ಸಮಗ್ರ ಸುದ್ದಿ

ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಶ್ರೀ ಗುರು ಬೈರವೈಕ್ಯ ಮಂದಿರ ಲೋಕಾರ್ಪಣೆ | ಸ್ವದೇಶಿ ಸರಕುಗಳು ಮತ್ತು ಸ್ವದೇಶಿ ಚಳುವಳಿ ಪ್ರೋತ್ಸಾಹಿಸುವಂತೆ ಪ್ರಧಾನಿ ಮೋದಿ ಕರೆ

Share

ಆದಿಚುಂಚನಗಿರಿ: ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ಸುಮಾರು 80 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಭೈರವೈಕ್ಯ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಲೋಕಾರ್ಪಣೆಗೊಳಿಸಿದರು.

ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವಿಕಸಿತ ಭಾರತ ಕನಸು ನನಸಾಗಿಸಲು 9 ಅಭಿವೃದ್ಧಿ ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ನಾಡಿನ ಜನತೆ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ಜಲ ಸಂರಕ್ಷಣೆ ಮತ್ತು ನಿರ್ವಹಣೆ, ಏಕ್ ಪೇಡ್ ಮಾ ಕೆ ನಾಮ್ ಕಾರ್ಯಕ್ರಮದಡಿಯಲ್ಲಿ ಮರಗಳನ್ನು ನೆಡುವುದು ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಧಾರ್ಮಿಕ ಸ್ಥಳಗಳು, ಹಳ್ಳಿಗಳು ಮತ್ತು ನಗರಗಳನ್ನು ಸ್ವಚ್ಛವಾಗಿಡಲು ನಾಗರಿಕರು ಕೈಜೋಡಿಸುವಂತೆ ಪ್ರಧಾನಿ ಹೇಳಿದರು.

ದೇಸಿ ಸರಕುಗಳು ಮತ್ತು ಉದ್ಯಮಿಗಳನ್ನು ಪ್ರೋತ್ಸಾಹಿಸುವ ಮೂಲಕ ಸ್ವದೇಶಿ ಚಳುವಳಿಯನ್ನು ಪ್ರೋತ್ಸಾಹಿಸುವಂತೆ ಪ್ರಧಾನಿ ಕರೆ ನೀಡಿದರು. ದೇಶದ ಕೆಲವು ಭಾಗಗಳಿಗೆ ಭೇಟಿ ನೀಡುವ ಭಾರತೀಯರು ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಬೇಕು. ರಾಸಾಯನಿಕಗಳು ಮತ್ತು ಕೀಟನಾಶಕಗಳನ್ನು ತಪ್ಪಿಸುವ ಮೂಲಕ ಸಾವಯವ ಮತ್ತು ನೈಸರ್ಗಿಕ ಕೃಷಿಗೆ ಆದ್ಯತೆ ನೀಡಬೇಕು ಎಂದರು.

ಸ್ಥೂಲಕಾಯ ತಪ್ಪಿಸಲು ರಾಗಿ ಮತ್ತು ಕಡಿಮೆ ಖಾದ್ಯ ಎಣ್ಣೆ ಬಳಸಬೇಕು. ಯೋಗ, ಕ್ರೀಡೆ ಮತ್ತು ಫಿಟ್‌ನೆಸ್ ನಮ್ಮ ದೈನಂದಿನ ಜೀವನದ ಭಾಗವಾಗಿರಬೇಕು ಎಂದು ಕಿವಿಮಾತು ಹೇಳಿದರು.

ಬಡವರು ಮತ್ತು ಹಿಂದುಳಿದ ವರ್ಗಗಳ ಬಗ್ಗೆ ಸೇವಾ ಭಾವನೆ ಹೊಂದಿರಬೇಕು. ಈ ಒಂಬತ್ತು ಧ್ಯೇಯಗಳನ್ನು ಅನುಸರಿಸಿದರೆ ನಮ್ಮ ದೇಶ ಶೀಘ್ರದಲ್ಲೇ ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು. ಇದಕ್ಕೂ ಮುನ್ನ ಮಠದ ಗೋರಕ್ಷಕನಾಥ ತಪಸ್ಸು ಮಾಡಿದ ಜ್ವಾಲಪೀಠಕ್ಕೆ ಭೇಟಿ ನೀಡಿದ ಪ್ರಧಾನಿ, ಕಾಲಭೈರವೇಶ್ವರನ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ಸೌಂದರ್ಯ ಲಹರಿ ಮತ್ತು ಶಿವಸ್ತೋತ್ರ ಬಿಡುಗಡೆ ಮಾಡಿದರು.

ಅಧ್ಯಾತ್ಮ, ತ್ರಿವಿಧ ದಾಸೋಹದ ಇತಿಹಾಸದಲ್ಲಿ ಹಿರಿಯ ಶ್ರೀಗಳು ಅಜರಾಮರ ಧ್ರುವತಾರೆ

ಕರ್ನಾಟಕದ ಅಧ್ಯಾತ್ಮ ಮತ್ತು ತ್ರಿವಿಧ ದಾಸೋಹದ ಇತಿಹಾಸದಲ್ಲಿ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಜಿ ಅವರು ಅಜರಾಮರ ಧ್ರುವತಾರೆ ಆಗಿದ್ದಾರೆ ಎಂದು ನಾನು ಭಕ್ತಿಪೂರ್ವಕವಾಗಿ ಹೇಳಬಯಸುತ್ತೇನೆ. ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಅಸಂಖ್ಯಾತ ಬಡಮಕ್ಕಳ ಪಾಲಿಗೆ ಜ್ಞಾನದ ಬೆಳಕಾಗಿ, ಅಸಂಖ್ಯಾತ ಬಡ ಕುಟುಂಬಗಳ ಪ್ರತ್ಯಕ್ಷ ದೈವವಾಗಿ ಮಹಾಸ್ವಾಮೀಜಿ ಅವರು ನಮ್ಮ ಹೃದಯಗಳಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಹಿರಿಯ ಶ್ರೀಗಳನ್ನು ಸಚಿವರು ಸ್ಮರಿಸಿದರು.

ಅಧ್ಯಾತ್ಮದ ಜೊತೆಗೆ ಶಿಕ್ಷಣ, ಆರೋಗ್ಯ, ಪರಿಸರ ಇತ್ಯಾದಿ ಕ್ಷೇತ್ರಗಳಲ್ಲಿ ತಮ್ಮ ಜೀವಿತ ಕಾಲದ ಉದ್ದಕ್ಕೂ ಅವಿರತವಾಗಿ ದುಡಿದ ಮಹಾಸ್ವಾಮಿಗಳು, ತಮ್ಮ ಸಾಧನೆ ಮತ್ತು ಸಂದೇಶಗಳ ಮೂಲಕ ನಮಗೆಲ್ಲರಿಗೂ ದಾರಿದೀಪವಾಗಿದ್ದಾರೆ. ಸಣ್ಣ ಮಠವಾಗಿದ್ದ ಶ್ರೀ ಆದಿಚುಂಚನಗಿರಿ ಕ್ಷೇತ್ರವನ್ನು ಜಾಗತಿಕ ಶ್ರದ್ಧಾಕೇಂದ್ರವನ್ನಾಗಿ ಬೆಳೆಸಿ ಮಹಾವೃಕ್ಷವನ್ನಾಗಿ ರೂಪಿಸಿದ 71ನೇ ಪೀಠಾಧ್ಯಕ್ಷರಾಗಿದ್ದ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆ ಮಾಡುವ ಈ ಪರಮಪುಣ್ಯ ಕಾರ್ಯಕ್ರಮಕ್ಕೆ ಆಗಮಿಸಿರುವ ಪ್ರಧಾನಮಂತ್ರಿಗಳು ಹಾಗೂ ಜಗತ್ತಿನ ಶ್ರೇಷ್ಠ ನಾಯಕರಾದ ನರೇಂದ್ರ ಮೋದಿ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು ಸಚಿವರು.

ಕರ್ನಾಟಕದಲ್ಲಿ ಶಿಕ್ಷಣ, ಪರಿಸರ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಮೌನ ಕ್ರಾಂತಿಯನ್ನು ಮಾಡಿದವರು ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರು, ಜೋಳಿಗೆ ಹಿಡಿದು ಹಳ್ಳಿಹಳ್ಳಿಯನ್ನು ಸುತ್ತಿದ್ದ ರೈತಾಪಿ ಮಕ್ಕಳ ಜ್ಞಾನಾರ್ಜನೆಗೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಗುಣಮಟ್ಟದ ಆರೋಗ್ಯ ಸೇವೆಯನ್ನು ಹಳ್ಳಿಗಳಿಗೂ, ಅದರಲ್ಲಿ ಬಡರೈತರ ಮನೆ ಬಾಗಿಲಿಗೆ ವಿಸ್ತರಿಸಿದ ಖ್ಯಾತಿ ಪರಮಪೂಜ್ಯರದು ಎಂದು ನಾನು ಗೌರವಾನ್ವಿತ ಪ್ರಧಾನಿಗಳ ಗಮನಕ್ಕೆ ತರ ಬಯಸುತ್ತೇನೆ ಎಂದು ಕುಮಾರಸ್ವಾಮಿ ಅವರು ಬಣ್ಣಿಸಿದರು.

ಪರಿಸರ ಕ್ಷೇತ್ರದಲ್ಲಿ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರದು ಅನನ್ಯ ಕೊಡುಗೆ. ಸುಮಾರು ಐದು ಕೋಟಿ ಸಸಿಗಳನ್ನು ಬೆಳೆಸಿದ ಮಹಾನ್ ತಪಸ್ವಿ ಅವರು. ಅವರು ನೆಟ್ಟ ಸಣ್ಣಸಣ್ಣ ಸಸಿಗಳು ಇಂದು ಮಹಾವೃಕ್ಷಗಳಾಗಿ ಬೆಳೆದಿವೆ. ಶ್ರೀ ಆದಿಚುಂಚನಗಿರಿ ಕ್ಷೇತ್ರ ಬಹುವಿಧದ ದಾಸೋಹಗಳಲ್ಲಿ ದೊಡ್ಡ ಹೆಸರು. ಕಷ್ಟ ಎಂದು ಬರುವ ದೀನರಿಗೆ ಕಲ್ಪವೃಕ್ಷವಾಗಿದೆ. ಜ್ಞಾನ ಎಂದು ಬರುವವರೆಗೆ ಕಾಮಧೇನು. ಸನಾತನ ಪರಂಪರೆ ಮತ್ತು ಆಧುನಿಕತೆಯ ಮಹಾಸಂಗಮವಾಗಿ, ಮೇರು ಮಹಾ ಪುಣ್ಯಕ್ಷೇತ್ರವಾಗಿ ಇಂದು ನಮಗೆಲ್ಲರಿಗೂ ದಾರಿದೀಪವಾಗಿದೆ ಎಂದು ಸಚಿವರು ನುಡಿದರು.

ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ. ಕೃಷಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.


Share

You cannot copy content of this page