ಕೃಷಿ

ಪ್ರತಿ ತಾಲುಕಿಗೂ ಮೆಕ್ಕೆ ಜೋಳ ಖರೀದಿ ಕೇಂದ್ರ ತೆರೆಯಬೇಕು: ಬಸವರಾಜ ಬೊಮ್ಮಾಯಿ ಆಗ್ರಹ

Share

ಹಾವೇರಿ: ಮೆಕ್ಕೆಜೋಳ ಖರೀದಿ ವಿಚಾರದಲ್ಲಿ ರಾಜ್ಯ ಸರ್ಕಾರ ರೈತರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿ ರೈತರಿಗೆ ಮೋಸ ಮಾಡಿದೆ. ಉತ್ತರ ಕರ್ನಾಟಕದಲ್ಲಿ ಶೇ. 80 ರಷ್ಟು ರೈತರು ಮೆಕ್ಕೆಜೋಳ ಬೆಳೆದಿದ್ದಾರೆ. ಪ್ರತಿ ತಾಲೂಕು ಕೇಂದ್ರದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮಾಯಿ ಆಗ್ರಹಿಸಿದರು.

ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 54 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಳೆದಿದೆ. ಇವರು 10 ಲಕ್ಷ ಮೆಟ್ರಿಕ್ ಟನ್ ಖರೀದಿಸುವುದಾಗಿ ಹೇಳಿದ್ದರು. ಇದುವರೆಗೂ ಐವತ್ತು, ಆರವತ್ತು ಮೆಟ್ರಿಕ್ ಟನ್ ಖರೀದಿ ಮಾಡಿರಬೇಕು. ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಏಜೆನ್ಸಿ ನಿಗದಿ ಮಾಡಿಲ್ಲ. ಸುಮ್ಮನೆ ಮೊಲ್ಯಾಸಿಸ್ ನವರಿಗೆ ಖರೀದಿಸುವಂತೆ ಹೇಳಿದರೆ ಆಗುವುದಿಲ್ಲ.

ರಾಜ್ಯ ಸರ್ಕಾರ ಖರೀದಿ ಕೇಂದ್ರ ಆರಂಭಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಇಲ್ಲದಿದದ್ದರೆ ರೈತರಿಗೆ ಅನ್ಯಾಯವಾಗಲಿದೆ. ಮುಖ್ಯಮಂತ್ರಿ ಅವರು ಹೇಳಿ ಒಂದು ತಿಂಗಳಾಯಿತು. ಇದುವರೆಗೂ ಖರೀದಿ ಕೇಂದ್ರ ತೆರೆದಿಲ್ಲ. ಸುಮಾರು 20 ಜಿಲ್ಲೆಗಳಲ್ಲಿ ಮೆಕ್ಕೆಜೋಳ ಬೆಳೆಯುವ ರೈತರನ್ನು ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿದರು.

ನೋಂದಣಿಯಾದ ರೈತರು ಟ್ಯಾಕ್ಟರ್‌ನಲ್ಲಿ ತಂದು ನಿಲ್ಲಿಸಿದ್ದಾರೆ. ತೂಕ ಕಡಿಮೆಯಾಗುತ್ತಿದೆ. ರೈತರ ಹೊಲಗಳಲ್ಲಿ ಹಾಳಾಗುತ್ತಿದೆ. ಇಲ್ಲಿಂದ ಶಿಕಾರಿಪುರಕ್ಕೆ ತೆಗೆದುಕೊಂಡು ಹೋಗುವಂತೆ ಹೇಳುತ್ತಾರೆ. ಅಲ್ಲಿ ರಾತ್ರಿಯೆಲ್ಲಾ ರೈತರು ಕಾಯಬೇಕು. ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯಲ್ಲಿ ಇದು ಒಂದು ಎಂದು ಹೇಳಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೆಟ್ಟು ಬಹಳ ದಿನ ಆಗಿದೆ. ಪ್ರತಿ ದಿನ ಲೂಟಿ, ದರೋಡೆ, ಕೊಲೆ ಸುಲಿಗೆ ನಡೆಯುತ್ತಿದೆ. ಮೈಸೂರಿನಲ್ಲಿ ಹಗಲಿನಲ್ಲಿಯೇ ದರೋಡೆಯಾಗಿದೆ. ಕರ್ನಾಟಕದಲ್ಲಿಯೇ ಡ್ರಗ್ಸ್ ತಯಾರಿಸಿ ಇಡಿ ದೇಶಕ್ಕೆ ಸರಬರಾಜು ಮಾಡುವ ಫ್ಯಾಕ್ಟರಿಗಳೇ ರಾಜ್ಯದಲ್ಲಿ ಆರಂಭವಾಗಿವೆ ಎಂದರೆ ರಾಜ್ಯ ಸರ್ಕಾರವೇ ಶಾಮೀಲಾಗಿದೆ. ಮಹಾರಾಷ್ಟ್ರದವರು ಬಂದು ದಾಳಿ ಮಾಡಿದ್ದಾರೆ ಎಂದರೆ ಇವರು ಏನು ಮಾಡುತ್ತಿದ್ದಾರೆ, ಯಾವ ಡಿಸಿಪಿ ವ್ಯಾಪ್ತಿಯಲ್ಲಿ ಬರುತ್ತದೆ. ಆ ಡಿಸಿಪಿಗಳನ್ನು ಸಸ್ಪೆಂಡ್ ಮಾಡಬೇಕು. ಇದಕ್ಕೆ ನೇರವಾಗಿ ಗೃಹ ಸಚಿವರು ಮತ್ತು ಗೃಹ ಇಲಾಖೆ ಹೊಣೆ ಎಂದು ಆರೋಪಿಸಿದರು.


Share

You cannot copy content of this page