ವಿಧಾನಸಭೆ: ಸದ್ಯದಲ್ಲೇ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಏಕೀಕೃತ ಭೂ ನಿರ್ವಹಣಾ ವ್ಯವಸ್ಥೆ(ಯೂನಿಫೈಡ್ ಲ್ಯಾಂಡ್ ಮ್ಯಾನೇಜ್ ಮೆಂಟ್ ಸಿಸ್ಟಂ-ULMS) ಜಾರಿಗೆ ಬರಲಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಶುಕ್ರವಾರ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಜ್ಯೋತಿ ಗಣೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಭೂದಾಖಲೆಗಳು, ಸಮೀಕ್ಷೆ, ಭೂಪರಿವರ್ತನೆ, ಆಸ್ತಿ ತೆರಿಗೆ ಮತ್ತು ಇ-ಖಾತಾ ಸೇವೆಗಳನ್ನು ಒಂದೇ ಕಡೆ ಲಭ್ಯವಾಗುವಂತೆ ಮಾಡುವ ಪ್ಲಾಟ್ ಫಾರ್ಮ್ ಇದಾಗಿದೆ. ಪೈಲಟ್ ಯೋಜನೆಯಡಿ ಸದ್ಯದಲ್ಲಿಯೇ ಎಲ್ಲಾ ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು.
ಅನಧಿಕೃತ ಕಟ್ಟಡಗಳಿಗೆ, ಆಸ್ತಿಗಳಿಗೆ ಇ-ಖಾತಾ ಮಾಡಿಕೊಡಲೆಂದು ಇ-ಆಸ್ತಿ ತಂತ್ರಾಂಶವನ್ನು ಪರಿಚಯಿಸಲಾಗಿದೆ. ಕಟ್ಟಡ ಮತ್ತು ನಿವೇಶನಗಳು ಎಷ್ಟೇ ವಿಸ್ತೀರ್ಣದ್ದಾಗಿದ್ದರೂ ಇ-ಖಾತಾ ಮಾಡಿಕೊಡಲಾಗುತ್ತದೆ. ಅಲ್ಲದೇ, ನಾಗರಿಕರು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಇ-ಖಾತೆಯನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಇ-ತಂತ್ರಾಂಶದಲ್ಲಿ ಯಾವುದೇ ದೋಷಗಳು ಕಂಡು ಬಂದಿಲ್ಲ. ಹಾಗೊಂದು ವೇಳೆ ಸಮಸ್ಯೆ ಎದುರಾದರೆ ಕೂಡಲೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಇ-ತಂತ್ರಾಂಶದಲ್ಲಿ ನಾಗರಿಕರು ತಮ್ಮ ಆಸ್ತಿಯ ಸಂಪೂರ್ಣ ಮಾಹಿತಿಯನ್ನು ನಮೂದು ಮಾಡಲು ಅವಕಾಶವಿದೆ ಎಂದು ಅವರು ಸ್ಪಷ್ಟಪಡಿಸಿದರು.
