ಸಮಗ್ರ ಸುದ್ದಿ

ಉತ್ತರ‌ ಕರ್ನಾಟಕದಲ್ಲಿ ಮೈಸೂರಿನ ವಾಕ್ ಶ್ರಮಣ ಸಂಸ್ಥೆಯ ಘಟಕ ಸ್ಥಾಪನೆಗೆ ಕೇಂದ್ರ ಆರೋಗ್ಯ ಸಚಿವರಿಗೆ ಮನವಿ:ದಿನೇಶ್ ಗುಂಡೂರಾವ್

Share

ಬೆಂಗಳೂರು: ಉತ್ತರ‌ ಕರ್ನಾಟಕದಲ್ಲಿ ಮೈಸೂರಿನ ವಾಕ್ ಶ್ರಮಣ ಸಂಸ್ಥೆಯ ಘಟಕ ಸ್ಥಾಪಿಸುವಂತೆ ಕೇಂದ್ರ ಆರೋಗ್ಯ ಸಚಿವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದರು.

ಇಂದು ಬೆಂಗಳೂರಿನ ವಿಕಾಸಸೌಧದಲ್ಲಿ ಕೇಂದ್ರ ಆರೋಗ್ಯ ಸಚಿವರಾದ ಜೆ. ಪಿ. ನಡ್ಡಾ ಅವರ ಅಧ್ಯಕ್ಷತೆಯಲ್ಲಿ ವರ್ಚುವಲ್ ಮೂಲಕ ನಡೆದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (AIISH)ಯ 60 ನೇ ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯಕ್ಕೆ ಅಗತ್ಯವಿರುವ ಯೋಜನೆಗಳ ಕುರಿತು ಕೇಂದ್ರ ಸಚಿವರ ಗಮನ ಸೆಳೆದರು.

ಅಲ್ಪಾವಧಿಯ ಕೋರ್ಸ್‌ಗಳ ಪರಿಚಯ:

ಪ್ರಸ್ತುತ ಸೇವೆಯಲ್ಲಿರುವ ಆರೋಗ್ಯ ಸಿಬ್ಬಂದಿಗಾಗಿ 3 ರಿಂದ 6 ತಿಂಗಳ ಅಲ್ಪಾವಧಿಯ ತರಬೇತಿ ಮತ್ತು ಡಿಪ್ಲೊಮಾ ಕೋರ್ಸ್‌ಗಳನ್ನು ಪರಿಚಯಿಸಲು ಅನುಮೋದನೆ ನೀಡಬೇಕು. ಈ ಕೋರ್ಸ್‌ಗಳನ್ನು AIISH ಮೈಸೂರು ಅಥವಾ ಜಿಲ್ಲಾ ಮಟ್ಟದ ಆಸ್ಪತ್ರೆಗಳು ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ AIISH ಶೈಕ್ಷಣಿಕ ಸಹಯೋಗದೊಂದಿಗೆ ನಡೆಸಬಹುದು. ಇದು ಮಕ್ಕಳಲ್ಲಿ ಸ್ಕ್ರೀನಿಂಗ್, ಆರಂಭಿಕ ಗುರುತಿಸುವಿಕೆ, ಮಾತು ಮತ್ತು ಶ್ರವಣ ಸಮಸ್ಯೆ ಗುರುತಿಸುವಿಕೆ ಮತ್ತು ಶ್ರವಣೇಂದ್ರಿಯ ಚಿಕಿತ್ಸೆ (AVT) ಮೇಲೆ ಗಮನ ಹರಿಸಬೇಕು ಎಂದು ಹೇಳಿದರು.

ಔಟ್‌ರೀಚ್ ಸೆಂಟರ್‌ಗಳ ಸ್ಥಾಪನೆ:

ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಆಯ್ದ ಜಿಲ್ಲಾ/ತಾಲ್ಲೂಕು ಆಸ್ಪತ್ರೆಗಳ ಮೂಲಕ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಈ ಕೇಂದ್ರಗಳು ಸ್ಕ್ರೀನಿಂಗ್, ಫಾಲೋ-ಅಪ್ ಮತ್ತು ಚಿಕಿತ್ಸಾ ಸೇವೆಗಳನ್ನು ಸುಗಮಗೊಳಿಸಲು ಅನುಕೂಲವಾಗುತ್ತದೆ. ಇವುಗಳು ಮೈಸೂರು AIISH ಗೆ ಸಂಪರ್ಕ ಹೊಂದಿದ ಸ್ಥಳೀಯ ತರಬೇತಿ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತದೆ.

ಕರ್ನಾಟಕದಲ್ಲಿ ರಾಜ್ಯ ಕಾಕ್ಲಿಯರ್ ಇಂಪ್ಲಾಂಟ್ ಕಾರ್ಯಕ್ರಮವನ್ನು ಬಲಪಡಿಸಲು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಮೈಸೂರಿನ
(AIISH) ತಾಂತ್ರಿಕ ಮಾರ್ಗದರ್ಶನ ನೀಡಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ 50:50 ವೆಚ್ಚ ಹಂಚಿಕೆ ಮೂಲಕ ಇದಕ್ಕೆ ಅನುವು ಮಾಡಿಕೊಡಬೇಕು ಎಂದರು.

ಉತ್ತರ ಕರ್ನಾಟಕದಲ್ಲಿ AIISH ಮಾದರಿಯ ಸಂಸ್ಥೆಯ ಸ್ಥಾಪನೆ:

ಪ್ರಾದೇಶಿಕ ಅಸಮಾನತೆಗಳನ್ನು ಪರಿಹರಿಸಲು ಉತ್ತರ ಕರ್ನಾಟಕದಲ್ಲಿ AIISH-ತರಹದ ಸಂಸ್ಥೆಯನ್ನು ಸ್ಥಾಪಿಸಲು ತಾತ್ವಿಕ ಅನುಮೋದನೆಯನ್ನು ನೀಡಬೇಕು. ರಾಜ್ಯ ಸರ್ಕಾರವು ಭೂಮಿ ಮತ್ತು ಮೂಲಭೂತ ಮೂಲಸೌಕರ್ಯಗಳನ್ನು ರಾಜ್ಯ ಸರ್ಕಾರ ಒದಗಿಸುತ್ತದೆ. ನುರಿತ ಮಾನವ ಸಂಪನ್ಮೂಲ ಮತ್ತು ತಾಂತ್ರಿಕ ಘಟಕಗಳಿಗೆ ಕೇಂದ್ರ ಸರ್ಕಾರದ ಬೆಂಬಲ ಬೇಕು. ಈ ಸಂಸ್ಥೆಯು ವಾಕ್ ಮತ್ತು ಶ್ರವಣ ವಿಜ್ಞಾನಗಳಲ್ಲಿ ತರಬೇತಿ, ಸೇವಾ ವಿತರಣೆ ಮತ್ತು ಸಂಶೋಧನೆಗಾಗಿಯೇ ಇರಬೇಕು. ಇದರಿಂದ ಮೈಸೂರಿನ ಕೇಂದ್ರದ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಆ ಭಾಗದಿಂದ ಮೈಸೂರಿಗೆ ಚಿಕಿತ್ಸೆಗೆ ಬರಬೇಕಾದವರಿಗೆ ಆಗುತ್ತಿರುವ ಸಮಸ್ಯೆಯೂ ತಪ್ಪುತ್ತದೆ ಎಂದು ತಿಳಿಸಿದರು.

ಎನ್.ಜಿ.ಒಗಳ ಮೂಲಕ ತಾಯಿ ಮತ್ತು ಮಕ್ಕಳ ತರಬೇತಿ ಕೇಂದ್ರಗಳ ಸ್ಥಾಪನೆ:

ಕರ್ನಾಟಕ ಸರ್ಕಾರದ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಮನ್ವಯದೊಂದಿಗೆ ಎನ್‌ಜಿಒಗಳ ಬೆಂಬಲದೊಂದಿಗೆ ಜಿಲ್ಲಾ ಮಟ್ಟದಲ್ಲಿ ತಾಯಿ ಮತ್ತು ಮಕ್ಕಳ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವುದು ಅಗತ್ಯವಾಗಿದೆ. ಈ ಕೇಂದ್ರಗಳು ಅಸ್ತಿತ್ವದಲ್ಲಿರುವ ರಾಜ್ಯ ಮತ್ತು ಕೇಂದ್ರ ಯೋಜನೆಗಳ ಮೂಲಕ ಎವಿಟಿ ಮತ್ತು ವಾಕ್ ಚಿಕಿತ್ಸೆ, ಪೋಷಕರ ಸಲಹೆ ಮತ್ತು ಶ್ರವಣ ಮತ್ತು ನರ ಬೆಳವಣಿಗೆಯ ಅಸ್ವಸ್ಥತೆ ಹೊಂದಿರುವ ಮಕ್ಕಳಿಗೆ ಆರೈಕೆದಾರರ ತರಬೇತಿ ಸೇರಿದಂತೆ ಆರಂಭಿಕ ಸೇವೆಗಳನ್ನು ಒದಗಿಸಲು ಅನುಕೂಲವಾಗುತ್ತದೆ ಎಂದು ಕೇಂದ್ರ ಸಚಿವರಿಗೆ ಹೇಳಿದರು.

ಇದಕ್ಕೆ ಕೇಂದ್ರ ಆರೋಗ್ಯ ಸಚಿವರು ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಕಳುಹಿಸಿಕೊಡಿ, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.


Share

You cannot copy content of this page