ಸಮಗ್ರ ಸುದ್ದಿ

ರೈತರ ಸಬಲೀಕರಣಕ್ಕಾಗಿ “ಪಿಎಂ ಕುಸುಮ್-2.0’ಗೆ ಕೇಂದ್ರ ಸಿದ್ಧತೆ | ಪಿಎಂ ಕುಸುಮ್ ಅಡಿಯಲ್ಲಿ 10 ಲಕ್ಷಕ್ಕೂ ಹೆಚ್ಚು ಸ್ವತಂತ್ರ ಸೌರ ಪಂಪ್ ಸ್ಥಾಪನೆ – ಪ್ರಲ್ಹಾದ್ ಜೋಶಿ | 13 ಲಕ್ಷ ಗ್ರಿಡ್-ಸಂಪರ್ಕಿತ ಪಂಪ್‌ಗಳ ಸೌರೀಕರಣ

Share

ನವದೆಹಲಿ: ಸೌರ ವಿದ್ಯುತ್ ಮೂಲಕ ರೈತರ ಸಬಲೀಕರಣಕ್ಕಾಗಿ ಕೃಷಿ ಪಿವಿ ನಿಯೋಜನೆ ಉತ್ತೇಜಿಸಲು ಕೇಂದ್ರ ಸರ್ಕಾರ “PM ಕುಸುಮ್ 2.0” ಅನ್ನು ಸಿದ್ಧಪಡಿಸುತ್ತಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ದೆಹಲಿಯಲ್ಲಿ ನಡೆದ 4ನೇ ರಾಷ್ಟ್ರೀಯ ಕೃಷಿ-ಪರಿಸರ ತಂತ್ರಜ್ಞಾನ ಶೃಂಗಸಭೆ ಉದ್ದೇಶಿಸಿ ಮಾತನಾಡಿ, ಇದು 10 ಗಿಗಾ ವ್ಯಾಟ್ ಕೃಷಿ ಪಿವಿ ಘಟಕ ಒಳಗೊಂಡಿರುತ್ತದೆ. ಅಲ್ಲದೆ, ರೈತರು ಒಂದೇ ಭೂಮಿಯಲ್ಲಿ ಬೆಳೆ ಜತೆಗೆ ವಿದ್ಯುತ್ ಉತ್ಪಾದಿಸಲು ಅನುವು ಮಾಡಿಕೊಡುತ್ತದೆ ಎಂದರು.

“PM ಕುಸುಮ್ 2.0” ಗ್ರಾಮೀಣ ಭಾರತದಲ್ಲಿ ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಹೊಸ ಮಾದರಿ ಸೃಷ್ಟಿಸುತ್ತದೆ. ಈ ಮೂಲಕ ಗ್ರಾಮೀಣ ಆರ್ಥಿಕತೆ ಉತ್ತೇಜನ ಮತ್ತು ರೈತರ ಆದಾಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.

10 ಲಕ್ಷಕ್ಕೂ ಅಧಿಕ ಸೌರ ಪಂಪ್: ಪಿಎಂ- ಕುಸುಮ್ ಯೋಜನೆಯಡಿ ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಸೌರ ಕೃಷಿ ಪಂಪ್‌ಗಳನ್ನು ಸ್ಥಾಪಿಸಲಾಗಿದೆ ಮತ್ತು ದೇಶಾದ್ಯಂತ 13 ಲಕ್ಷಕ್ಕೂ ಹೆಚ್ಚು ಗ್ರಿಡ್-ಸಂಪರ್ಕಿತ ಕೃಷಿ ಪಂಪ್‌ಗಳನ್ನು ಸೌರೀಕರಣಗೊಳಿಸಲಾಗಿದೆ. ಇದರಿಂದಾಗಿ ರೈತರು ಇಂದು “ಅನ್ನದಾತ” ಮಾತ್ರವಲ್ಲ,”ಉರ್ಜದಾತ” (ಇಂಧನ ಪೂರೈಕೆದಾರರು) ಆಗಲು ಸಹ ಅನುವು ಮಾಡಿಕೊಡುತ್ತಿದೆ ಎಂದು ಹೇಳಿದರು.

ನವೀಕರಿಸಬಹುದಾದ ಇಂಧನ ಹೆಚ್ಚಿನ ಕೃಷಿ ಭೂಮಿ ಮತ್ತು ಮನೆಗಳನ್ನು ತಲುಪುತ್ತಿದೆ. ನೀರಾವರಿ ವೆಚ್ಚವನ್ನು ಕಡಿಮೆ ಮಾಡುವುದರ ಜೊತೆಗೆ ಕೃಷಿ ಉತ್ಪಾದಕತೆಯನ್ನೂ ಸುಧಾರಿಸಿ, ವಿಶ್ವಾಸಾರ್ಹ ರೀತಿಯಲ್ಲಿ ವಿದ್ಯುತ್ ಪಡೆಯಲು ಸಹಾಯ ಮಾಡುತ್ತಿದೆ ಎಂದರು.

ಸೌರಶಕ್ತಿ ಉತ್ಪಾದನೆ ಮತ್ತು ಬಳಕೆ ಕೇವಲ ಇಂಧನ ಪರಿವರ್ತನೆಯಲ್ಲ, ಗ್ರಾಮೀಣ ಆರ್ಥಿಕತೆಯ ರೂಪಾಂತರವೂ ಆಗಿದೆ. ಕೃಷಿಯಲ್ಲಿ ಸೌರ ಶಕ್ತಿ ಬಳಕೆ ರೈತರಿಗೆ ಡೀಸೆಲ್ ಮೇಲಿನ ಅವಲಂಬನೆ ಹಾಗೂ ಕೃಷಿ ವೆಚ್ಚವನ್ನು ಕಡಿಮೆ ಮಾಡುತ್ತದೆ. ಡಿಸೇಲ್ ನಿಂದ ನೀರಾವರಿ ಗೋಧಿಗೆ ಎಕರೆಗೆ ಸುಮಾರು ₹6,790 ಮತ್ತು ಹತ್ತಿಯಂತಹ ಬೆಳೆಗಳಿಗೆ ಎಕರೆಗೆ ₹8,000 ಕ್ಕಿಂತ ಹೆಚ್ಚು ವೆಚ್ಚವಾಗಬಹುದು. ಆದರೆ ಸೌರ ಪಂಪ್‌ ಬಳಕೆಯಿಂದ ಎಕರೆಗೆ ₹5,000 ರಿಂದ ₹6,500 ರವರೆಗೆ ಉಳಿತಾಯ ಸಾಧ್ಯ ಮತ್ತು ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ ಎಂದು ಪ್ರತಿಪಾದಿಸಿದರು.

ಕೃಷಿ ವೋಲ್ಟಾಯಿಕ್ಸ್ ತೆರೆಯುತ್ತಿದೆ ಆದಾಯದ ಹೊಸ ಅವಕಾಶ: ಕೃಷಿಯೊಂದಿಗೆ ವಿದ್ಯುತ್ ಉತ್ಪಾದನೆಯನ್ನೂ ಸಂಯೋಜಿಸಿದಲ್ಲಿ ಉತ್ಪಾದಕತೆಯನ್ನು ಗಮನಾರ್ಹವಾಗಿ ಸುಧಾರಿಸಬಹುದು ಮತ್ತು ರೈತರಿಗೆ ಹೆಚ್ಚುವರಿ ಆದಾಯದ ಮೂಲವನ್ನು ಒದಗಿಸಬಹುದು ಎಂದು ಅಭಿಪ್ರಾಯಿಸಿದರು.

ಭಾರತದ ಕೃಷಿ ವೋಲ್ಟಾಯಿಕ್ ಸಾಮರ್ಥ್ಯ 3,000 GW ನಿಂದ ಸುಮಾರು 14,000 GW ವರೆಗೆ ಇರಬಹುದಾದ ಅಂದಾಜಿದ್ದು, ಇದು ಕೃಷಿಯೊಂದಿಗೆ ನವೀಕರಿಸಬಹುದಾದ ಶಕ್ತಿಯನ್ನು ಸಂಯೋಜಿಸುವ ಹೊಸ ಅವಕಾಶವನ್ನು ಪ್ರತಿಬಿಂಬಿಸುತ್ತದೆ. ಅಲ್ಲದೆ ರೈತರ ಗಳಿಕೆಯನ್ನು ಹೆಚ್ಚಿಸುತ್ತದೆ. ಕೃಷಿ ಮತ್ತು ವಿದ್ಯುತ್ ಉತ್ಪಾದನೆಯಿಂದ ವಾರ್ಷಿಕವಾಗಿ ಎಕರೆಗೆ ಸುಮಾರು ₹60,000 ರಿಂದ ₹1 ಲಕ್ಷಕ್ಕಿಂತ ಹೆಚ್ಚು ಆದಾಯ ಸಾಧ್ಯವಿದೆ ಎಂದರು.

ಸೂರ್ಯಘರ್ ವಿಸ್ತರಣೆ: PM ಸೂರ್ಯ ಘರ್ ಯೋಜನೆಯಲ್ಲಿ 31 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಈಗಾಗಲೇ ಪ್ರಯೋಜನ ಪಡೆದಿವೆ ಎಂದ ಸಚಿವರು, ದೇಶದ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯ 2014ರಲ್ಲಿ ಸುಮಾರು 81 Gw ಇತ್ತು. ಅದೀಗ ಸುಮಾರು 275 GW ಗೆ ಏರಿದೆ. ಭಾರತದ ಅರ್ಧಕ್ಕಿಂತ ಹೆಚ್ಚು ಸ್ಥಾಪಿತ ವಿದ್ಯುತ್ ಈಗ ಪಳೆಯುಳಿಕೆಯೇತರ ಮೂಲಗಳಿಂದ ಬರುತ್ತಿದೆ ಎಂದು ಹೇಳಿದರು.

ಸೌರ ಸಾಮರ್ಥ್ಯವು 2014ರಲ್ಲಿ ಸುಮಾರು 2.8 GW ನಿಂದ ಸುಮಾರು 143 GW ಗೆ ವಿಸ್ತರಿಸಿತು. ಪವನ ವಿದ್ಯುತ್ ಸಾಮರ್ಥ್ಯ 21 GW ನಿಂದ ಸುಮಾರು 55 GW ಗೆ ಏರಿತು ಮತ್ತು ಜೈವಿಕ ವಿದ್ಯುತ್ ಸಾಮರ್ಥ್ಯ 8.1 GW ನಿಂದ ಸುಮಾರು 12 GW ಗೆ ಏರಿತು. ಇದು ದೇಶದಲ್ಲಿ ನವೀಕರಿಸಬಹುದಾದ ಇಂಧನ ನಿಯೋಜನೆಯ ತ್ವರಿತ ಪ್ರಮಾಣವನ್ನು ಪ್ರತಿಬಿಂಬಿಸುತ್ತದೆ ಎಂದು ಜೋಶಿ ಹೇಳಿದರು.

ಕೃಷಿ ಭೂಮಿ, ಮೇಲ್ಛಾವಣಿಗಳು ಮತ್ತು ಗ್ರಾಮೀಣ ಉದ್ಯಮಗಳಲ್ಲಿ ಲಕ್ಷಾಂತರ ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನ ಸ್ಥಾಪನೆಗಳ ಮೂಲಕ ಭಾರತದ 500 GW ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯದ ಗುರಿ ಸಾಧಿಸಲಾಗುವುದು ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.


Share

You cannot copy content of this page