ಸಮಗ್ರ ಸುದ್ದಿ

ಪಾದಾಚಾರಿ ಹಾಗೂ ಸೈಕ್ಲಿಂಗ್ ಮೂಲಸೌಕರ್ಯವನ್ನು ಮತ್ತಷ್ಟು ಸುಧಾರಿಸಲು ಕ್ರಮ : ಮಹೇಶ್ವರ್ ರಾವ್ | ನಡಿಗೆ ಮತ್ತು ಸೈಕ್ಲಿಂಗ್ ಉತ್ತೇಜನಕ್ಕೆ ಬೆಂಗಳೂರು ಕಾರ್ಪೊರೇಟ್ ಸಂಸ್ಥೆಗಳ ಪಾಲ್ಗೊಳ್ಳಲು ಕರೆ

Share

ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಪಾದಾಚಾರಿ ಹಾಗೂ ಸೈಕ್ಲಿಂಗ್ ಮೂಲಸೌಕರ್ಯವನ್ನು ಮತ್ತಷ್ಟು ಸುಧಾರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಭರವಸೆ ನೀಡಿದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಪಾದಚಾರಿ ನಡಿಗೆ ಹಾಗೂ ಸೈಕ್ಲಿಂಗ್‌ ಅನ್ನು ಉತ್ತೇಜಿಸುವ ಮೂಲಕ ಬೆಂಗಳೂರಿನ ಪ್ರಮುಖ ಉದ್ಯೋಗ ಕೇಂದ್ರಗಳಲ್ಲಿ ಸ್ಥಿರ (ಸಸ್ಟೈನಬಲ್) ಸಂಚಾರ ಸಂಸ್ಕೃತಿಯನ್ನು ಬಲಪಡಿಸುವ ಉದ್ದೇಶದಿಂದ ಡಬ್ಲ್ಯೂ.ಆರ್‌.ಐ, ವಾಕಲೂರು ಹಾಗೂ ಅರ್ಬನ್ ಮಾರ್ಫ್ ಸಂಸ್ಥೆಗಳ ನೇತೃತ್ವದಲ್ಲಿ ವಿನೂತನವಾಗಿ ರೂಪಿಸಿರುವ “ಹೆಜ್ಜೆ–ಸಂಭ್ರಮ (GALA)” ಉಪಕ್ರಮಕ್ಕೆ ಇಂದು ಅಧಿಕೃತವಾಗಿ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

ನಗರದಾದ್ಯಂತ ಪಾದಚಾರಿ ಮಾರ್ಗಗಳನ್ನು ಸುಧಾರಿಸುವುದು ಜಿಬಿಎಯ ಪ್ರಮುಖ ಆದ್ಯತೆಯಾಗಿದ್ದು, ಹೆಜ್ಜೆ–ಸಂಭ್ರಮ (GALA) ಮೂಲಕ ಐದು ನಗರ ಪಾಲಿಕೆಗಳ ನಡುವೆ ಸಕಾರಾತ್ಮಕ ಹಾಗೂ ಆರೋಗ್ಯಕರ ಸ್ಪರ್ಧೆ ರೂಪುಗೊಳ್ಳಲಿದೆ. ಅದಕ್ಕಾಗಿ ORRCA, ELCIA, WEPPIA ಸೇರಿದಂತೆ ವಿವಿಧ ಕಾರ್ಪೊರೇಟ್ ಸಂಸ್ಥೆಗಳು ಈ ಉಪಕ್ರಮಕ್ಕೆ ಸಕ್ರಿಯವಾಗಿ ಕೈಜೋಡಿಸಿರುವುದು ಸಂತಸದ ವಿಷಯವೆಂದು ಅವರು ಹೇಳಿದರು.

ಮುಂದಿನ ಮೂರು ತಿಂಗಳುಗಳ ಕಾಲ ಹಮ್ಮಿಕೊಳ್ಳಲಾಗಿರುವ ಈ ಹೆಜ್ಜೆ–ಸಂಭ್ರಮದಿಂದ ಲಭ್ಯವಾಗುವ ಮಾಹಿತಿಯನ್ನು ಆದ್ಯತೆಯ ಆಧಾರದ ಮೇಲೆ ಬಳಸಿಕೊಂಡು, ಪಾದಚಾರಿ ಹಾಗೂ ಸೈಕ್ಲಿಂಗ್ ಮೂಲಸೌಕರ್ಯವನ್ನು ಮತ್ತಷ್ಟು ಸುಧಾರಿಸುವ ಕಾರ್ಯ ಕೈಗೊಳ್ಳಲಾಗುವುದೆಂದು ತಿಳಿಸಿದರು.

ಬಿಡಿಎ ಆಯುಕ್ತರಾದ ಮಣಿವಣ್ಣನ್ ರವರು ಮಾತನಾಡಿ, ಪಾದಚಾರಿ ಮಾರ್ಗಗಳನ್ನು ಹೆಚ್ಚು ಜನ ಬಳಸುವ ನಿಟ್ಟಿನಲ್ಲಿ ಕೆಲವು ಎನ್‌.ಜಿ.ಓ ಸಂಸ್ಥೆಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರೊಂದಿಗೆ ಬಿಡಿಎ ಕೂಡ ಕೈಜೋಡಿಸಲಿದೆ. ಈ ಕಾರ್ಯಕ್ಕೆ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದೆಂದು ಅವರು ಭರವಸೆ ನೀಡಿದರು.

ಉತ್ತರ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ರವರು ಮಾತನಾಡಿ, ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಈವರೆಗೆ ಅಧಿಕಾರಿಗಳು ಹಾಗೂ ನಾಗರಿಕರು ಸೇರಿ 34 ಕಿ.ಮೀ. ಪಾದಚಾರಿ ಮಾರ್ಗವನ್ನು ನಡಿಗೆಯ ಮೂಲಕ ಪರಿಶೀಲಿಸಿ, ಅಲ್ಲಿ ಕಂಡುಬಂದ ಸಮಸ್ಯೆಗಳನ್ನು ಬಗೆಹರಿಸಿ ಸುಗಮ ಪಾದಚಾರಿ ಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ. ಶೀಘ್ರದಲ್ಲೇ 100 ಕಿ.ಮೀ. ಪಾದಚಾರಿ ಮಾರ್ಗಗಳನ್ನು ಪರಿಶೀಲಿಸುವ ಗುರಿ ಹೊಂದಲಾಗಿದ್ದು, ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಪಾದಚಾರಿ ಮಾರ್ಗಗಳಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಲಾಗುವುದೆಂದು ಅವರು ತಿಳಿಸಿದರು.

ಮೂರು ತಿಂಗಳಲ್ಲಿ ಹಲವಾರು ಮಾಹಿತಿ ಸಂಗ್ರಹ:

ಮುಂದಿನ ಮೂರು ತಿಂಗಳ ಅವಧಿಯಲ್ಲಿ ನಡೆಯಲಿರುವ ಈ ನಗರವ್ಯಾಪಿ ಉಪಕ್ರಮದ ಮೂಲಕ ಉದ್ಯೋಗಿಗಳ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸುವುದು, ಇಂಗಾಲ ಹೊರಸೂಸುವಿಕೆ ಹಾಗೂ ಸಂಚಾರದ ತೀವ್ರ ದಟ್ಟಣೆಯನ್ನು ನಿಯಂತ್ರಿಸುವುದು, ಜೊತೆಗೆ ನಗರದ ಪಾದಚಾರಿ ಮತ್ತು ಸೈಕ್ಲಿಂಗ್ ಮೂಲಸೌಕರ್ಯವನ್ನು ಬಲಪಡಿಸುವುದಕ್ಕೆ ಅಗತ್ಯವಾದ ಮಾಹಿತಿಯನ್ನು ಸಂಗ್ರಹಿಸುವುದೇ ಇದರ ಪ್ರಮುಖ ಉದ್ದೇಶವಾಗಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಪೊರೇಟ್ ಸಂಸ್ಥೆಗಳ ಮುಖ್ಯಸ್ಥರ ಬೆಂಬಲ ಹಾಗೂ ಅವರ ಸಂಸ್ಥೆಗಳ ಉದ್ಯೋಗಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ.

ಈ ಉಪಕ್ರಮದಲ್ಲಿ ಪಾಲ್ಗೊಳ್ಳುವ ಸಂಸ್ಥೆಗಳು ತಮ್ಮ ಉದ್ಯೋಗಿಗಳನ್ನು ನಡಿಗೆ ಮತ್ತು ಸೈಕ್ಲಿಂಗ್ ಮೂಲಕ ಮಾಡಿದ ಪ್ರಯಾಣಗಳನ್ನು ದಾಖಲಿಸಲು ಪ್ರೇರೇಪಿಸಲಿದ್ದು, ಅವು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೊದಲ ಹಾಗೂ ಕೊನೆಯ ಮೈಲ್ ಸಂಪರ್ಕಗಳನ್ನೂ ಒಳಗೊಂಡಿರುತ್ತವೆ. ಡ್ಯಾಶ್‌ ಬೋರ್ಡ್ ಮತ್ತು ಲೀಡರ್‌ ಬೋರ್ಡ್‌ಗಳ ಮೂಲಕ ಪಾಲ್ಗೊಳ್ಳುವಿಕೆ, ಪ್ರಯಾಣಿಸಿದ ದೂರ ಹಾಗೂ ಅಂದಾಜು ಕಾರ್ಬನ್ ಕಡಿತದ ಮಾಹಿತಿಯನ್ನು ಸಂಗ್ರಹಿಸಿ ವಿಶ್ಲೇಷಿಸಲಾಗುತ್ತದೆ.

hejjegala.in ನಲ್ಲಿ ನೋಂದಣಿ:

ಕಾರ್ಪೊರೇಟ್ ಸಂಸ್ಥೆಗಳು hejjegala.in ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ನಗರ ಪಾಲಿಕೆ ಮಟ್ಟದಲ್ಲಿ ಲೀಡರ್‌ ಬೋರ್ಡ್‌ಗಳನ್ನು ಪ್ರದರ್ಶಿಸುವ ಮೂಲಕ ನಗರದಾದ್ಯಂತ ವ್ಯಾಪಕ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲಾಗುತ್ತದೆ. ಈ ಚಾಲೆಂಜ್‌ನಿಂದ ಪಡೆಯಲಿರುವ ಒಳನೋಟಗಳು ಸುರಕ್ಷಿತ ಪಾದಚಾರಿ ಕ್ರಾಸಿಂಗ್‌ಗಳು, ಗುಣಮಟ್ಟದ ಪಾದಚಾರಿ ಮಾರ್ಗಗಳು ಹಾಗೂ ಆರಾಮದಾಯಕ ಸೈಕ್ಲಿಂಗ್ ಮಾರ್ಗಗಳ ಅಗತ್ಯವನ್ನು ಗುರುತಿಸಲು ಯೋಜನೆಕಾರರಿಗೆ ಸಹಕಾರಿಯಾಗಲಿವೆ.

ಹೆಜ್ಜೆ–ಗಾಲಾದಲ್ಲಿ ಪಾಲ್ಗೊಂಡ ಸಂಸ್ಥೆಗಳು:

ಅಭಿಟೆಕ್ ಎಂಜಿನಿಯರ್ಸ್, ಅಮೆಜಾನ್ ವೆಬ್ ಸರ್ವಿಸಸ್, ಬೆಂಗಳೂರು ಸೈಕ್ಲಿಸ್ಟ್ಸ್ ಕ್ಲಬ್, ಬಯೋಕಾನ್, ಸಿಜಿಐ, ಡೆಲ್ ಟೆಕ್ನಾಲಜೀಸ್, ಇ.ಎಲ್‌.ಸಿ.ಐ.ಎ, ಎಂಬಸಿ, ಎರಿಕ್ಸನ್, ಜಿಇ ಹೆಲ್ತ್‌ಕೇರ್, ಗ್ರೀನ್‌ಪೀಸ್, ಹಸಿರು ದಳ, ಇನ್‌ಕ್ರೆಡ್, ಇಂಟೆಲ್, ಕೆಪಿಎಂಜಿ, ಎಲ್ & ಟಿ ಟೆಕ್ನಾಲಜಿ ಸರ್ವಿಸಸ್, ಮೂವ್‌ ಇನ್‌ಸಿಂಕ್, ನೋವೋ ನಾರ್ಡಿಸ್ಕ್, ಓ.ಆರ್‌.ಆರ್‌.ಸಿ.ಎ, ಪಿಕೆ ಟ್ರಾವೆಲ್ಸ್, ಕ್ವಾಲ್ಕಾಮ್, ಸತೀಶ್ ಅಂಡ್ ಕಂಪನಿ, ಸೀಮೆನ್ಸ್, ಅಂಗವಿಕಲರ ಸಂಘ, ಅಗ್ಲಿ ಇಂಡಿಯನ್ಸ್, ವಿಟೈಗರ್, ವೆಪ್ಪಿಯಾ ಸೇರಿದಂತೆ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ನಡಿಗೆ ಸಾಗಿದ ಹಾದಿ:

ವಿಧಾನಸೌಧ ಮೆಟ್ರೋ ನಿಲ್ದಾಣದಿಂದ ಆರಂಭವಾಗಿ, ಕಬ್ಬನ್ ಪಾರ್ಕ್ ಒಳಭಾಗದ ಮೂಲಕ ಜಿಬಿಎ ಮುಖ್ಯ ಕಚೇರಿವರೆಗೆ ಸುಮಾರು 2 ಕಿ.ಮೀ. ದೂರ ನಡಿಗೆಯ ಮೂಲಕ ಹೆಜ್ಜೆ–ಗಾಲಾಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ 40 ಕ್ಕೂ ಹೆಚ್ಚು ಕಾರ್ಪೊರೇಟ್ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಹಿರಿಯ ಸರ್ಕಾರಿ ಅಧಿಕಾರಿಗಳು ಪಾಲ್ಗೊಂಡಿದ್ದರು.

ಇಂದಿನ ಕಾರ್ಯಕ್ರಮದಲ್ಲಿ ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳ ಪ್ರತಿನಿಧಿಗಳು, WRI ಇಂಡಿಯಾ ಸಂಸ್ಥೆಯ ಇಂಟಿಗ್ರೇಟೆಡ್ ಟ್ರಾನ್ಸ್‌ಪೋರ್ಟ್, ಕ್ಲೀನ್ ಏರ್ ಮತ್ತು ಹೈಡ್ರೋಜನ್ ವಿಭಾಗದ ಕಾರ್ಯನಿರ್ವಾಹಕ ಕಾರ್ಯಕ್ರಮ ನಿರ್ದೇಶಕರಾದ ಪವನ್ ಮುಲುಕುಟ್ಲಾ, ಅರ್ಬನ್ ಮಾರ್ಫ್ ಸಂಸ್ಥಾಪಕರಾದ ಸತ್ಯ ಶಂಕರ್, ವಾಕಲೂರು ಸಂಸ್ಥಾಪಕರಾದ ಅರುಣ್ ಪೈ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


Share

You cannot copy content of this page