ಸಮಗ್ರ ಸುದ್ದಿ

ಜಾತಿ-ಆದಾಯ ಪ್ರಮಾಣ ಪತ್ರ, ಶೇ. 99.35 ರಷ್ಟು ಅರ್ಜಿಗಳಿಗೆ ಸಕಾಲ ಮಿತಿಯಲ್ಲಿ ಸೇವೆ: ಕೃಷ್ಣ ಬೈರೇಗೌಡ |1.6 ಕೋಟಿ ಅರ್ಜಿಗಳ ಪೈಕಿ 98 ಲಕ್ಷ ಅರ್ಜಿಗಳಿಗೆ ಸಕಾಲದಲ್ಲಿ ಸೇವೆ

Share


ಬೆಂಗಳೂರು: ಸಕಾಲ ಯೋಜನೆ ಅಡಿಯಲ್ಲಿ ಪ್ರಸ್ತುತ ವರ್ಷ ಶೇ.99.35 ರಷ್ಟು ಅರ್ಜಿಗಳಿಗೆ ನಿಗದಿತ ಕಾಲ ಮಿತಿಯೊಳಗೆ ಸೇವೆ ಒದಗಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಬುಧವಾರ ವಿಧಾನ ಪರಿಷತ್ ನಲ್ಲಿ ಕೆ.ಅಬ್ದುಲ್ ಜಬ್ಬರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿದ ಅವರು, ನಾಡ ಕಚೇರಿ ಹಾಗೂ ತಹಶೀಲ್ದಾರ್ ಕಚೇರಿಗಳಲ್ಲಿ ಜನರಿಗೆ ಎಲ್ಲಾ ಸೇವೆಗಳೂ ತ್ವರಿತವಾಗಿ ಲಭ್ಯವಾಗಬೇಕು ಎಂಬ ನಿಟ್ಟಿನಲ್ಲಿ ಕಳೆದ ಎರಡೂವರೆ ವರ್ಷದಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಲಾಗಿದೆ. ಪರಿಣಾಮ ಜಾತಿ-ಆದಾಯ ಪ್ರಮಾಣ ಪತ್ರ ಸೇರಿದಂತೆ ಸಕಾಲ ಯೋಜನೆಯ ಅಡಿಯಲ್ಲಿ ಲಭ್ಯವಾಗುವ ಎಲ್ಲಾ ಸೇವೆಗಳನ್ನೂ ನಿಗದಿತ ಅವಧಿಯಲ್ಲಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕಳೆದ ವರ್ಷ ವಿವಿಧ ಸೇವೆಗಳಿಗಾಗಿ ನಾಡ ಕಚೇರಿಗೆ ಸುಮಾರು 1.6 ಕೋಟಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 98 ಲಕ್ಷ ಅರ್ಜಿಗಳಿಗೆ ಸಕಾಲದಲ್ಲಿ ಸೇವೆ ನೀಡಲಾಗಿದೆ. ಅಂದರೆ ಶೇ.98.92 ರಷ್ಟು ಅರ್ಜಿಗಳಿಗೆ ಸಕಾಲದಲ್ಲಿ ಸೇವೆ ನೀಡಲಾಗಿದ್ದು, ಶೇ.1.1 ರಷ್ಟು ಅರ್ಜಿಗಳಿಗೆ ಮಾತ್ರ ಸಕಾಲ ಮಿತಿಗಿಂತ ವಿಳಂಬವಾಗಿದೆ. ಇನ್ನೂ ಪ್ರಸ್ತುತ ವರ್ಷ 99.35 ರಷ್ಟು ಅರ್ಜಿಗಳಿಗೆ ಸಕಾಲ ಮಿತಿಯಲ್ಲಿ ದಾಖಲೆ ನೀಡಿದ್ದೇವೆ ಎಂದು ವಿವರಿಸಿದರು.

ಜನ ಸಮಾನ್ಯರು ನಮ್ಮ ಕಚೇರಿಗೆ ಆಗಮಿಸಿದರೆ ಮಾತ್ರ ಈ ಎಲ್ಲಾ ಸಮಸ್ಯೆಗಳು ಉಂಟಾಗುತ್ತವೆ ಎಂಬ ಕಾರಣಕ್ಕಾಗಿ ಅವರು ಮನೆಯಿಂದಲೇ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಜಾತಿ-ಆದಾಯ, ನಿವಾಸಿ ದೃಢೀಕರಣ ಪ್ರಮಾಣ ಪತ್ರಗಳಿಗಾಗಿ ಅವರು ಮನೆಯಿಂದಲೇ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅಲ್ಲದೆ, ಅವರ ಅರ್ಜಿ ಪ್ರತಿಯೊಂದು ಹಂತ ದಾಟುವಾಗಲೂ ಅದರ ಮಾಹಿತಿಯನ್ನು ಮೆಸೇಜ್ ಮೂಲಕ ಅವರ ಮೊಬೈಲ್ ಗೆ ತಲುಪಿಸುವ ವ್ಯವಸ್ಥೆ ಇದೆ. ಕೊನೆಗೆ ಜನ ಮನೆಯಲ್ಲೇ ಕುಳಿತು ಅವರ ಕೋರಿಕೆಯ ಪ್ರಮಾಣ ಪತ್ರಗಳನ್ನು ಪ್ರಿಂಟ್ಔಟ್ ತೆಗೆದುಕೊಳ್ಳಬಹುದು ಎಂದು ತಿಳಿಸಿದರು.

ಈ ವಿಧಾನವನ್ನು ಮತ್ತಷ್ಟು ಸರಳೀಕರಿಸುವ ಸಲುವಾಗಿ, ಜನ ಸಾಮಾನ್ಯರಿಗೆ ಜಾತಿ-ಆದಾಯ ಪ್ರಮಾಣ ಪತ್ರಗಳನ್ನು ಸ್ವಯಂ ಚಾಲಿತವಾಗಿ ನೀಡುವ ಸಲುವಾಗಿ ಕಳೆದ ಒಂದು ವರ್ಷದಿಂದ ತಂತ್ರಾಂಶವೊಂದನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಕುಟುಂಬ ಡೇಟಾಬೇಸ್ನಲ್ಲಿ ಮನೆ ವಿಳಾಸ ಜಾತಿ ಆದಾಯ ಮಾಹಿತಿ ಇರುತ್ತೆ. ಅಲ್ಲಿಂದ ಡೇಟಾಗಳನ್ನು ಸ್ವೀಕರಿಸಿ ಸ್ವಯಂ ಚಾಲಿತವಾಗಿ ಪ್ರಮಾಣ ಪತ್ರ ನೀಡುವ ಸಂಬಂಧ ಪ್ರಯತ್ನ ನಡೆಯುತ್ತಿದೆ. ಒಂದು ವರ್ಷದಿಂದ ಈ ತಂತ್ರಾಂಶದ ವಿನ್ಯಾಸ ನಡೆಯುತ್ತಿದ್ದು, ಇನ್ನಷ್ಟಯ ಸರಳೀಕರಣ ಆಗುತ್ತದೆ ಎಂದು ಭರವಸೆ ನೀಡಿದರು.

ಭೂ ಸುರಕ್ಷಾ ಯೋಜನೆಯ ಬಗ್ಗೆ ಸದನಕ್ಕೆ ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ ಎಲ್ಲಾ ಮೂಲ ಭೂ ದಾಖಲೆಗಳೂ ಗಣಕೀಕರಣ ಆಗುತ್ತಿದೆ. ಈಗಾಗಲೇ 74 ಕೋಟಿ ಪುಟಗಳು ಸ್ಕ್ಯಾನ್ ಆಗಿದೆ. ಈ ಎಲ್ಲಾ ದಾಖಲೆಗಳನ್ನೂ ಮನೆಯಲ್ಲೇ ಕುಳಿತು ಜನ ಸಾಮಾನ್ಯರು ಸರ್ಟಿಫೈಡ್ ಕಾಪಿ ಪಡೆಯಬಹುದು. ಇನ್ಮುಂದೆ ತಮ್ಮ ಭೂ ದಾಖಲೆಗಳಿಗಾಗಿ ಅನಗತ್ಯವಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವ ಅಗತ್ಯ ಇರುವುದಿಲ್ಲ. ಹೀಗಾಗಿ ಕಂದಾಯ ಇಲಾಖೆಯನ್ನು ಜನಸ್ನೇಹಿಗೊಳಿಸುವ ನಿಟ್ಟಿನಲ್ಲಿ ನಿರಂತರ ಸುದಾರಣೆ ಮಾಡಲಾಗುತ್ತಿದ್ದು, ಮತ್ತಷ್ಟು ಸುಧಾರಣೆ ಮಾಡಬೇಕಿದೆ. ಆ ನಿಟ್ಟಿನಲಿ ಪ್ರಯತ್ನ ಮಾಡುತ್ತೇವೆ ಎಂದರು.


Share

You cannot copy content of this page