ಸಮಗ್ರ ಸುದ್ದಿ

ವಿದ್ಯುತ್ ಲಿಂಕ್ ಲೈನ್‌ ಸ್ಥಾಪಿಸಿ, ಸಮರ್ಪಕ ವಿದ್ಯುತ್ ಪೂರೈಕೆಗೆ ಆದ್ಯತೆ: ಕೆ.ಜೆ.ಜಾರ್ಜ್

Share

ಕೊಪ್ಪಳ, ನ. 26: ವಿದ್ಯುತ್ ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ ವಿದ್ಯುತ್ ಲಿಂಕ್ ಲೈನ್‌ಗಳನ್ನು ಸ್ಥಾಪಿಸುವ ಮೂಲಕ ಬೇಡಿಕೆಗೆ ಅನುಸಾರವಾಗಿ ಸಮರ್ಪಕ ವಿದ್ಯುತ್ ಪೂರೈಕೆಗೆ ಆದ್ಯತೆ ನೀಡಲಾಗುತ್ತದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್‌ ಹೇಳಿದ್ದಾರೆ.

ಕೊಪ್ಪಳದ ಜಿಲ್ಲಾ ಪಂಚಾಯತ್‌ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಇಂಧನ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಸ್ಥಾಪಿಸಿರುವ ವಿದ್ಯುತ್ ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ ವಿದ್ಯುತ್ ಲಿಂಕ್ ಲೈನ್‌ಗಳನ್ನು ಸ್ಥಾಪಿಸುವ ಮೂಲಕ ಬೇಡಿಕೆಗೆ ಅನುಸಾರವಾಗಿ ಸಮರ್ಪಕ ವಿದ್ಯುತ್ ಪೂರೈಕೆಗೆ ಆದ್ಯತೆ ಮೇಲೆ ಕ್ರಮ ಕೈಗೊಳ್ಳಬೇಕು. ವಿದ್ಯುತ್ ಕೇಂದ್ರವಾರು ಸಂಪೂರ್ಣ ಲಿಂಕ್ ಲೈನ್ ಆಗಿರುವ ಬಗ್ಗೆ ಕೆಪಿಟಿಸಿಎಲ್ ಹಾಗೂ ಜೆಸ್ಕಾಂ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ವಿದ್ಯುತ್ ಕಂಬ, ಟ್ರಾನ್ಸಫಾರ್ಮರ್ ಸೇರಿದಂತೆ ಇತರೆ ಯಾವುದೇ ವಿದ್ಯುತ್‌ ಕಾಮಗಾರಿ ಕೈಗೊಳ್ಳುವಾಗ ಇಲಾಖೆಯ ಅಧಿಕಾರಿಗಳು ಆಯಾ ಭಾಗದ ಜನಪ್ರತಿನಿಧಿಗಳ ಗಮನಕ್ಕೆ ತಂದು ಕೆಲಸ ಮಾಡಬೇಕು. ಜನಪ್ರತಿನಿಧಿಗಳಿಗೆ ಆಯಾ ಭಾಗದ ಸಮಸ್ಯೆಗಳು ಚೆನ್ನಾಗಿ ಗೊತ್ತಿರುತ್ತವೆ. ಟ್ರಾನ್ಸ್ ಫಾರ್ಮರ್‌ಗಳ ರಿಪೇರಿ, ಅದರಲ್ಲೂ ಮುಖ್ಯವಾಗಿ ರೈತರಿಗೆ ವಿದ್ಯುತ್ ಪೂರೈಸುವ ಟ್ರಾನ್ಸ್ ಫಾರ್ಮರ್‌ಗಳ ದುರಸ್ತಿ ಅಥವಾ ಬದಲಾವಣೆಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದರು.

ವಿದ್ಯುತ್ ತಂತಿ, ಕಂಬಗಳ ದುರಸ್ತಿ ಸೇರಿದಂತೆ ವಿದ್ಯುತ್ ಪೂರೈಕೆಯಲ್ಲಿ ಆಗುವ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಿ ಬಗೆಹರಿಸಬೇಕು. ಸ್ಥಳೀಯ ಜನಪ್ರತಿನಿಧಿಗಳನ್ನು ಭೇಟಿಯಾಗಿ ಅವರ ವ್ಯಾಪ್ತಿಯಲ್ಲಿರುವ ಸಮಸ್ಯೆಗಳ ಕುರಿತು ಚರ್ಚಿಸಿ ಅವುಗಳನ್ನು ಬಗೆಹರಿಸಬೇಕು ಎಂದು ಇಲಾಖೆ ಅಧಿಕಾರಿಗಳು ಸೂಚಿಸಿದರು.

ರೈತರಿಗೆ ಮಾಹಿತಿ ಮಾಹಿತಿ ನೀಡಿ, ನೆರವಾಗಿ:
ವಿದ್ಯುತ್ ಪೂರೈಕೆಯನ್ನು ಸಮರ್ಪಕಗೊಳಿಸುವುದು ಅವಶ್ಯವಾಗಿದ್ದು, ಪಂಪ್ ಸೆಟ್‌ಗಳಿಗಾಗಿ ಹಾಗೂ ಇತರೆ ಅವಶ್ಯಕತೆಗಳು ಮತ್ತು ಕೈಗಾರಿಕೆಗಳ ವ್ಯಾಪ್ತಿಯಲ್ಲಿ ವಿದ್ಯುತ್ ಕಳ್ಳತನ ಆಗದಂತೆ ನಿಗಾವಹಿಸಬೇಕು. ಇದರ ಜತೆಗೆ ಅಧಿಕ ಲೋಡ್‌ನಿಂದಾಗಿ ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟು ಹೋಗದಂತೆ ನೋಡಿಕೊಳ್ಳಬೇಕು. ಅಲ್ಲದೇ, ಅಕ್ರಮ ಸಕ್ರಮ ಹಾಗೂ ಶೀಘ್ರ ಸಂಪರ್ಕ ಯೋಜನೆ, ಸಣ್ಣ ಮತ್ತು ದೊಡ್ಡ ರೈತರಿಗೆ ನೀಡುವ ಸಹಾಯ ಸೌಲಭ್ಯಗಳನ್ನು ಅವರಿಗೆ ತಿಳಿಸಬೇಕು.

ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಿರುವ ಕಡೆಗಳಲ್ಲಿ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. `ಕುಸುಮ್-ಬಿ’ ಯೋಜನೆಯಡಿ ಸೋಲಾರ್ ಪಂಪ್‌ಸೆಟ್‌ಗಳನ್ನು ಅವಡಿಸಿಕೊಳ್ಳುವಂತೆ ರೈತರನ್ನು ಉತ್ತೇಜಿಸಬೇಕು. ಪ್ರವಾಹ ಸಂದರ್ಭದಲ್ಲಿ ಹಾನಿಗೊಳಗಾದ ವಿದ್ಯುತ್ ಮೂಲಸೌಕರ್ಯಗಳನ್ನು ತ್ವರಿತವಾಗಿ ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆ, ಉನ್ನತೀಕರಣ ಸೇರಿದಂತೆ ಪ್ರಗತಿಯಲ್ಲಿರುವ ಇತರೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಜನರಿಗೆ ಸಮಪರ್ಕ ವಿದ್ಯುತ್ ಪೂರೈಕೆಗೆ ಅನುಕೂಲ ಮಾಡಬೇಕು, ಎಂದು ಸಚಿವರು ಹೇಳಿದರು.

ತೋಟದ ಮೆನೆಗಳಿಗೆ ನಿರಂತಜ್ಯೋತಿ ಯೋಜನೆ ಅಡಿ ವಿದ್ಯುತ್ ಕಲ್ಪಿಸಲಾಗುತ್ತಿದ್ದು, ಆದರೆ ರೈತರು ಸಿಂಗಲ್‌ ಪೇಸ್‌ಗೆ ಹುಕ್‌ ಹಾಕಿ ನೀರಾವರಿ ಪಂಪ್‌ಸೆಟ್‌ಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ವಿದ್ಯುತ್ ಸರಬರಾಜನ್ನು ನೀಲುಗಡೆಗೊಳಿಸಲಾಗುವುದು. ಅದರೊಂದಿಗೆ ಅಕ್ರಮ-ಸಕ್ರಮ ಯೋಜನೆಯಡಿಯಲ್ಲಿ ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತಿದೆ. ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಈಗಾಗಲೇ 216 ಅಕ್ರಮ ನೀರಾವರಿ ಪಂಪ್‌ಸೆಟ್‌ಗಳ ಪೈಕಿ 108 ಪಂಪ್‌ಸೆಟ್‌ಗಳನ್ನು ಸಕ್ರಮ ಮಾಡಿದ್ದು, ಉಳಿದಿರುವುದನ್ನು ಶೀಘ್ರದಲ್ಲಿ ಮಾಡಲಾಗುವುದು ಎಂದು ತಿಳಿಸಿದರು.

ಕೊಪ್ಪಳ ವಿಧಾನಸಭಾ ಸದಸ್ಯರಾದ ಕೆ.ರಾಘವೇಂದ್ರ ಹಿಟ್ನಾಳ್‌ ಮಾತನಾಡಿ, ಜನರಿಗೆ ವಿದ್ಯುತ್ ಸಮಪರ್ಕವಾಗಿ ಪೂರೈಕೆಯಾಗಲು ಕ್ರಮ ಕೈಗೊಳ್ಳಯವುದರ ಜತೆಗೆ ವಿದ್ಯುತ್ ಕಾಮಗಾರಿ ವಿಳಂಬವಾಗದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿಗೆ ವಿದ್ಯುತ್ ವ್ಯವಸ್ಥೆ ಸಮರ್ಪಕವಾಗಿ ಪೂರೈಕೆಯಾಗಬೇಕು. ಹಳೆಯ ಕಂಬ, ವೈರ್‌ ಗಳನ್ನು ಬದಲಿಸಬೇಕು ಎಂದು ಹೇಳಿದಾಗ, ಈ ಬಗ್ಗೆ ಗಮನಹರಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ, ಸಂಸದ ರಾಜಶೇಖರ ಬಸವರಾಜ ಹಿಟ್ನಾಳ, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೆಶಕರ ಪಂಕಜ ಕುಮಾರ್ ಪಾಂಡೆ, ಜೆಸ್ಕಾಂ ವ್ಯವಸ್ಥಾಪಕ ನಿರ್ದೆಶಕ ಕೃಷ್ಣ ಭಾಜಪೇಯಿ ಉಪಸ್ಥಿತರಿದ್ದರು.


Share

You cannot copy content of this page