ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ 388 ಹಳೆಯ ಶೌಚಾಲಯಗಳ ಜತೆಗೆ ಹೊಸದಾಗಿ 441 ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯೆ ಆರತಿ ಕೃಷ್ಣ ಅವರು ಜಿಬಿಎ ವ್ಯಾಪ್ತಿಯ ಸಾರ್ವಜನಿಕ ಶೌಚಾಲಯಗಳು ಬಳಕೆಗೆ ಯೋಗ್ಯವಿಲ್ಲ, ಜನಸ್ನೇಹಿಯಾಗಿಲ್ಲ, ಎಐ ಬಳಸಿ ಸ್ವಚ್ಛತೆ ಪರಿಶೀಲನೆ ಮಾಡಬೇಕು ಎಂದು ಕೇಳಿದಾಗ ಶಿವಕುಮಾರ್ ಅವರು ಗುರುವಾರ ಉತ್ತರಿಸಿದರು.
ನಗರದಾದ್ಯಂತ 380 ಸಾರ್ವಜನಿಕ ಶೌಚಾಲಯಗಳಿವೆ. 65 ಶೌಚಾಲಯಗಳನ್ನು ನಿವೃತ್ತ ಪೌರಕಾರ್ಮಿಕರಿಗೆ ನಡೆಸಲು ನೀಡಿದ್ದೇವೆ. 20 ಶೌಚಾಲಯಗಳನ್ನು ವಿಶೇಷ ಚೇತನರು ನಡೆಸುತ್ತಿದ್ದಾರೆ. ಶುಭ್ರ ಬೆಂಗಳೂರು ಯೋಜನೆ ಅಡಿ 60 ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುವುದು. 191 ಶೌಚಾಲಯಗಳು ಹೊಸದಾಗಿ ನಿರ್ಮಾಣವಾಗುತ್ತಿವೆ.
ಸ್ವಚ್ಚ ಭಾರತ ಮಿಷನ್ ಅಡಿ ಕೇಂದ್ರ ಸರ್ಕಾರ 13.5 ಕೋಟಿ ಹಣ ನೀಡಿದ್ದಾರೆ. ಅದರಲ್ಲಿ 90 ಶೌಚಾಲಯ ನಿರ್ಮಿಸುತ್ತಿದ್ದು, ಬ್ರಾಂಡ್ ಬೆಂಗಳೂರು ಯೋಜನೆಯಡಿ 100 ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ. ಇದು ಮಹಿಳೆಯರಿಗಾಗಿ ನಿರ್ಮಾಣ ಮಾಡಲಾಗುತ್ತಿದೆ. 441 ಹೊಸ ಶೌಚಾಲಯಗಳು ಹಾಗೂ 388 ಹಳೆಯ ಶೌಚಾಲಯಗಳಿವೆ. ಇವುಗಳ ಜತೆಗೆ ಯಾವುದಾದರೂ ನಿರ್ದಿಷ್ಟ ಸ್ಥಳಗಳಲ್ಲಿ ಶೌಚಾಲಯಗಳ ಅಗತ್ಯತೆ ಬಗ್ಗೆ ನಮ್ಮ ಗಮನಕ್ಕೆ ತಂದರೆ ಅಲ್ಲೂ ಜಾಗ ಲಭ್ಯತೆ ನೋಡಿಕೊಂಡು, ಶೌಚಾಲಯ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಮಾದರಿ ಬಳಸಿ ಅಸ್ಸಾಂ ಚುನಾವಣೆ ಗೆಲ್ಲಬಹುದು ಎಂದು ಎಐ ಹೇಳುತ್ತದೆ
ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಅವರು ರಾಜ್ಯದಲ್ಲಿ ಆಡಳಿತ ಸುಧಾರಣೆ ಕುರಿತು ಕೃತಕ ಬುದ್ಧಿಮತ್ತೆ ಬಳಕೆ ಬಗ್ಗೆ ಕೇಳಿದ ಪ್ರಶ್ನೆಗೆ, ಈಗ ನಾವೆಲ್ಲರೂ ಕೃತಕ ಬುದ್ಧಿಮತ್ತೆಯ ಹೊಸಯುಗಕ್ಕೆ ಕಾಲಿಡುತ್ತಿದ್ದೇವೆ. ಈ ಬಗ್ಗೆ ಪ್ರಪಂಚದೆಲ್ಲೆಡೆ ಚರ್ಚೆಯಾಗುತ್ತಿದ್ದು, ಪ್ರಧಾನಮಂತ್ರಿಗಳು ಈ ವಿಚಾರವಾಗಿ ದೊಡ್ಡ ಸಮ್ಮೇಳನ ನಡೆಸಿದರು. ಕೋರ್ಟ್ ಗಳಲ್ಲಿ ಇದರ ಬಳಕೆ ಬಗ್ಗೆ ಚರ್ಚೆ ಮಾಡಲಾಗಿದೆ. ಸಿಬಿಎಸ್ಸಿಯಲ್ಲಿ 3ರಿಂದ 8ನೇ ತರಗತಿವರೆಗೆ ಈ ವಿಚಾರವನ್ನು ಪಠ್ಯದಲ್ಲಿ ಸೇರಿಸಲು ತಿಳಿಸಲಾಗಿದೆ. ಆಡಳಿತದಲ್ಲಿ ಈ ಕೃತಕಬುದ್ಧಿಮತ್ತೆ ಬಳಕೆ ಬಗ್ಗೆ ತೀರ್ಮಾನ ಮಾಡುವ ಮುನ್ನ ದೊಡ್ಡ ಸಂಶೋಧನೆ ಆಗಬೇಕು. ಸಂಶೋಧನೆಯಾಗದೇ ಈ ಬಗ್ಗೆ ತೀರ್ಮಾನ ಮಾಡುವುದು ಕಷ್ಟ ಎಂದರು.
ಪರಿಷತ್ ಸಭಾಪತಿಗಳು ಸದನದ ಕಡತಗಳನ್ನು ಸ್ಕ್ಯಾನ್ ಮಾಡಿ ಕಂಪ್ಯೂಟರ್ ಗೆ ಹಾಕಿದರೆ ಅಲ್ಲವೇ ಡಿಜಿಟಲ್ ಆಗಿ ರೂಪುಗೊಳ್ಳುವು. ಅದೇ ರೀತಿ ಕೃತಕಬುದ್ಧಿಮತ್ತೆಯಲ್ಲಿ ಹೊಸದಾಗಿ ಏನನ್ನೂ ಸೃಷ್ಟಿ ಮಾಡಲು ಆಗುವುದಿಲ್ಲ. ನೀವು ಅದರಲ್ಲಿ ಏನು ಹಾಕುತ್ತೀರೋ ಅದೇ ಹೊರಗೆ ಬರುತ್ತದೆ. ಈ ವಿಚಾರವಾಗಿ ತೀರ್ಮಾನ ಮಾಡುವುದು ಕಷ್ಟ ಎಂದು ತಿಳಿಸಿದ್ದಾರೆ.
ನಾನು ಭಾಷಣ ವಿಚಾರವಾಗಿ ನನ್ನ ಪಿಎಗೆ ಕರೆ ಮಾಡಿ ಕೇಳುವಾಗ, ನೀವು ಅದನ್ನು ಯಾಕೆ ಕೇಳುತ್ತೀರಿ, ಚಾಟ್ ಜಿಪಿಟಿಯಲ್ಲಿ ಹಾಕಿ ಎಂದು ನನ್ನ ಮಗಳು ಹೇಳಿದಳು. ಆಗ ನನಗೆ ಸಾಕಷ್ಟು ಮಾಹಿತಿಗಳು ಸಿಕ್ಕವು. ನಾನು ಈ ರೀತಿ ಕೃತಕಬುದ್ಧಿಮತ್ತೆ ಬಳಕೆ ವಿಚಾರದಲ್ಲಿ ಸಾಕಷ್ಟು ಪ್ರಯೋಗ ಮಾಡಿದ್ದೇನೆ. ಆದರೆ ನಿಖರತೆ ಇನ್ನಷ್ಟು ಸುಧಾರಿಸಬೇಕಾಗಿದೆ. ಈ ವಿಚಾರದ ಬಗ್ಗೆ ಸಭಾಪತಿಗಳೇ ಸಂಶೋಧನೆ ಮಾಡಲಿ. ಸದನದಲ್ಲಿರುವ ದಾಖಲೆಗಳನ್ನು ಕಂಪ್ಯೂಟರ್ ಗೆ ಅಪ್ ಲೋಡ್ ಮಾಡದೇ ನಿಮಗೆ ಮಾಹಿತಿ ಸಿಗಲು ಹೇಗೆ ಸಾಧ್ಯ? ಕೋರ್ಟ್ ನಲ್ಲಿ ಈ ಹಿಂದೆ ಬಂದಿರುವ ತೀರ್ಪುಗಳನ್ನು ಅಪ್ ಲೋಡ್ ಮಾಡಿದಾಗ ಮಾತ್ರ ಅದರಲ್ಲಿ ಮಾಹಿತಿ ಸಿಗುತ್ತದೆ. ಹಾಗೆಂದು ಅವುಗಳನ್ನೇ ಆಧರಿಸಿ ತೀರ್ಪು ಬರೆಯಲು ಆಗುವುದಿಲ್ಲ ಎಂದು ವಿವರಿಸಿದರು.
ನಾನು ಚುನಾವಣೆ ಹಿನ್ನೆಲೆಯಲ್ಲಿ ಅಸ್ಸಾಂಗೆ ಹೋದಾಗ, ಅಲ್ಲಿನ ಚುನಾವಣೆ ಗೆಲ್ಲುವುದು ಹೇಗೆ ಎಂದು ಎಐ ಮೂಲಕ ಪ್ರಶ್ನೆ ಕೇಳಿದೆ, ಅದಕ್ಕೆ ಅದು ನೀವು ಕರ್ನಾಟಕ ಮಾದರಿ ಅನುಸರಿಸಿ ಅಸ್ಸಾಂ ಚುನಾವಣೆ ಗೆಲ್ಲುತ್ತೀರಿ ಎಂದು ಹೇಳುತ್ತದೆ ಎಂದು ತಿಳಿಸಿದರು.
