ಬೆಂಗಳೂರು: ಆನೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದರ ಜೊತೆಗೆ ಎಕ್ಸ್ ಪ್ರೆಸ್ ಹೆದ್ದಾರಿ ಮೊದಲಾದ ಮೂಲಭೂತ ಕಾಮಗಾರಿಗೆ ಗಜಪಥ ಛಿದ್ರವಾಗಿ ಆನೆ ಹಾವಳಿಯೂ ಹೆಚ್ಚಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ವಿಧಾನಸಭೆಗಿಂದು ತಿಳಿಸಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಪಿ.ಎಂ. ನರೇಂದ್ರ ಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಆನೆ-ಮಾನವ ಸಂಘರ್ಷ ತಡೆಗಟ್ಟಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ವರ್ಷ 116 ಕಿ.ಮೀ. ರೈಲು ಹಳಿ ತಡೆಗೋಡೆ (ರೈಲ್ವೆ ಬ್ಯಾರಿಕೇಡ್) ಮಂಜೂರು ಮಾಡಿದ್ದು, 201 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳು ನಡೆಯುತ್ತಿದ್ದು, ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ ಎಂದೂ ತಿಳಿಸಿದರು.
ಮಳವಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಐದೂವರೆ ಕಿ.ಮೀ. ರೈಲು ಹಳಿ ತಡೆಗೋಡೆಗೆ ಮಂಜೂರಾತಿ ನೀಡಲಾಗಿದ್ದು, 9 ಕೋಟಿ 38 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭವಾಗುತ್ತಿದೆ. ಇದರ ಜೊತೆಯಲ್ಲಿ ಟೆಂಟಕಲ್ ಫೆನ್ಸಿಂಗ್, ಕಂದಕ ನಿರ್ಮಾಣ ಮಾಡುತ್ತಿದ್ದೇವೆ.
ಆನೆಗಳು ನಾಡಿನತ್ತ ಬಂದಾಗ ಮರಳಿ ಕಾಡಿಗೆ ಅಟ್ಟಲು ಆನೆ ಕಾರ್ಯಪಡೆ ಮಾಡಿದ್ದೇವೆ. ಚಿರತೆ ಕಾರ್ಯಪಡೆ ರಚಿಸಿದ್ದೇವೆ. ಡ್ರೋನ್ ಕ್ಯಾಮರಾ ಬಳಸಿಕೊಂಡು ವನ್ಯಜೀವಿಗಳ ಸಂಚಾರದ ಬಗ್ಗೆ ನಿಗಾ ಇಡುತ್ತಿದ್ದೇವೆ. ಹೆಚ್ಚಿನ ರೈಲು ಹಳಿ ತಡೆಗೋಡೆಗೆ ಬೇಡಿಕೆ ಬಂದರೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಉಪ ವಲಯ ಅರಣ್ಯಾಧಿಕಾರಿಗಳ ನೇಮಕಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಳವಳ್ಳಿಗೆ ಚಿರತೆ ಕಾರ್ಯಪಡೆ ಮತ್ತು ವಾಹನದ ಅವಶ್ಯಕತೆಯನ್ನು ಪೂರೈಸಲು ಸರ್ಕಾರ ಬದ್ಧವಾಗಿದ್ದು, ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಸರ್ಕಾರ ಪ್ರಥಮ ಆದ್ಯತೆ ನೀಡಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
