ಸಮಗ್ರ ಸುದ್ದಿ

6,322 ಪರಿಶಿಷ್ಟ ಕುಟುಂಬಗಳಿಗೆ ಕೊಳವೆಬಾವಿ ಭಾಗ್ಯ: ಕಾಮಗಾರಿ ಚುರುಕು ಗೊಳಿಸಲು ಸಚಿವ ಎನ್.ಎಸ್. ಭೋಸರಾಜು ಸೂಚನೆ

Share

ಬೆಂಗಳೂರು:ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ 2025-26ನೇ ಸಾಲಿನಲ್ಲಿ ಮಂಜೂರಾಗಿರುವ ಕಾಮಗಾರಿಗಳನ್ನು ವಿಳಂಬವಿಲ್ಲದೆ ಚುರುಕುಗೊಳಿಸಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್. ಭೋಸರಾಜು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಂದು ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಎಸ್‌ಸಿಪಿ (SCP) ಮತ್ತು ಟಿಎಸ್‌ಪಿ (TSP) ಅನುದಾನದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

2025–26ನೇ ಆರ್ಥಿಕ ಸಾಲಿನಲ್ಲಿ ಎಸ್‌ಸಿಪಿ–ಟಿ‌ಎಸ್‌ಪಿ ಅಡಿಯಲ್ಲಿ 3,939 ಪರಿಶಿಷ್ಟ ಜಾತಿ ಮತ್ತು 2,383 ಪರಿಶಿಷ್ಟ ಪಂಗಡದ ಕುಟುಂಬಗಳು ಸೇರಿದಂತೆ ಒಟ್ಟು 6,322 ರೈತ ಕುಟುಂಬಗಳಿಗೆ ವಿದ್ಯುತ್ ಸಂಪರ್ಕದೊಂದಿಗೆ ಕೊಳವೆಬಾವಿ ಸೌಲಭ್ಯ ಒದಗಿಸಲು ಅನುಮೋದನೆ ನೀಡಲಾಗಿದೆ. ಈ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯನ್ನು ಶೀಘ್ರದಲ್ಲಿ ಮುಗಿಸಿ, ನಿಗದಿತ ಸಮಯದಲ್ಲಿ ರೈತರಿಗೆ ಸೌಲಭ್ಯ ತಲುಪಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.

ಜಲ ಸಂರಕ್ಷಣೆಗೆ ವಿಶೇಷ ಒತ್ತು:

ಅಂತರ್ಜಲ ಮಟ್ಟವನ್ನು ವೃದ್ಧಿಸುವ ದೃಷ್ಟಿಯಿಂದಲೂ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಪರಿಶಿಷ್ಟ ಸಮುದಾಯಗಳ ಕೃಷಿ ಪ್ರದೇಶಗಳಲ್ಲಿ ಚೆಕ್ ಡ್ಯಾಮ್‌ಗಳ ನಿರ್ಮಾಣ ಮತ್ತು ಸಾಮೂಹಿಕ ಏತ ನೀರಾವರಿ ಯೋಜನೆಗಳಂತಹ ‘ಜಲ ಸಂರಕ್ಷಣಾ ರಚನೆ’ಗಳನ್ನು ನಿರ್ಮಿಸಲು ಆದ್ಯತೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಕಳೆದ ವರ್ಷದ ಸಾಧನೆ:

2024–25ನೇ ಸಾಲಿನಲ್ಲಿ ₹365 ಕೋಟಿ ವೆಚ್ಚದಲ್ಲಿ ಒಟ್ಟು 5,371 ರೈತ ಕುಟುಂಬಗಳಿಗೆ (3,388 ಎಸ್‌ಸಿ ಮತ್ತು 1,983 ಎಸ್‌ಟಿ) ಯಶಸ್ವಿಯಾಗಿ ವಿದ್ಯುತ್ ಸಂಪರ್ಕಿತ ಕೊಳವೆಬಾವಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿಗಳಾದ ಬಿ.ಕೆ. ಪವಿತ್ರ ಹಾಗೂ ಉತ್ತರ ಮತ್ತು ದಕ್ಷಿಣ ವಲಯದ ಮುಖ್ಯ ಅಭಿಯಂತರರು ಉಪಸ್ಥಿತರಿದ್ದರು.


Share

You cannot copy content of this page