ಬೆಂಗಳೂರು:ಪರಿಶಿಷ್ಟ ಸಮುದಾಯಗಳು ಎಡ ಬಲ ಎನ್ನದೇ ಒಗ್ಗಟ್ಟಿನಿಂದ ಸಾಗಬೇಕು. ಇದು ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಂ ರವರ ಮೂಲ ಆಶಯವಾಗಿದೆ ಎಂದು ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್. ಸಿ. ಮಹದೇವಪ್ಪ ಅವರು ತಿಳಿಸಿದರು.
ಇಂದು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಾ.ಬಾಬು ಜಗಜೀವನ ರಾಂ ಅವರ 119 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ನಗಾರಿ ಬಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧಿಕಾರ ಇದ್ದ ಎಲ್ಲ ಸಂದರ್ಭದಲ್ಲಿಯೂ ಜನರಿಗಾಗಿ ದುಡಿದ ಅವರು ದೇಶದ ಆಹಾರ ವ್ಯವಸ್ಥೆ ಮತ್ತು ರಕ್ಷಣಾ ವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸಿದಂತವರು. ಇಂತಹ ವ್ಯಕ್ತಿಗಳನ್ನು ಈ ದಿನ ಜಾತೀಯ ಸಂಕೋಲೆಗಳಲ್ಲಿ ಬಂಧಿಸಿ, ಎಡ ಬಲ ಎಂಬ ವರ್ಗೀಕರಣದಲ್ಲಿ ಸಿಲುಕಿಸುವುದು ಕೇವಲ ಬಾಬೂಜಿ ಅವರಿಗೆ ಅವಮಾನ ಮಾಡಿದಂತೆ ಎಂದರು.
ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರು ಮಾತನಾಡಿ ಹಸಿರುಕ್ರಾಂತಿ ಹರಿಕಾರ, ರಾಷ್ಟ್ರ ನಾಯಕ, ಮಾಜಿ ಉಪ ಪ್ರಧಾನಿ ಸಮರ್ಥ ಸಂಸದೀಯ ಹೋರಾಟಗಾರ ಮತ್ತು ಹಿರಿಯ ದಲಿತ ಚೇತನ ಡಾ. ಬಾಬು ಜಗಜೀವನ ರಾಂ ರವರ 119ನೇ ಜನ್ಮ ದಿನೋತ್ಸವದ ಪ್ರಯುಕ್ತ ಶುಭಾಶಯ ಕೋರಿದರು.
ಮಹಾನ್ ನಾಯಕ ಬಾಬು ಜಗಜೀವನ ರಾಂ ರವರ ಜೀವನ ನಮಗೆ ಮಾರ್ಗದರ್ಶನ ಅವರ ರಾಜಕೀಯ ಜೀವನದುದ್ದಕ್ಕೂ ಕೇಂದ್ರದಲ್ಲಿ ಸಚಿವರಾಗಿಯೇ ಕಾರ್ಯ ನಿರ್ವಹಿಸಿ ಸುದೀರ್ಘ ಸಂಸದರಾಗಿ ಸೇವೆ ಸಲ್ಲಿಸಿರುವ ಮಹಾನ್ ಚೇತನ ಎಂದರು.
ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯನ್ನು ಭೋದಿಸಲಾಯಿತು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಬಾಬೂ ಜಗಜೀವನ ರಾಂ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸರ್ಕಾರದ ಕಾರ್ಯದರ್ಶಿ ರಣದೀಪ್, ಕೈಸ್ ನ ಇಡಿ ಕಾಂತರಾಜ್, ಅಂಬೇಡ್ಕರ್ ನಿಗಮದ ನಿರ್ದೇಶಕರಾದ ಸತ್ಯಬಾಮ, ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್. ನಟರಾಜ್, ಡಾ.ಬಾಬು ಜಗಜೀವನ ರಾಂ ಪ್ರಶಸ್ತಿ ಪುರಸ್ಕೃತರು, ಸಮುದಾಯದ ಮುಖಂಡರು ಅಧಿಕಾರಿಗಳು ಉಪಸ್ಥಿತರಿದ್ದರು.
