ಸಮಗ್ರ ಸುದ್ದಿ

ನಾಗರಿಕರಿಗಾಗಿ ಆನ್‌ಲೈನ್ ಖಾತಾ ತಿದ್ದುಪಡಿ ಸೌಲಭ್ಯ ಶೀಘ್ರದಲ್ಲಿ – ಮುನೀಶ್ ಮೌದ್ಗಿಲ್ | ಪ್ರತಿ 30 ಸೆಕೆಂಡಿಗೆ ಒಂದು ಇ-ಖಾತಾ ವಿತರಣೆ

Share

ಬೆಂಗಳೂರು: ನಾಗರಿಕರಿಗೆ ಉತ್ತಮ ಸೇವೆ ಒದಗಿಸುವುದು ಹಾಗೂ ಹೆಚ್ಚಿನ ಅನುಕೂಲತೆ ಕಲ್ಪಿಸುವ ಉದ್ದೇಶದಿಂದ ನಾಗರಿಕರಿಗೇ ಆನ್‌ಲೈನ್ ಖಾತಾ ತಿದ್ದುಪಡಿ ಸೌಲಭ್ಯವನ್ನು ಶೀಘ್ರದಲ್ಲಿ ಪರಿಚಯಿಸಲಾಗುವುದು ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ಅವರು ತಿಳಿಸಿದರು.

ಜಿಬಿಎ ಕೇಂದ್ರ ಕಚೇರಿಯಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯ ಮೂಲಕ ನಾಗರಿಕರು ತಮ್ಮ ಖಾತಾ ವಿವರಗಳಲ್ಲಿ ಇರುವ ದೋಷಗಳನ್ನು ಯಾವುದೇ ವಿಳಂಬವಿಲ್ಲದೆ ಸುಲಭವಾಗಿ ತಿದ್ದಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ವ್ಯವಸ್ಥೆ ಹೆಚ್ಚು ಪರಿಣಾಮಕಾರಿ, ಪಾರದರ್ಶಕ ಮತ್ತು ಬಳಕೆದಾರ ಸ್ನೇಹಿಯಾಗಿ ರೂಪುಗೊಳ್ಳಲಿದೆ. ಮಾಲೀಕರ ಹೆಸರು ಮತ್ತು ಆಸ್ತಿಯ ಅಳತೆ ಹೊರತುಪಡಿಸಿ, ಸ್ಥಳ, ವಾರ್ಡ್ ಸಂಖ್ಯೆ ಸೇರಿದಂತೆ ಇತರ ವಿವರಗಳನ್ನು ನಾಗರಿಕರು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.

ಡ್ರಾಫ್ಟ್ ಖಾತೆಯಿಂದ ಅಂತಿಮ ಖಾತೆಗೆ ಪ್ರಗತಿ:

ಸುಮಾರು 25 ಲಕ್ಷ ಡ್ರಾಫ್ಟ್ ಖಾತಾ ಅರ್ಜಿಗಳು ಆನ್‌ಲೈನ್ ಮೂಲಕ ಸಲ್ಲಿಕೆಯಾಗಿದ್ದು, ಅವುಗಳಲ್ಲಿ 10 ಲಕ್ಷಕ್ಕೂ ಹೆಚ್ಚು ನಾಗರಿಕರಿಗೆ ಈಗಾಗಲೇ ಅಂತಿಮ ಇ-ಖಾತಾ ನೀಡಲಾಗಿದೆ. ಎಲ್ಲಾ ದಾಖಲೆಗಳು ಸರಿಯಾಗಿದ್ದಲ್ಲಿ ಸರಾಸರಿ ಐದು ದಿನಗಳೊಳಗೆ ಅಂತಿಮ ಇ-ಖಾತಾ ನೀಡಲಾಗುತ್ತಿದೆ. ಡ್ರಾಫ್ಟ್ ಖಾತೆಯಿಂದ ಅಂತಿಮ ಖಾತೆಗೆ ಪರಿವರ್ತನೆಯ ಪ್ರಕ್ರಿಯೆ ಯಾವುದೇ ಪ್ರಮುಖ ಸಮಸ್ಯೆಗಳಿಲ್ಲದೆ ಸುಗಮವಾಗಿ ನಡೆಯುತ್ತಿದೆ.

ಪ್ರತಿ 30 ಸೆಕೆಂಡಿಗೆ ಒಂದು ಇ-ಖಾತಾ ವಿತರಣೆ:

ಪ್ರತಿದಿನ 1,000 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಸರಾಸರಿ ಪ್ರತಿ 30 ಸೆಕೆಂಡಿಗೆ ಒಂದು ಇ-ಖಾತಾ ವಿತರಿಸಲಾಗುತ್ತಿದೆ, ಇದು ಡಿಜಿಟಲ್ ಪ್ರಕ್ರಿಯೆಯ ವೇಗ ಮತ್ತು ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುತ್ತದೆ.

ತಿರಸ್ಕಾರ ಪರಿಶೀಲನೆ ಮತ್ತು ಖಾತಾ ತಿದ್ದುಪಡಿ:

ಖಾತಾ ತಿರಸ್ಕಾರ ಪ್ರಕ್ರಿಯೆಯಲ್ಲಿ ಕೆಲವು ಸವಾಲುಗಳು ಗಮನಕ್ಕೆ ಬಂದಿದ್ದು, ಇದನ್ನು ಸರಿಪಡಿಸಲು ರಿಜೆಕ್ಷನ್ ಆಡಿಟ್ ತಂಡವನ್ನು ರಚಿಸಲಾಗಿದೆ. ಈ ತಂಡವು ತಿರಸ್ಕೃತ ಅರ್ಜಿಗಳನ್ನು ಪರಿಶೀಲಿಸುತ್ತಿದ್ದು, ತಿರಸ್ಕರಿಸಲಾದ ಅರ್ಜಿಗಳನ್ನು ಮರುಪರಿಶೀಲಿಸಿ ಅವುಗಳನ್ನು ಮಂಜೂರು ಮಾಡಲಾಗುತ್ತಿದೆ.

ಸ್ವಯಂಚಾಲಿತ ಮ್ಯೂಟೇಷನ್ ವ್ಯವಸ್ಥೆ ಜಾರಿಗೆ:

ಮ್ಯೂಟೇಷನ್ ಪ್ರಕ್ರಿಯೆಯಲ್ಲಿ ವಿಳಂಬವನ್ನು ಕಡಿಮೆ ಮಾಡಲು ಸ್ವಯಂಚಾಲಿತ ಮ್ಯೂಟೇಷನ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಉಪ-ನೋಂದಣಾಧಿಕಾರಿಗಳ ಕಚೇರಿಯಲ್ಲಿ ನಡೆದ ವಹಿವಾಟುಗಳು ಈಗ ಸ್ವಯಂಚಾಲಿತವಾಗಿ ಮ್ಯೂಟೇಷನ್ ಆಗಲಿವೆ. ನೋಟಿಸ್ ಅವಧಿ ಪೂರ್ಣಗೊಂಡ ನಂತರ ಮ್ಯೂಟೇಷನ್ ಪೂರ್ಣಗೊಳ್ಳುತ್ತದೆ ಮತ್ತು ಏಳನೇ ದಿನದ ಬಳಿಕ ನಾಗರಿಕರಿಗೆ SMS ಮೂಲಕ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು.

ಅದೇ ರೀತಿ, ಪೌತಿ (ವಾರಸುದಾರರ) ಪ್ರಕರಣಗಳಲ್ಲಿಯೂ ವಿಳಂಬವನ್ನು ತಪ್ಪಿಸಲು ಸ್ವಯಂ ಮ್ಯೂಟೇಷನ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಅವರು ತಿಳಿಸಿದರು.


Share

You cannot copy content of this page