ಬೆಂಗಳೂರು: ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಉಪಚುನಾವಣೆ ನಡೆಯಲಿದೆ. ಬಾಗಲಕೋಟೆಯಲ್ಲಿ ಮಾಜಿ ಶಾಸಕ ಮೇಟಿ ಹುಲ್ಲಪ್ಪ ಯಮನಪ್ಪ ಅವರ ನಿಧನದಿಂದಾಗಿ ತೆರವಾದ ಸ್ಥಾನಕ್ಕೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮಾಜಿ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ನಾಳೆ ಉಪಚುನಾವಣೆ ನಡೆಯಲಿದೆ.
ಬಾಗಲಕೋಟೆಯಲ್ಲಿ 1 ಲಕ್ಷದ 26 ಸಾವಿರದ 761 ಪುರುಷರು, 1 ಲಕ್ಷದ 32 ಸಾವಿರದ 476 ಮಹಿಳೆಯರು ಹಾಗೂ 23 ತೃತೀಯ ಲಿಂಗಿ ಸೇರಿದಂತೆ ಒಟ್ಟು 2 ಲಕ್ಷದ 59 ಸಾವಿರದ 260 ಮತದಾರರಿದ್ದಾರೆ.
ಇನ್ನು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 1 ಲಕ್ಷದ 13 ಸಾವಿರದ 654 ಪುರುಷರು, 1 ಲಕ್ಷದ 17 ಸಾವಿರದ 986 ಮಹಿಳೆಯರು ಮತ್ತು 43 ತೃತೀಯ ಲಿಂಗಿ ಮತದಾರರು ಸೇರಿದಂತೆ ಒಟ್ಟು 2 ಲಕ್ಷದ 31 ಸಾವಿರದ 683 ಮತದಾರರಿದ್ದಾರೆ.
ಬಾಗಲಕೋಟೆ ಮತ್ತು ದಾವಣಗೆರೆ ಜಿಲ್ಲಾಡಳಿತಗಳು ನಾಳಿನ ಮತದಾನಕ್ಕಾಗಿ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿವೆ. ದಾವಣಗೆರೆಯಲ್ಲಿ ಮತದಾನಕ್ಕಾಗಿ 284 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ 234 ಮತ್ತು ಗ್ರಾಮೀಣ ವ್ಯಾಪ್ತಿಯಲ್ಲಿ 50 ಮತಗಟ್ಟೆಗಳು ಸೇರಿವೆ. 76 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ.
ಉಪಚುನಾವಣೆಗೆ ಒಟ್ಟು 322 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಪ್ರತಿಯೊಂದು ಮತಗಟ್ಟೆಗೆ ಪ್ರಿಸೈಡಿಂಗ್ ಅಧಿಕಾರಿ ಸೇರಿದಂತೆ ಸಿಬ್ಬಂದಿ ನೇಮಕ ಮಾಡಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ
ಪ್ರತಿ ಮತಗಟ್ಟೆಯಲ್ಲಿ ಕಾಯ್ದಿರಿಸಿದ ಕೊಠಡಿ, ಕುಡಿಯುವ ನೀರು, ರ್‍ಯಾಂಪ್ ವ್ಯವಸ್ಥೆ, ಶೌಚಾಲಯ, ನೆರಳು ಮತ್ತು ಕ್ಯೂ ಮ್ಯಾನೇಜ್‌ಮೆಂಟ್ ಫಿಡಿಂಗ್ ಕೊಠಡಿ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ.
