ಸಮಗ್ರ ಸುದ್ದಿ

ಬೆಂಗಳೂರಿನ ನೀರಿನ ಬಿಲ್ ಬಾಕಿದಾರರಿಗೆ ಒನ್ ಟೈಮ್ ಸೆಟಲ್‌ಮೆಂಟ್ ಯೋಜನೆ ಜಾರಿ ‌: ಡಾ ರಾಮ್‌ ಪ್ರಸಾತ್‌ ಮನೋಹರ್‌ | ಬಡ್ಡಿ, ದಂಡ ಸಂಪೂರ್ಣ ಮನ್ನಾ

Share

ಬೆಂಗಳೂರು : ದೀರ್ಘಕಾಲದಿಂದ ನೀರಿನ ಬಿಲ್ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ಬೆಂಗಳೂರು ಜಲಮಂಡಳಿಯಿಂದ ಒನ್‌ ಟೈನ್‌ ಸೆಟಲ್‌ಮೆಂಟ್‌ ಯೋಜನೆಗೆ ಸರ್ಕಾರದ ನಗರಾಭಿವೃದ್ದಿ ಇಲಾಖೆ ಗ್ರೀನ್‌ ಸಿಗ್ನಲ್‌ ನೀಡಿದ್ದು, ಬಾಕಿ ಇರುವ ನೀರಿನ ಬಿಲ್ಲಿನ ಅಸಲು ಮೊತ್ತವನ್ನು ಏಕಕಾಲದಲ್ಲಿ ಪಾವತಿಸಿದರೆ, ಬಡ್ಡಿ ಮತ್ತು ದಂಡದ ಮೊತ್ತವನ್ನು ಶೇ.100 ರಷ್ಟು ಮನ್ನಾ ಮಾಡುವ ಯೋಜನೆ ಜಾರಿಗೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್‌ ಅವರ ನಿರ್ದೇಶನದಂತೆ ಗ್ರಾಹಕ ಸ್ನೇಹಿ ನಿಯಮಾವಳಿಗಳನ್ನು ಅಳವಡಿಸಲಾಗಿದ್ದು, ಗ್ರಾಹಕರು ನೇರವಾಗಿ ಜಲಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ, ಹೊಸ ಅಪ್‌ ಒಂದನ್ನು ನಿರ್ಮಿಸಲಾಗುತ್ತಿದ್ದು ಇವುಗಳಲ್ಲಿ ನೋಂದಣಿ ಮಾಡಿಕೊಂಡ ಗ್ರಾಹಕರಿಗೆ ಹಣ ಪಾವತಿಸಲು ಕಾಲಾವಕಾಶ ಮತ್ತು ಅಂತಿಮ ದಿನಾಂಕವನ್ನು ತಿಳಿಸಲಾಗುತ್ತದೆ. ಸನ್ಮಾನ್ಯ ಉಪಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಯೋಜನೆ ಜಾರಿಗೊಳಿಸುವ ದಿನಾಂಕವನ್ನು ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ.

ಯೋಜನೆಯ ವಿವರಗಳು:

  • 3 ತಿಂಗಳ ಸುವರ್ಣಾವಕಾಶ: ಈ ಯೋಜನೆಯು ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ಮಾತ್ರ ಚಾಲ್ತಿಯಲ್ಲಿರುತ್ತದೆ. ಈ ಅವಧಿಯಲ್ಲಿ ಪೂರ್ಣ ಅಸಲು ಪಾವತಿಸಿದರೆ, ಅವರ ಖಾತೆಯನ್ನು ‘ಕ್ಲಿಯರ್’ ಮಾಡಲಾಗುತ್ತದೆ.

ಹೈದರಾಬಾದ್ ಮಾದರಿ: ಹೈದರಾಬಾದ್‌ನಲ್ಲಿ ಈ ಯೋಜನೆ ಎರಡು ಬಾರಿ ಯಶಸ್ವಿಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದೇ ಮಾದರಿಯನ್ನು ಇದೀಗ ಬೆಂಗಳೂರಿನಲ್ಲಿ ಅಳವಡಿಸಿಕೊಳ್ಳಲಾಗಿದೆ.

ಬ್ಯಾಕ್ ಎಂಡ್‌ನಲ್ಲಿ ಬಡ್ಡಿ ಮನ್ನಾ: ಗ್ರಾಹಕರು ಅಸಲು ಮೊತ್ತವನ್ನು ಪಾವತಿಸುತ್ತಿದ್ದಂತೆಯೇ, ತಂತ್ರಾಂಶದಲ್ಲಿ ಬಡ್ಡಿ ಮತ್ತು ದಂಡದ ಮೊತ್ತ ಸ್ವಯಂಚಾಲಿತವಾಗಿ ಮನ್ನಾ ಆಗಲಿದೆ.

ಕಟ್ಟಡಗಳ ಭೇಟಿ: ಸರ್ಕಾರಿ ಕಟ್ಟಡಗಳು ಮತ್ತು ವಾಣಿಜ್ಯ ಮಳಿಗೆಗಳಿಗೆ ಜಲಮಂಡಳಿಯ ವಿಶೇಷ ತಂಡವೇ ಖುದ್ದು ಭೇಟಿ ನೀಡಿ ಮಾಹಿತಿ ನೀಡಲಿದೆ. ವಸತಿ ಕಟ್ಟಡಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಅಧಿಕಾರಿಗಳು ಸಂಪರ್ಕಿಸುತ್ತಾರೆ ಹಾಗೂ ವೆಬ್‌ಸೈಟ್ ಮತ್ತು ಆಪ್‌ ಮೂಲಕವೂ ಮುಕ್ತ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.


Share

You cannot copy content of this page