ಬೆಂಗಳೂರು:ಇಂದು ವಿಶ್ವ ವನ್ಯಜೀವಿ ದಿನ. ವನ್ಯಜೀವಿಗಳ ಅಳಿವು, ಉಳಿವು, ಸಂರಕ್ಷಣೆ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಮಾರ್ಚ್ 3 ಅನ್ನು ವಿಶ್ವ ವನ್ಯಜೀವಿ ದಿನವನ್ನಾಗಿ ವಿಶ್ವಸಂಸ್ಥೆ ಆಚರಿಸುತ್ತದೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ವಿಶ್ವ ವನ್ಯಜೀವಿ ದಿನವು ನಮ್ಮ ಭೂಮಿಯನ್ನು ಶ್ರೀಮಂತಗೊಳಿಸುವ ಮತ್ತು ನಮ್ಮ ಪರಿಸರ ವ್ಯವಸ್ಥೆಗಳನ್ನು ಉಳಿಸಿಕೊಳ್ಳುವ ಅದ್ಭುತ ಪ್ರಾಣಿ ವೈವಿಧ್ಯತೆಯನ್ನು ಆಚರಿಸುವ ದಿನವಾಗಿದೆ.
ವನ್ಯಜೀವಿಗಳ ರಕ್ಷಣೆಗಾಗಿ ಶ್ರಮಿಸುವ ಪ್ರತಿಯೊಬ್ಬರನ್ನು ಗುರುತಿಸುವ ದಿನವೂ ಆಗಿದೆ ಎಂದು ಹೇಳಿದ್ದಾರೆ.
ವನ್ಯಜೀವಿಗಳ ಅಭಿವೃದ್ಧಿ ಹೊಂದುವುದನ್ನು ಮುಂದುವರಿಸಲು ಅವುಗಳ ಸಂರಕ್ಷಣೆ ಮತ್ತು ಸುಸ್ಥಿರ ಪದ್ಧತಿಗಳು ಹಾಗೂ ಅವುಗಳ ಆವಾಸ ಸ್ಥಾನಗಳ ರಕ್ಷಣೆಗೆ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.
ಅಲ್ಲದೆ, ಎನ್ ಡಿ ಎ ಸರ್ಕಾರ ವನ್ಯಜೀವಿಗಳ ಸಂರಕ್ಷಣೆಗೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಅದರಲ್ಲಿ ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲಾಯನ್ಸ್ ಕೂಡ ಒಂದಾಗಿದೆ. ಜೊತೆಗೆ, ಚೀತಾ ಸೇರಿದಂತೆ ಹಲವು ವನ್ಯಜೀವಿಗಳನ್ನು ಸಂರಕ್ಷಿಸಲು ವಿಶೇಷ ಕ್ರಮಗಳನ್ನು ಕೈಗೊಂಡಿದೆ.
ಭಾರತ, ವಿಶ್ವದ ಶೇಕಡ 70ರಷ್ಟು ಹುಲಿ ಸಂತತಿಯನ್ನು ಹೊಂದಿದೆ. ಅಲ್ಲದೆ, ಒಂದು ಕೊಂಬಿನ ರಿನೊ, ಗರಿಷ್ಠ ಪ್ರಮಾಣದ ಏಷ್ಯಾದ ಆನೆಗಳು, ಸಿಂಹಗಳು, ಭಾರತದಲ್ಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
