ಬೆಂಗಳೂರು: ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ವಲಯ-1ರ ವ್ಯಾಪ್ತಿಯಲ್ಲಿ 88 ಆಸ್ತಿಗಳಿಂದ ರೂ.2.27 ಕೋಟಿ ಕಂದಾಯ ಬಾಕಿ ಇರುವುದರಿಂದ, ಫೆಬ್ರವರಿ 21 ರಂದು ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ಜಂಟಿ ಆಯುಕ್ತರಾದ ಆರತಿ ಆನಂದ್ ಅವರು ತಿಳಿಸಿದರು.
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ರಾಜರಾಜೇಶ್ವರಿ ನಗರ, ವಲಯ-1ರ ವ್ಯಾಪ್ತಿಯಲ್ಲಿನ ಸ್ವತ್ತುಗಳಿಂದ ವಸೂಲಿಯಾಗುವ ಆಸ್ತಿ ತೆರಿಗೆಯನ್ನು ಸಾರ್ವಜನಿಕರಿಗೆ ಅಗತ್ಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಬಳಸಲಾಗುತ್ತದೆ. ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2025 ಅನ್ವಯ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ಸ್ವತ್ತುಗಳ ಮಾಲೀಕರು ಪ್ರತಿ ಆರ್ಥಿಕ ಸಾಲಿನಲ್ಲಿ ಆಸ್ತಿ ತೆರಿಗೆ ಪಾವತಿಸಬೇಕಾಗುತ್ತದೆ.
ಆಸ್ತಿ ತೆರಿಗೆ ಪಾವತಿಸದ ಪ್ರಕರಣಗಳಲ್ಲಿ, ಆಸ್ತಿ ತೆರಿಗೆ ನಿರ್ಧಾರ, ವಸೂಲಾತಿ ಮತ್ತು ನಿರ್ವಹಣೆ ನಿಯಮಗಳು-2024ರ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ.
ಸಂಬಂಧಿತ ಕಾಯ್ದೆ ಹಾಗೂ ನಿಯಮಗಳಂತೆ, ಆಸ್ತಿ ತೆರಿಗೆ ಸುಸ್ತಿದಾರರಿಗೆ ಕಾರಣ ಕೇಳುವ ನೋಟಿಸ್ ಹಾಗೂ ಬೇಡಿಕೆ ಪತ್ರಗಳನ್ನು ಜಾರಿಗೊಳಿಸಲಾಗಿದೆ. ಸುಸ್ತಿದಾರರ ವಿವರಗಳನ್ನು ಪಾಲಿಕೆಯ ಅಧಿಕೃತ ಜಾಲತಾಣ https://bbmp.gov.in ನಲ್ಲಿ ವೀಕ್ಷಿಸಬಹುದಾಗಿದೆ ಹಾಗೂ ಆಸ್ತಿ ತೆರಿಗೆ ಪಾವತಿಸಬಹುದಾಗಿದೆ. ಸಾಕಷ್ಟು ಅವಕಾಶಗಳನ್ನು ನೀಡಿದ ಬಳಿಕವೂ ಬಾಕಿ ಉಳಿಸಿಕೊಂಡಿರುವ ಸ್ವತ್ತಿನ ಮಾಲೀಕರಿಗೆ ನಿಯಮಾನುಸಾರ ಮೊಬೈಲ್ ಸಂದೇಶಗಳ ಮೂಲಕ, ಖುದ್ದಾಗಿ ಹಾಗೂ ಸ್ವತ್ತಿನ ಸ್ಥಳದಲ್ಲಿಯೇ ಪಟ್ಟಿ ಅಂಟಿಸುವ ಮೂಲಕ ನೋಟಿಸ್ ಜಾರಿಗೊಳಿಸಲಾಗಿದೆ.
ಸಾಕಷ್ಟು ಅವಕಾಶಗಳಿದ್ದರೂ ಆಸ್ತಿ ತೆರಿಗೆ ಪಾವತಿಸದ ಸ್ವತ್ತುಗಳನ್ನು ಕಾಯ್ದೆ ಮತ್ತು ನಿಯಮಗಳ ಅನ್ವಯ ಹರಾಜು ಪ್ರಕ್ರಿಯೆಗೆ (Distress Sale) ಒಳಪಡಿಸಲು ತೀರ್ಮಾನಿಸಲಾಗಿದೆ.
2026 ನೇ ಫೆಬ್ರವರಿ 17 ರಂದು ಹರಾಜು ಪ್ರಕ್ರಿಯೆಗೆ ಒಳಪಡಿಸಲಾಗಿದ್ದರೂ ಹರಾಜಾಗದೆ ಉಳಿದ ಸ್ವತ್ತುಗಳು ಹಾಗೂ 2026 ನೇ ಫೆಬ್ರವರಿ 21 ರಂದು ಹರಾಜು ಮಾಡಲು ಉದ್ದೇಶಿಸಿರುವ ಸ್ವತ್ತುಗಳನ್ನು ಒಟ್ಟಾಗಿ ಫೆಬ್ರವರಿ 21 ರಂದು ಸಮಯ ಬೆಳಿಗ್ಗೆ 11:00 ಗಂಟೆಗೆ ಜಂಟಿ ಆಯುಕ್ತರ ಕಛೇರಿ, 18ನೇ ಅಡ್ಡರಸ್ತೆ, ಐಡಿಯಲ್ ಹೋಮ್ಸ್, ರಾಜರಾಜೇಶ್ವರಿನಗರ ಬೆಂಗಳೂರು-560098 ಕಛೇರಿಯ ಸಭಾಂಗಣದಲ್ಲಿ ನಡೆಸಲಾಗುವುದು. ಸಾರ್ವಜನಿಕರು/ಆಸಕ್ತರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.
ಹರಾಜು ಪ್ರಕ್ರಿಯೆಗೆ ಮುನ್ನ ಪಟ್ಟಿಯಲ್ಲಿನ ಸ್ವತ್ತಿನ ಆಸ್ತಿ ತೆರಿಗೆಯನ್ನು ಪಾವತಿಸಿದಲ್ಲಿ ಆ ಸ್ವತ್ತನ್ನು ಹರಾಜಿನಿಂದ ಕೈ ಬಿಡಲಾಗುತ್ತದೆ. ಅಲ್ಲದೇ ಸ್ವತ್ತಿನ ಮಾಲೀಕರು ಹರಾಜು ಪ್ರಕ್ರಿಯೆಗೆ ಮುನ್ನ ತಮ್ಮ ಆಕ್ಷೇಪಣೆಗಳನ್ನು ಜಂಟಿ ಆಯುಕ್ತರ ಕಚೇರಿಗೆ ಸಲ್ಲಿಸಲು ಅವಕಾಶವಿರುತ್ತದೆ ಎಂದು ತಿಳಿಸಿದ್ದಾರೆ.
