ಬೆಂಗಳೂರು ನ.19: ಸ್ಟಾರ್ಟಪ್ ಗಳ ಭರಾಟೆ, ಟೆಕ್ ಸಂತೆಯ ಮಧ್ಯೆ ಆವಿಷ್ಕಾರಿ ರೈತರೊಬ್ಬರು ಗಮನಸೆಳೆದಿದ್ದಾರೆ. ಸಾವಯವ ಕೃಷಿಗೆ ಅತ್ಯಗತ್ಯವಾಗಿರುವ ಜೀವಾಮೃತವನ್ನು ಸಮಯಕ್ಕೆ ಸರಿಯಾಗಿ ಮಿಶ್ರಣ ಮಾಡುವ ಸ್ವಯಂಚಾಲಿತ ಸೌರಚಾಲಿತ ಯಂತ್ರವನ್ನು ಅವರು ಅಭಿವೃದ್ಧಿಪಡಿಸಿದ್ದಾರೆ.
ಜೀವಾಮೃತ ತುಂಬಿದ ದೊಡ್ಡ ಡ್ರಮ್ಗೆ 7 ದಿನ ಕೋಲು ಹಾಕಿ ಕಲಕುವುದು ತುಸು ಶ್ರಮದಾಯಕ. ಜತೆಗೆ, 2 ದಿನ ಕಳೆದ ಕೂಡಲೇ ಅದು ವಾಸನೆ ಬರತೊಡಗುತ್ತದೆ. ಹಾಗಾಗಿ ಕೆಲಸದವರೂ ಹಿಂದೇಟು ಹಾಕುತ್ತಾರೆ, ಸಮರ್ಪಕವಾಗಿ ಮಿಶ್ರಗೊಳಿಸದೇ ಇದ್ದರೆ, ಜೀವಾಣುಗಳು ಸಮರ್ಪಕವಾಗಿ ಅಭಿವೃದ್ಧಿಗೊಳ್ಳುವುದಿಲ್ಲ.
ಕಲಬುರಗಿಯ ರೈತ ಶರಣಬಸಪ್ಪ ಪಿ.ಪಾಟೀಲ್ ಅವರು ಇದಕ್ಕೆ ಪರಿಹಾರವಾಗಿ ಯಂತ್ರವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಯಂತ್ರವನ್ನು 200-300 ಲೀಟರ್ ಜೀವಾಮೃತ ದ್ರಾವಣ ತುಂಬಿದ ಡ್ರಮ್ಗೆ ಅದ್ದಿ ಇರಿಸಿದರಾಯಿತು. ಟೈಮರ್ ಹೊಂದಿರುವ ಸೌರ ಚಾಲಿತ ಈ ಯಂತ್ರವು ದಿನಕ್ಕೆ 3 ಬಾರಿಯಂತೆ 7 ದಿನ ಸಮಯಕ್ಕೆ ಸರಿಯಾಗಿ ಮಿಶ್ರಗೊಳಿಸುತ್ತದೆ. ಸಮಯ, ಶ್ರಮ ಎರಡೂ ಉಳಿತಾಯವಾಗುತ್ತದೆ. ಪೇಟೆಂಟ್ ನೊಂದಿಗೆ ಈ ಯಂತ್ರವನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಬೆಲೆ 7,000 ರೂ. ಇರಲಿದೆ ಎಂದು ಅವರು ವಿವರಿಸುತ್ತಾರೆ. ಪುತ್ರ ಮಲ್ಲಿಕಾರ್ಜುನ್ ವಿವರಿಸಿದರು.
ಸ್ವತಃ ರೈತರಾಗಿರುವ ಶರಣಬಸಪ್ಪ ಅವರು ಈಗಾಗಲೇ ಕೃಷಿಕರಿಗೆ ಉಪಯುಕ್ತವಾದ ವಿವಿಧ 25 ಸರಳ ಉಪಕರಣಗಳನ್ನು ಅಭಿವೃದ್ಧಿಪಡಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿರುವುದು ವಿಶೇಷ.
