ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ರವರು ಇಂದು ಬೆಳಿಗ್ಗೆಯಿಂದ ಚಿಕ್ಕಪೇಟೆಯಲ್ಲಿ ನಡೆಯುತ್ತಿರುವ ಆಸ್ತಿ ತೆರಿಗೆ ಪಾವತಿ ಪರಿಶೀಲನೆ ಕಾರ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಂತ್ರಿ ಮಾಲ್ ಮ್ಯಾನೇಜ್ ಮೆಂಟ್ ನವರು ಆಗಮಿಸಿ, ಉಚ್ಚ ನ್ಯಾಯಾಲಯದ ಆದೇಶದಂತೆ ಮಂತ್ರಿ ಮಾಲ್ ನಿಂದ ಬೆಂಗಳೂರು ಕೇಂದ್ರ ನಗರಪಾಲಿಕೆಗೆ ಕಟ್ಟಬೇಕಾಗಿರುವ ಬಾಕಿ ರೂ.30.00 ಕೋಟಿ ಮೊತ್ತದಲ್ಲಿ ಇಂದು ಬೆಳಿಗ್ಗೆ ರೂ. 5.00 ಕೋಟಿಗಳ ಚೆಕ್ ನ್ನು ಹಾಗೂ ಸಂಜೆ ರೂ.1.50 ಕೋಟಿ ಮೊತ್ತದ ಚೆಕ್ ನ್ನು ಒಟ್ಟು ಇಂದು ರೂ.6.50 ಕೋಟಿ ಮೊತ್ತದ ಚೆಕ್ ನ್ನು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ರವರಿಗೆ ನೀಡಿದರು.
ಚಿಕ್ಕಪೇಟೆ ವಿಭಾಗದಿಂದ ನಡೆಯುತ್ತಿರುವ ಕಂದಾಯ ಪಾವತಿ ಪರಿಶೀಲನೆ ವೇಳೆ ಮಾತನಾಡಿದ ಆಯುಕ್ತರು ಕಂದಾಯ ಬಾಕಿ ಉಳಿಸಿಕೊಂಡಿರುವವರ ಪಟ್ಟಿ ಮಾಡಿ ಅವರಿಗೆ ನೋಟಿಸ್ ನೀಡಲು, ಹಾಗೂ ಪಾವತಿ ಮಾಡದಿದ್ದಲ್ಲಿ ಬಾಕಿ ಉಳಿಸಿಕೊಂಡ ಕಟ್ಟಡಗಳಿಗೆ ಬೀಗ ಹಾಕುವ ಪ್ರಕ್ರಿಯೆ ಹಮ್ಮಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್ ರವರ ನೇತೃತ್ವದಲ್ಲಿ ನಡೆಯುತ್ತಿರುವ ಕಂದಾಯ ಪಾವತಿ ಪರಿಶೀಲನಾ ಕಾರ್ಯದಲ್ಲಿ ಜಂಟಿ ಆಯುಕ್ತರುಗಳಾದ ರಂಗನಾಥ್, ಹೇಮಂತ್ ಶರಣ್, ಉಪ ಆಯುಕ್ತರಾದ ರಾಜು, ಕಂದಾಯ ಅಧಿಕಾರಿ ಶ್ರೀನಿವಾಸ್, ಶಿವಾಜಿನಗರ ಸಹ ಕಂದಾಯ ಅಧಿಕಾರಿಗಳು ಹಾಗೂ ಕಂದಾಯ ವಿಭಾಗದ 100 ಕ್ಕೂ ಅಧಿಕ ಸಿಬ್ಬಂದಿಗಳು ಪರಿಶೀಲನೆ ಕಾರ್ಯದಲ್ಲಿ ಹಾಜರಿದ್ದರು.
