ಸಮಗ್ರ ಸುದ್ದಿ

ಆಕರ್ಷಕ ಪ್ರವಾಸಿ ತಾಣವಾಗಿ ಮಹಾತ್ಮಗಾಂಧಿ ಭೇಟಿ ನೀಡಿದ್ದ ಬದನವಾಳು ಖಾದಿ ಕೇಂದ್ರ: ಸಚಿವ ಪ್ರಿಯಾಂಕ್‌ ಖರ್ಗೆ

Share

ಬೆಂಗಳೂರು : ಮಹಾತ್ಮ ಗಾಂಧಿಯವರು 1927 ಹಾಗೂ 1932ರಲ್ಲಿ ಮೈಸೂರು ಜಿಲ್ಲೆಯಲ್ಲಿರುವ ಬದನವಾಳು ಗ್ರಾಮಕ್ಕೆ ಭೇಟಿ ನೀಡಿ ಖಾದಿ ಕ್ರಾಂತಿಗೆ ಉತ್ತೇಜನ ನೀಡಿ, “ಗ್ರಾಮ ಸ್ವರಾಜ್ಯʼʼ ಪರಿಕಲ್ಪನೆಗೆ ಕಾರಣವಾದ ಹಿನ್ನೆಲೆಯಲ್ಲಿ ಬದನವಾಳು ಗ್ರಾಮದ ಎಲ್ಲಾ ಐತಿಹಾಸಿಕ ಹೆಜ್ಜೆಗುರುತುಗಳನ್ನು ಪುನರುಜ್ಜೀವನಗೊಳಿಸುವ ಮತ್ತು ಖಾದಿ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಆಕರ್ಷಕ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಈ ಕುರಿತು ರೂಪುರೇಷೆ ಸಿದ್ದಪಡಿಸಲು ನಂಜನಗೂಡು ಶಾಸಕರಾದ ದರ್ಶನ್ ದೃವನಾರಾಯಣ್ ಹಾಗೂ ಪ್ರವಾಸೋದ್ಯಮ ಇಲಾಖೆ ಹಾಗೂ ಖಾದಿ ಮಂಡಳಿಯ ಅಧಿಕಾರಿಗಳೊಂದಿಗೆ ಸಚಿವರು ಚರ್ಚೆ ನಡೆಸಿದರು.

ಉದ್ದೇಶಿತ ಯೋಜನೆಯಡಿ ಏಳು ಎಕರೆ ಪ್ರದೇಶದಲ್ಲಿ ಬದನವಾಳು ಗ್ರಾಮದಲ್ಲಿ ನಡೆದು ಬಂದ ಖಾದಿ ನೇಕಾಣಿಕೆಯ ಇತಿಹಾಸ, ಖಾದಿ ಉತ್ಪಾದನಾ ಘಟಕ, ತರಬೇತಿ ಕೇಂದ್ರ, ವಿನ್ಯಾಸಕೇಂದ್ರ, ಖಾದಿ ಪರೀಕ್ಷೆ, ದಾಸ್ತಾನು ಕೇಂದ್ರ, ಖಾದಿ ಸಂಶೋಧನಾ ಕೇಂದ್ರ ಮುಂತಾದ ಸೌಲಭ್ಯಗಳನ್ನು ಒಳಗೊಳ್ಳುವಂತೆ ಅಭಿವೃದ್ಧಿಪಡಿಸಲಾಗುವುದು ಎಂದ ಸಚಿವರು ಹೇಳಿದರು.

ಈ ಕೇಂದ್ರದಲ್ಲಿ ಮೈಸೂರು ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ವಿವರ, ವಸ್ತು ಸಂಗ್ರಹಾಲಯ ಮುಂತಾದ ಪ್ರವಾಸಿ ಆಕರ್ಷಣೆಗಳೂ ಇರಲಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಸಭೆಯಲ್ಲಿ ತಿಳಿಸಿದರು.

ಮಹಾತ್ಮ ಗಾಂಧಿಯವರ ಖಾದಿ ಸ್ವತಂತ್ರ ಹೋರಾಟದ ಭಾಗವಾಗಿದ್ದ ಚಳವಳಿಯು ಹಲವು ಆಯಾಮದಲ್ಲಿ ಪರಿಣಾಮ ಬೀರುವ ದೃಷ್ಟಿಕೋನವನ್ನು ಹೊಂದಿದ್ದು, ಖಾದಿ ಗೃಹ ಕೈಗಾರಿಕೆಗೆ ಮಹಾತ್ಮ ಗಾಂಧೀಜಿ ಮಹತ್ವ ನೀಡಿದ್ದರು, ಖಾದಿಯು ಸ್ವಾವಲಂಬನೆ, ಸರಳತೆ ಮತ್ತು ಸ್ವಾತಂತ್ರ್ಯದ ಸಂಕೇತವಾಗಿತ್ತು. ಖಾದಿ ಧರಿಸುವುದರಿಂದ ಪ್ರತಿ ಭಾರತೀಯ ಪ್ರಜೆಯೂ ದೇಶದ ಆರ್ಥಿಕ ಸ್ವಾತಂತ್ರ್ಯಕ್ಕೆ ತನ್ನ ಕೊಡುಗೆಯನ್ನು ನೀಡಬಹುದು ಮತ್ತು ಹಳ್ಳಿಗಳಲ್ಲಿ ಉದ್ಯೋಗ ಒದಗಿಸುವ ಮೂಲಕ ಹಳ್ಳಿಗಳ ಬಲವರ್ಧನೆಗೆ ಕಾರಣವಾಗಬಹುದು ಎಂದು ಗಾಂಧೀಜಿ ನಂಬಿದ್ದರು ಎಂಬ ಮಾಹಿತಿಯನ್ನು ಸಚಿವರು ಹಂಚಿಕೊಂಡರು.

ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಕೆ.ವಿ.ತ್ರಿಲೋಕಚಂದ್ರ ಹಾಗೂ ಇನ್ನಿತರ ಖಾದಿ ಮಂಡಳಿ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.


Share

You cannot copy content of this page