ಸಮಗ್ರ ಸುದ್ದಿ

ಔಷಧ ಸಸ್ಯ ಬೆಳೆವ ರೈತರಿಗೆ ಇ-ಮಾರುಕಟ್ಟೆ ಕಲ್ಪಿಸಿ: ಈಶ್ವರ ಖಂಡ್ರೆ

Share


ಬೆಂಗಳೂರು, ನ.27: ಔಷಧೀಯ ಸಸ್ಯ ಮತ್ತು ಗಿಡಮೂಲಿಕೆ ಬೆಳೆಯುವ ರೈತರಿಗೆ ಇ-ಮಾರುಕಟ್ಟೆ ರೀತಿಯಲ್ಲಿ ವೇದಿಕೆ ಕಲ್ಪಿಸಲು ಸಹಯೋಗ ಮತ್ತು ಸಹಕಾರ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ.

ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿಂದು ಚಿತ್ರಕಲಾ ಪರಿಷತ್ತಿನಲ್ಲಿ ನಡೆದ ಚಿಂತನ ಮಂಥನದಲ್ಲಿ ಮಾತನಾಡಿದ ಅವರು, ಹಲವರು ಮಾಹಿತಿ ಕೊರತೆಯಿಂದ ಔಷಧೀಯ ಸಸ್ಯಗಳನ್ನು ಕಳೆ ಎಂದು ನಾಶ ಮಾಡುತ್ತಿದ್ದಾರೆ. ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿ, ಗಿಡಮೂಲಿಕೆ ಸಂರಕ್ಷಿಸಲು ಅರಿವು ಮೂಡಿಸಬೇಕಿದೆ ಎಂದರು.

ಹಿಂದೆ ನಮ್ಮ ಪೂರ್ವಿಕರು ಮನೆಯ ಹಿತ್ತಲ್ಲಿ ಬೆಳೆದ ಗಿಡಮೂಲಿಕೆಗಳಿಂದ ಮನೆ ಮದ್ದು ಮಾಡುತ್ತಿದ್ದರು. ಭಾರತದ ಸನಾತನ ವೈದ್ಯಪದ್ಧತಿ ಆಯುರ್ವೇದದಲ್ಲಿ ನೂರಾರು ಬಗೆಯ ಔಷಧೀಯ ಸಸ್ಯ ಬಳಕೆ ಆಗುತ್ತದೆ. ಹೀಗಾಗಿ ಇಂತಹ ಸಸ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಔಷಧೀಯ ಸಸ್ಯಗಳಿಗೆ ಮಾರುಕಟ್ಟೆ ದೊರೆತರೆ ಅವುಗಳ ಸಂರಕ್ಷಣೆ ಆಗುತ್ತದೆ. ಗಿಡಮೂಲಿಕೆ, ಔಷಧೀಯ ಸಸ್ಯ ಮಾರಾಟ ಮಳಿಗೆ ತೆರೆಯಲು ಸಹಾಯಧನ ನೀಡಿಕೆ ಅಗತ್ಯವಿದ್ದಲ್ಲಿ, ಈ ಬಗ್ಗೆಯೂ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸುವ ಭರವಸೆಯನ್ನು ಈಶ್ವರ ಖಂಡ್ರೆ ತಿಳಿಸಿದರು.

ಪಶ್ಚಿಮ ಘಟ್ಟ ಅಪರೂಪದ ಸಸ್ಯಸಂಕುಲ, ಕೀಟ ಸಂಕುಲ ಹಾಗೂ ಪ್ರಾಣಿ ಸಂಕುಲತ ತಾಣವಾಗಿರುವುದರ ಜೊತೆಗೆ ಜಾಗತಿಕ ಜೀವವೈವಿಧ್ಯತೆಯ ತಾಣವಾಗಿದೆ. ಇಲ್ಲಿರುವ ಅಮೂಲ್ಯ ಹಸಿರು ಸಂಪತ್ತನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಇಂದು ಕುಡಿಯುವ ನೀರು, ತಿನ್ನುವ ಆಹಾರ ಅಷ್ಟೇಕೆ ಪ್ರಾಣವಾಯುವೂ ಕಲುಷಿತವಾಗುತ್ತಿದೆ. ಇತ್ತೀಚಿನ ಅಧ್ಯಯನ ತಾಯಿಯ ಎದೆಹಾಲಲ್ಲೂ ವಿಷವಿದೆ ಎಂಬ ಅಂಶವನ್ನು ಬಹಿರಂಗಪಡಿಸಿದೆ. ಇಂತಹ ಕಾಲಘಟ್ಟದಲ್ಲಿ ನಾವು ಆರೋಗ್ಯಪೂರ್ಣವಾಗಿರಲು ಇಂತಹ ಅಮೂಲ್ಯ ಸಸ್ಯ ಸಂಪತ್ತನ್ನು ಉಳಿಸುವ ಅಗತ್ಯವಿದೆ ಎಂದರು.

ಇದಕ್ಕೂ ಮುನ್ನ ವಿವಿಧ ಗಿಡಮೂಲಿಕೆ ಮತ್ತು ವನ ಉತ್ಪನ್ನ ಮಳಿಗೆಗಳಿಗೆ ಭೇಟಿ ನೀಡಿ ಪರಿವೀಕ್ಷಿಸಿದ ಸಚಿವರು, ಔಷಧೀಯ ಸಸ್ಯಗಳ ಉಪಯೋಗದ ಬಗ್ಗೆ ಮಾಹಿತಿ ಪಡೆದರು.

ಕಾರ್ಯಕ್ರಮದಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ ಮತ್ತಿತರರು ಪಾಲ್ಗೊಂಡಿದ್ದರು.


Share

You cannot copy content of this page