ಬೆಳಗಾವಿ : ಡಿಸೆಂಬರ್ 8ರಿಂದ 20ರವರೆಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಜರುಗಲಿರುವ ವಿಧಾನ ಮಂಡಲ ಚಳಿಗಾಲ ಅಧಿವೇಶದ ಬಂದೋಬಸ್ತಿಗಾಗಿ ಪೊಲೀಸ್ ಪೇದೆಯಿಂದ ಹಿರಿಯ ಅಧಿಕಾರಿಗಳವರೆಗೆ ಸುಮಾರು 6 ಸಾವಿರ ಸಿಬ್ಬಂದಿಯನ್ನು ನೇಮಕ ಮಾಡಲಾಗುತ್ತಿದ್ದು, ಇದರ ರೂಪರೇಷಗಳ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.
ಅಧಿವೇಶನದ ಪೂರ್ವ ಸಿದ್ಧತೆ ಹಿನ್ನಲೆಯಲ್ಲಿ ಬೆಳಗಾವಿ, ವಿಜಯಪುರ, ಬಾಗಲಕೋಟ, ಧಾರವಾಡ, ಗದಗ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಆಯುಕ್ತರ ಸಭೆಯ ನಂತರ ಮಾಹಿತಿ ನೀಡಿದ ಅವರು, ಕಳೆದ ವರ್ಷಗಿಂತ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲು ಉದ್ಧೇಶಿಸಲಾಗಿದೆ. ಸಿಬ್ಬಂದಿಗೆ ಅಗತ್ಯವಿರುವ ಊಟ, ವಸತಿ ಸೇರಿ ಮೂಲಭೂತ ಅಗತ್ಯತೆಗಳ ಬಗ್ಗೆ ಚರ್ಚಿಸಲಾಗಿದೆ. ಅನೇಕ ಪ್ರತಿಭಟನೆಗಳು ನಡೆಯುವ ಸಾಧ್ಯತೆಗಳಿವೆ. ಕೆಲ ಸಮಸ್ಯೆಗಳಿಗೆ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಬಗೆ ಹರಿಸಲಾಗುವುದು ಎಂದು ತಿಳಿಸಿದರು.
ವಿವಿಧ ಇಲಾಖೆಗಳಲ್ಲಿ ಸಾವಿರಾರು ನೂತನ ಸಿಬ್ಬಂದಿ ನೇಮಕಕ್ಕೆ ಸರ್ಕಾರ ಅನುಮತಿ ನೀಡಿದೆ. ಒಳ ಮೀಸಲಾತಿ ಅಂತಿಮಗೊಳಿಸುವ ಹಿನ್ನಲೆಯಲ್ಲಿ ಸ್ವಲ್ಪ ತಡವಾಗಿದೆ. ಪೊಲೀಸ್ ಇಲಾಖೆಯಲ್ಲಿ ಎರಡು ಹಂತದಲ್ಲಿ ಒಟ್ಟು 947 ಸಬ್ ಇನ್ಸ್ ಪೆಕ್ಟರ್ ಹುದ್ದೆಗಳನ್ನು ಈಗಾಗಲೇ ನೇಮಕ ಮಾಡಿ ತರಬೇತಿ ನೀಡಲಾಗುತ್ತಿದೆ.
ಖಾಲಿರುವ ಇನ್ನೂ 600 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹಾಗೂ ಮೊದಲ ಹಂತದಲ್ಲಿ 3600 ಪೇದೆ ಹುದ್ದೆಗಳ ನೇಮಕಾತಿಗೆ ಹಣಕಾಸು ಇಲಾಖೆಯ ಅನುಮತಿ ದೊರೆತಿದ್ದು, ಶೀಘ್ರದಲ್ಲಿ ಅಧಿಸೂಚನೆ ಹೊರಡಿಸಲಾಗುವುದು. ಎರಡು ವರ್ಷ ವಯೋಮತಿ ಸಡಲಿಕೆ ನೀಡಲಾಗಿದೆ. ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಇಲಾಖೆಯಲ್ಲಿ ಖಾಲಿರುವ 2 ಲಕ್ಷ 50 ಸಾವಿರ ಹುದ್ದೆಗಳನ್ನು 5 ವರ್ಷಗಳ ಕಾಲಾವಧಿಯಲ್ಲಿ ಭರ್ತಿ ಮಾಡುವ ಭರವಸೆ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಸುಮಾರು 70 ಸಾವಿರ ಹುದ್ದೆಗಳನ್ನು ನೇಮಕಾತಿ ಮಾಡಲಾಗಿದೆ. ನೇಮಕಾತಿ ಪ್ರಕ್ರಿಯೆ ಮುಂದುವರೆಯುತ್ತದೆ ಎಂದು ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ.
