಡಗಳ ಅನಾವರಣ ಕೂಡ ನಡೆಯಲಿದೆ. ʻಕಾಲಚಕ್ರʼ ನಾಟಕ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ. ಹುಲಿಕಲ್ ನಟರಾಜ್,
ರಾಜ್ಯದ ವಿವಿಧೆಡೆ ನಡೆದಂತಹ ನಾಲ್ಕೂ ವೈಜ್ಞಾನಿಕ ಸಮ್ಮೇಳನಗಳು ಅತ್ಯಂತ ಯಶಸ್ವಿಗೊಂಡಿವೆ. ಶಿವಮೊಗ್ಗದಲ್ಲಿ ಖ್ಯಾತ ವಿಜ್ಞಾನಿ ಡಾ. ಎ.ಎಸ್. ಕಿರಣ್ ಕುಮಾರ್, ತುಮಕೂರಿನಲ್ಲಿ ನ್ಯಾಯಮೂರ್ತಿ ಡಾ. ನಾಗಮೋಹನ್ ದಾಸ್, ಲಿಂಗಸಗೂರಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಬೆಂಗಳೂರಿನಲ್ಲಿ ನಟಿ ಉಮಾಶ್ರೀಯವರು ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು. ಯಾದಗಿರಿಯ ಸಮ್ಮೇಳನವು ಯಶಸ್ವಿಯಾಗಲಿದೆ. ಶರಣ ಸಾಹಿತಿ ಶಹಾಪುರದ ವಿಶ್ವಾರಾಧ್ಯ ಸತ್ಯಂಪೇಟೆ ಈ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದು, 25 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ.
