ಬೆಂಗಳೂರು: ಛತ್ರಪತಿ ಶಿವಾಜಿ ಮಹಾರಾಜರು ಒಂದು ಧರ್ಮಕ್ಕೆ ಮಾತ್ರ ಸೀಮಿತರಲ್ಲ, ಅವರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವುದು ಸಮಂಜಸವಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ಗೋಸಾಯಿ ಮಹಾಸಂಸ್ಥಾನ ಮಠದ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಆಯೋಜಿಸಿದ್ದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿವಾಜಿ ಮಹಾರಾಜರ ಅವರ ಆಡಳಿತ ಅವಧಿಯಲ್ಲಿ ಎಲ್ಲಾ ಧರ್ಮದವರಿಗೂ ಧಾರ್ಮಿಕ ಸ್ವಾತಂತ್ರ್ಯ ಇತ್ತು. ರಾಜರಾಗಿ ಅವರು ಎಲ್ಲಾ ಧರ್ಮಗಳ ಪರ ನಿಂತಿದ್ದರು. ಸರ್ವ- ಧರ್ಮ ಸಹಿಷ್ಣುತೆಗೆ ಶಿವಾಜಿಯ ಆಡಳಿತ ಮಾದರಿಯಾಗಿತ್ತು. ಎಲ್ಲಾ ಸಮುದಾಯದ ಗೌರವಾನ್ವಿತ ವ್ಯಕ್ತಿಗಳಿಗೆ ಅವರು ತಮ್ಮ ಆಡಳಿತ ವ್ಯವಸ್ಥೆಯಲ್ಲಿ ತೊಡಗಿಸಿದ್ದರು. ಇಂದು ಅವರ ಹೆಸರನ್ನು ಕೇಸರಿಕರಣಗೊಳಿಸುತ್ತಿದ್ದು, ಅದು ಸರಿಯಲ್ಲ ಎಂದರು.
ಪ್ರತಿಯೊಬ್ಬರು ಶಿವಾಜಿ ಅವರ ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಇಡೀ ದೇಶದಲ್ಲಿ ಶಿವಾಜಿ ಮಹಾರಾಜರು ತನ್ನದೇ ಆದ ಇತಿಹಾಸವನ್ನು ಸೃಷ್ಟಿ ಮಾಡಿದ್ದರು. ಶಿವಾಜಿ ಅವರು ಕರ್ನಾಟಕ ಭಾಷೆ ಹಾಗೂ ರಾಜ್ಯದ ಮೇಲೆ ಅಪಾರವಾದ ಪ್ರೇಮವನ್ನಿರಿಸಿಕೊಂಡಿದ್ದರು. ವಿಜಯನಗರ ಸಾಮ್ರಾಜ್ಯ ಪತನ ವೇಳೆ ಅದರ ಅವಶೇಷಗಳನ್ನು ಕಂಡು, ಔರಂಗಜೇಬನ ವಿರುದ್ಧ ಧಿಕ್ಕಾರ ಕೂಗಿದ್ದರು ಎಂದು ನೆನೆದರು.
ಮೊದಲ ಬಾರಿಗೆ ಮೀಸಲಾತಿ ಪರಿಚಯಿಸಿದ್ದು ಸಾಹು ಮಹಾರಾಜರು: ಇನ್ನು ಇಂತಹ ಸಂದರ್ಭದಲ್ಲಿ ಸಾಹು ಮಹಾರಾಜರನ್ನು ನಾವು ನೆನೆಯುವ ಅಗತ್ಯವಿದೆ. ದೇಶದಲ್ಲಿ ಮೊದಲ ಬಾರಿಗೆ ಮೀಸಲಾತಿಯನ್ನು ಜಾರಿಗೆ ತಂದವರು ಸಾಹು ಮಹಾರಾಜರು. ತುಳಿತಕ್ಕೆ ಒಳಗಾದ ಸಮಾಜವನ್ನು ಮೇಲೆತ್ತಿದ್ದ ಮೊಟ್ಟ ಮೊದಲ ರಾಜ ಸಾಹು ಮಹಾರಾಜರು. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ವಿದೇಶಿ ವ್ಯಾಸಂಗ ಮಾಡಲು ನೆರವು ನೀಡಿದ್ದರು. ಹೀಗಾಗಿ ಬಡವರ ಮಕ್ಕಳು ವಿದೇಶಿ ವ್ಯಾಸಂಗಕ್ಕೆ ಮಾಡಲು ನೀಡಲಾಗುತ್ತಿದ್ದ ಮೊತ್ತವನ್ನು ರೂ. 25 ಲಕ್ಷದಿಂದ ರೂ. 50 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದರು.
ಇನ್ನು ಸಾಂಬಾಜಿ ಅವರ ಸಮಾಧಿ ನಾನು ಪ್ರತಿನಿಧಿಸುವ ಕನಕಗಿರಿ ಕ್ಷೇತ್ರದಲ್ಲಿ ಇದೆ ಎಂಬುದನ್ನು ನನ್ನ ಗಮನಕ್ಕೆ ಬಂದಿದೆ. ಖಾಸಗಿ ಸ್ಥಳದಲ್ಲಿ ಸಾಂಬಾಜಿ ಅವರ ಸಮಾಧಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾನೂನು ತೊಡಕ್ಕನ್ನು ಬಗೆಹರಿಸಿಕೊಂಡು ಸಮಾಧಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಶಿವರಾಜ್ ತಂಗಡಗಿ ಅವರು ಭರವಸೆ ನೀಡಿದರು.
ಇದೇ ವೇಳೆ ಮರಾಠ ಅಭಿವೃದ್ಧಿ ನಿಗಮದ ವತಿಯಿಂದ ವಿವಿಧ ಯೋಜನೆಗಳ ಪ್ರಮಾಣ ಪತ್ರವನ್ನು ಸಚಿವರು ವಿತರಿಸಿದರು.
ಸಮಾರಂಭದಲ್ಲಿ ಮರಾಠ ಅಭಿವೃದ್ಧಿ ನಿಮಗದ ಅಧ್ಯಕ್ಷ ಬಿ.ಎಚ್.ಮರಿಯೋಜಿರಾವ್, ಕರ್ನಾಟಕ ಮರಾಠ ಸಮಾಜದ ರಾಜ್ಯಾಧ್ಯಕ್ಷ ಎಸ್.ಸುರೇಶ್ ರಾವ್ ಸಾಠೆ, ಮರಾಠ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಸುನೀಲ್ ರಾವ್ ಭಿಸ್ಸೆ, ಮರಾಠ ಕಲ್ಯಾಣ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಪಾಗೋಜಿ, ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
