ಬೆಂಗಳೂರು ನ.19: ಅಕ್ರಮ ನೀರು ಸೋರಿಕೆಗೆ ಕಡಿವಾಣ ಹಾಕುವ ಮೂಲಕ, ಕಲುಷಿತ ನೀರು ಪತ್ತೆ ಹಚ್ಚಿ ಪರಿಶುದ್ಧ ನೀರು ನೀಡುವ ನಿಟ್ಟಿನಲ್ಲಿ ಬೆಂಗಳೂರು ಜಲ ಮಂಡಳಿ ಅಳವಡಿಸಿಕೊಂಡಿರುವ ನೂತನ ರೋಬೋಟಿಕ್ ತಂತ್ರಜ್ಞಾನ ದೇಶಕ್ಕೆ ಮಾದರಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು..
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಕ್ರಮ ಸಂಪರ್ಕ ಪತ್ತೆ ಮತ್ತು ನೀರಿನ ಸೋರಿಕೆ ತಡೆಗೆ ನೂತನವಾಗಿ ರಚಿಸಿರುವ ನೀಲಿ ಪಡೆ ಮತ್ತು ರೊಬ್ಯಾಟಿಕ್ ತಂತ್ರಜ್ಞಾನ ಅಳವಡಿಕೆ ಯೋಜನೆಗಳಿಗೆ ಬುಧವಾರ ಅಲಿ ಆಸ್ಕರ್ ರಸ್ತೆಯಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಬೆಂಗಳೂರಿನ ಜನರಿಗೆ ಪರಿಶುದ್ಧ ನೀರು ನೀಡುವ ಜವಾಬ್ದಾರಿ ಸರಕಾರದ ಮೇಲಿದೆ. ಇದಕ್ಕಾಗಿ ಮಂಡಳಿಯು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದೆ. ಬಿಐಎಸ್ ಮಾನ್ಯತೆ ಪಡೆದಿರುವ ಏಕೈಕ ಸಂಸ್ಥೆಯಾಗಿದ್ದು, ದೇಶಕ್ಕೆ ಮಾದರಿಯಾಗಿದೆ ಎಂದರು.
ಅಕ್ರಮವಾಗಿ ನೀರಿನ ಸಂಪರ್ಕ ಪಡೆದಿರುವ ಎಲ್ಲರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು. ಬಡವ, ಶ್ರೀಮಂತ, ಉದ್ಯಮಿ ಯಾರೇ ಇರಲಿ, ಕಾನೂನಿನ ಮುಂದೆ ಎಲ್ಲರೂ ಒಂದೇ ಎಂಬುದು ಎಲ್ಲರಿಗೂ ತಿಳಿಯಬೇಕು. ಮಂಡಳಿ ನೀರಿನ ಜತೆಗೆ ಕೊಳಚೆ ನೀರು ಸೇರುವುದು ಪತ್ತೆ ಹಚ್ಚಿ ಅದನ್ನ ಕ್ಷಿಪ್ರವಾಗಿ ಸರಿಪಡಿಸಬೇಕು. ಬೆಂಗಳೂರಿನ ಜನರು ನೀರಿನ ಕ್ಯಾನ್ ಗಳ ಮೇಲೆ ಅವಲಂಬಿತರಾಗುವುದನ್ನು ನಿಲ್ಲಿಸಿ ಎಂದು ಮಂಡಳಿಗೆ ಸಲಹೆ ನೀಡಿದರು.
ಭಾರತದಲ್ಲೇ ಇದೊಂದು ನೂತನ ಪ್ರಯೋಗ
ರೋಬೋಟಿಕ್ ತಂತ್ರಜ್ಞಾನ ದ ಮೂಲಕ ಅಕ್ರಮ ಸಂಪರ್ಕ ತಡೆಗಟ್ಟಲು ಇದೊಂದು ಉತ್ತಮ ಕ್ರಮ. ನೀರು ಕಲುಷಿತಗೊಂಡ ಸಮಯದಲ್ಲಿ ಹೆಚ್ಚಿನ ಸಮಯ ತೆಗೆದುಕೊಳ್ಳದೆ, ನೇರವಾಗಿ ರೋಬೋಟಿಕ್ ತಂತ್ರಜ್ಞಾನ ಮೂಲಕವೇ ಮೂಲವನ್ನು ಪತ್ತೆ ಮಾಡಿ ಹೆಚ್ಚು ರಸ್ತೆ ಅಗೆತಕ್ಕೆ ಅವಕಾಶ ಕಲ್ಪಿಸದೆ, ಸಮಸ್ಯೆಗೆ ಪರಿಹಾರ ಕಲ್ಪಿಸುವ ಕೆಲಸ ಮಾಡಲಿದೆ. ಇದಕ್ಕಾಗಿ ಮಂಡಳಿ ಸಿಬ್ಬಂದಿ , ನೀಲಿ ಪಡೆಗೆ ಅಭಿನಂದನೆ. ಇದು ದೇಶಕ್ಕೆ ಮಾದರಿಯಾಗಲಿ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.
ಅನವಶ್ಯಕವಾಗಿ ರಸ್ತೆ ಅಗೆತಗಳನ್ನು ತಡೆಗಟ್ಟುವ ಅಗತ್ಯತೆ ಹೆಚ್ಚಾಗಿದೆ. ಆ ಮೂಲಕ ರಸ್ತೆ ಗುಂಡಿಯಾಗುವುದನ್ನು ನಿಯಂತ್ರಿಸಬಹುದು. ಈ ರೋಬೋಟಿಕ್ ತಂತ್ರಜ್ಞಾನ ಮಂಡಳಿಗೆ ಬಹಳಷ್ಟು ಉಪಯೋಗವಾಗಲಿದೆ. ಇದನ್ನು ಕೇಂದ್ರ ಸರ್ಕಾರ ಕೂಡ ಒಪ್ಪಿಕೊಂಡಿರುವುದು ಖುಷಿಯ ವಿಚಾರ. ಮಂಡಳಿಯು ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವ ಮೂಲಕ ನಾಗರಿಕರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರಾತ್ಯಕ್ಷಿಕೆ ವೀಕ್ಷಣೆ: ಮಂಡಳಿಯು ಅಳವಡಿಸಿಕೊಂಡಿರುವ ರೊಬ್ಯಾಟಿಕ್ ಎಐ ತಂತ್ರಜ್ಞಾನದ ಆಧಾರಿತ ಮೂಲಕ ನೀರಿನ ಸೋರಿಕೆಯನ್ನು ಪತ್ತೆ ಹಚ್ಚಿ ಅದರ ಮಾಹಿತಿಯನ್ನು ಮಂಡಳಿ ಡ್ಯಾಶ್ ಬೋರ್ಡ್ ಗೆ ಕಳುಹಿಸಲಿದೆ. ಈ ಮಾಹಿತಿ ಆಧಾರಿತವಾಗಿ ಮಂಡಳಿ ತಕ್ಷಣ ಕಾರ್ಯ ಪ್ರವೃತ್ತವಾಗಲಿರುವ ಪ್ರಾತ್ಯಕ್ಷಿಕೆ ಯನ್ನು ಪ್ರದರ್ಶಿಸಲಾಯಿತು. ಇದನ್ನು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಬಹಳ ಕುತೂಹಲದಿಂದ ವೀಕ್ಷಣೆ ಮಾಡಿದರು. ಇದೇ ಮಾದರಿಯಲ್ಲಿ ವಾಸ್ತವವಾಗಿಯೂ ನಡೆಯಬೇಕೆಂದು ಮಂಡಳಿಗೆ ಸೂಚನೆ ನೀಡಿದರು.
ಬೆಂಗಳೂರು ಜಲಮಂಡಳಿಯ ಅಧ್ಯಕ್ಷರಾದ ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಜನರಿಗೆ ಪರಿಶುದ್ಧ ನೀರು ಕೊಡಬೇಕು ಎಂಬುದು ಮಂಡಳಿಯ ಧ್ಯೇಯ ಅದಕ್ಕಾಗಿ ಈ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ನೀರು ಕಲುಷಿತಗೊಂಡ ತಕ್ಷಣ ನಾವು ಪರಿಶೀಲಿಸಲು ಹತ್ತಾರು ಕಡೆ ರಸ್ತೆ ಅಗೆಯಬೇಕಿತ್ತು. ಇನ್ನುಮುಂದೆ ಈ ಸಮಸ್ಯೆ ಇರುವುದಿಲ್ಲ. ನೂತನ ರೋಬೋಟಿಕ್ ತಂತ್ರಜ್ಞಾನದ ಮೂಲಕ ಸ್ಕ್ಯಾನ್ ಮಾಡಿ ತಕ್ಷಣ ಪತ್ತೆ ಮಾಡಿ ಕೇವಲ ರಿಪೇರಿ ಅವಶ್ಯಕತೆ ಇದ್ದ ಕಡೆ ಮಾತ್ರ ರಸ್ತೆ ಅಗೆದರೆ ಸಾಕು. ಅಲ್ಲದೆ ಕೇವಲ 24 ಗಂಟೆಗಳ ಅವಧಿಯೊಳಗೆ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.
ನೂತನ ರೊಬೋಟಿಕ್ ತಂತ್ರಜ್ಞಾನದ ಬಳಿಕ ದೂರು ಪರಿಹಾರ ಪ್ರಕ್ರಿಯೆಯು ವೇಗಗೊಳ್ಳುತ್ತದೆ. ಅಕ್ರಮ ಸಂಪರ್ಕಗಳಿಂದ ಮಂಡಳಿಗೆ ಭಾರಿ ನಷ್ಟ ಉಂಟಾಗುತ್ತಿದ್ದು, ಇದನ್ನು ಸರಿದೂಗಿಸಲಿದೆ. ರೊಬೋಟಿಕ್ ತಂತ್ರಜ್ಞಾನ ಮತ್ತು ಕಾನೂನು ಜಾರಿಗೊಂಡು ಎಲ್ಲ ಉಲ್ಲಂಘನೆಗಳನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ. ಈ ವಿನೂತನ ಉಪಕ್ರಮದಿಂದ ಸುಮಾರು ಶೇಕಡ. 28ರಷ್ಟಿರುವ ನೀರಿನ ನಷ್ಟವನ್ನು ಗಣನೀಯವಾಗಿ ಕಡಿತಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ,” ಎಂದು ಹೇಳಿದರು.
