ಸಮಗ್ರ ಸುದ್ದಿ

ಕೆ.ಆರ್. ಮಾರುಕಟ್ಟೆಯ ಸಮಗ್ರ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಿ: ಮಹೇಶ್ವರ್ ರಾವ್

Share

ಬೆಂಗಳೂರು:ಕೆ.ಆರ್ ಮಾರುಕಟ್ಟೆಯ ಸಮಗ್ರ ಅಭಿವೃದ್ಧಿಗಾಗಿ ಕ್ರಿಯಾ ಯೋಜನೆ ರೂಪಿಸುವುದರ ಜೊತೆಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ವೇಳಾಪಟ್ಟಿಯನ್ನು ಸಿದ್ಧಪಡಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಕೆ.ಆರ್. ಮಾರುಕಟ್ಟೆಗೆ ಇಂದು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿ, ಸಿ.ಸಿ ಕ್ಯಾಮೆರಾಗಳ ಅಳವಡಿಕೆ, ಒಳಭಾಗದ ರಸ್ತೆಗೆ ಕಾಂಕ್ರೀಟ್ ಹಾಕುವುದು, ಹೂವಿನ ಮಾರುಕಟ್ಟೆಗೆ ಸಮರ್ಪಕ ಸಂಪರ್ಕ ಕಲ್ಪಿಸುವುದು ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳ ಕುರಿತು ಸಮಗ್ರ ಕ್ರಿಯಾ ಯೋಜನೆ ರೂಪಿಸಿ, ಕಾಮಗಾರಿಗಳ ಪೂರ್ಣಗೊಳಿಸುವ ವೇಳಾಪಟ್ಟಿಯೊಂದಿಗೆ ಒಂದು ವಾರದೊಳಗೆ ವರದಿ ಸಲ್ಲಿಸಲು ಸೂಚಿಸಿದರು.

ಕೆ.ಆರ್. ಮಾರುಕಟ್ಟೆಯಲ್ಲಿ ಸುರಕ್ಷತಾ ದೃಷ್ಟಿಯಿಂದ ಅಗತ್ಯವಿರುವ ಎಲ್ಲಾ ಸ್ಥಳಗಳಲ್ಲಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸುವ ಕುರಿತು ಪರಿಶೀಲನೆ ನಡೆಸಿ ತಕ್ಷಣ ವರದಿ ಸಲ್ಲಿಸಬೇಕು. ನಂತರ ತ್ವರಿತಗತಿಯಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಮಾರುಕಟ್ಟೆಯ ಒಳಭಾಗದಲ್ಲಿರುವ ರಸ್ತೆಯ ಮೇಲ್ಮೈ ಹದಗೆಟ್ಟಿದ್ದು, ಅದನ್ನು ದುರಸ್ತಿ ಮಾಡಿ ಒಂದು ಪದರದ ಕಾಂಕ್ರೀಟ್ ಹಾಕಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಕೆ.ಆರ್ ಮಾರುಕಟ್ಟೆ ಜಂಕ್ಷನ್‌ನಲ್ಲಿ ಡಾಂಬರೀಕರಣ ಕಾರ್ಯ ಪೂರ್ಣಗೊಂಡಿದ್ದು, ಮಾರುಕಟ್ಟೆಯ ಸರ್ವಿಸ್ ರಸ್ತೆಯನ್ನು ಕಾಂಕ್ರೀಟ್‌ನಿಂದ ಅಭಿವೃದ್ಧಿಪಡಿಸಲಾಗಿದೆ. ಈ ಸಂಬಂಧ ಮೇಲ್ಸೇತುವೆಯ ಡೌನ್ ರ್ಯಾಂಪ್‌ ನಿಂದ ಶೀಘ್ರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಹೂವಿನ ಮಾರುಕಟ್ಟೆಗೆ ಸಮರ್ಪಕ ಸಂಪರ್ಕ:

ಹೂವಿನ ಮಾರುಕಟ್ಟೆಗೆ ಸಮರ್ಪಕ ಸಂಪರ್ಕ ಇಲ್ಲದಿರುವುದರಿಂದ ನಾಗರಿಕರಿಗೆ ಹೂವು ಖರೀದಿಸಲು ಸಮಸ್ಯೆಗಳು ಉಂಟಾಗುತ್ತಿವೆ ಎಂದು ಮಾರುಕಟ್ಟೆ ಸಂಘದ ಪದಾಧಿಕಾರಿಗಳು ಮನವಿ ಮಾಡಿದರು. ಅದರಂತೆ ಪ್ರತಿಕ್ರಿಯಿಸಿದ ಮುಖ್ಯ ಆಯುಕ್ತರು ಸ್ಥಳ ಪರಿಶೀಲನೆ ನಡೆಸಿ, ಸಮರ್ಪಕ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು. ಮೆಟ್ಟಿಲುಗಳ ಬಳಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ನಾಗರಿಕರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಕ್ರಮವಹಿಸಲು ನಿರ್ದೇಶನ ನೀಡಿದರು.

ಟ್ರಾಲಿ ಮತ್ತು ಕ್ರೇಟ್‌ ಗಳ ವ್ಯವಸ್ಥೆ:

ಮಾರುಕಟ್ಟೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಸಮಗ್ರ ಯೋಜನೆ ರೂಪಿಸಲಾಗಿದೆ. ತರಕಾರಿ, ಹಣ್ಣು ಮತ್ತು ಹೂವಿನ ಮಾರುಕಟ್ಟೆಗಳಲ್ಲಿ ತ್ಯಾಜ್ಯ ಸಂಗ್ರಹಿಸಲು ಟ್ರಾಲಿ ಹಾಗೂ ಕ್ರೇಟ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಜೊತೆಗೆ ತ್ಯಾಜ್ಯ ಸಂಗ್ರಹಣೆಗೆ ಶೆಡ್‌ಗಳನ್ನು ನಿರ್ಮಿಸಲಾಗುತ್ತಿದ್ದು, ಎಲ್ಲಿಯೂ ತ್ಯಾಜ್ಯ ಚದರದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಮಗ್ರ ಸ್ವಚ್ಛತೆಗೆ ಕ್ರಮ:

ಮಾರುಕಟ್ಟೆಯ ಫ್ಲೋರಿಂಗ್, ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಶುಚಿತ್ವ ಕಂಡುಬಂದಿದ್ದು, ಸಂಪೂರ್ಣ ಮಾರುಕಟ್ಟೆಯಲ್ಲಿ ಸಮಗ್ರ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಎಂದು ಸೂಚಿಸಿದರು. ಜೆಟ್ ಸ್ಪ್ರೇ ಮತ್ತು ಫ್ಲೋರ್ ಕ್ಲೀನಿಂಗ್ ಯಂತ್ರಗಳನ್ನು ಬಳಸಿಕೊಂಡು ಸ್ವಚ್ಛತಾ ಕಾರ್ಯವನ್ನು ಪರಿಣಾಮಕಾರಿಯಾಗಿ ನಡೆಸಲು ನಿರ್ದೇಶನ ನೀಡಿದರು.

ಅತ್ಯಾಧುನಿಕ ಪಾರ್ಕಿಂಗ್ ವ್ಯವಸ್ಥೆ:

ಕೆ.ಆರ್. ಮಾರುಕಟ್ಟೆಗೆ ಪ್ರತಿದಿನ ಸಹಸ್ರಾರು ಜನರು ಭೇಟಿ ನೀಡುತ್ತಿರುವ ಹಿನ್ನೆಲೆ, ಗ್ರಾಹಕರು ಮತ್ತು ವ್ಯಾಪಾರಸ್ಥರಿಗೆ ಸುವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ರೈಟ್ ಪಾರ್ಕಿಂಗ್ ಸಂಸ್ಥೆಯ ಮೂಲಕ ತಳಮಹಡಿಯಲ್ಲಿ 400 ದ್ವಿಚಕ್ರ ವಾಹನಗಳು ಹಾಗೂ 200 ಕಾರುಗಳ ನಿಲುಗಡೆ ವ್ಯವಸ್ಥೆ ಪೂರ್ಣಗೊಂಡಿದೆ. ಶೀಘ್ರದಲ್ಲೇ ಈ ಪಾರ್ಕಿಂಗ್ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ತೆರೆಯಲು ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಪಾರ್ಕಿಂಗ್ ಪ್ರದೇಶದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ 67 ಎ.ಐ ಆಧಾರಿತ ಕ್ಯಾಮೆರಾಗಳು, 12 ಅಲಾರಂ ವ್ಯವಸ್ಥೆಗಳು, ವಾಹನಗಳ ನಿಲುಗಡೆಗೆ ಮಾರ್ಕಿಂಗ್ ವ್ಯವಸ್ಥೆ ಹಾಗೂ ಎಂಟ್ರಿ-ಎಕ್ಸಿಟ್ ಪಾಯಿಂಟ್‌ಗಳ ಗೋಡೆಗಳಲ್ಲಿ ಚಿತ್ರಕಲೆಗಳನ್ನು ಅಳವಡಿಸಲಾಗಿದೆ.

ಕೆ.ಆರ್. ಮಾರುಕಟ್ಟೆ ಮುಂಭಾಗದ ಫೆನ್ಸಿಂಗ್ ಹದಗೆಟ್ಟಿರುವುದರಿಂದ ಅದನ್ನು ತೆರವುಗೊಳಿಸಬೇಕು.
ನಾಗರಿಕರ ಸಂಚಾರ ಪ್ರದೇಶಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ವಿನ್ಯಾಸ ರೂಪಿಸಲು ಸೂಚಿಸಿದರು.

ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯಲು ಚರಂಡಿ ವ್ಯವಸ್ಥೆ ಸುಧಾರಣೆ ಮಾಡಬೇಕು. ಪಾರ್ಕಿಂಗ್‌ಗೆ ಸಂಪರ್ಕ ಕಲ್ಪಿಸಲು ಮೀಡಿಯನ್ ಕಾಮಗಾರಿ ಒಂದು ವಾರದೊಳಗೆ ಪೂರ್ಣಗೊಳಿಸಲು ನಿರ್ದೇಶಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ನಗರ ಪಾಲಿಕೆಯ ಅಭಿವೃದ್ಧಿ ಅಪರ ಆಯುಕ್ತ ದಲ್ಜಿತ್ ಕುಮಾರ್, ಜಂಟಿ ಆಯುಕ್ತ ಹೇಮಂತ್ ಶರಣ್, ಮುಖ್ಯ ಅಭಿಯಂತರ ವಿಜಯ್ ಕುಮಾರ್ ಹರಿದಾಸ್, ಅಧೀಕ್ಷಕ ಅಭಿಯಂತರರು, ಡಿಜಿಎಂ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page