ಸಮಗ್ರ ಸುದ್ದಿ

ಪವನ ಶಕ್ತಿಯಲ್ಲಿ ಜಾಗತಿಕವಾಗಿ 4ನೇ ಸ್ಥಾನದಲ್ಲಿ ಭಾರತ: ಪ್ರಲ್ಹಾದ ಜೋಶಿ | ಒಂದು ದಶಕದಲ್ಲಿ 156 GW ಪವನ ವಿದ್ಯುತ್ ಸಾಮರ್ಥ್ಯ ಸಾಧನೆಗೆ ಬದ್ಧ

Share

ನವದೆಹಲಿ: ‘ಪವನ ಶಕ್ತಿ ಸಾಮರ್ಥ್ಯದಲ್ಲಿ ಜಾಗತಿಕವಾಗಿ ಭಾರತ 4ನೇ ಸ್ಥಾನದಲ್ಲಿದ್ದು, ಮುಂದಿನ ಒಂದು ದಶಕದಲ್ಲಿ ಬರೋಬ್ಬರಿ 156 GW ಪವನ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಸಾಧಿಸಲಿದೆ’ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಘೋಷಿಸಿದರು.

ದೆಹಲಿಯಲ್ಲಿ ಬುಧವಾರ ಪವನ ಸ್ವತಂತ್ರ ವಿದ್ಯುತ್ ಉತ್ಪಾದಕರ ಸಂಘದ (WIPPA) ಸಂಸ್ಥಾಪನಾ ದಿನ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ಪವನ ವಿದ್ಯುತ್ ಉತ್ಪಾದನೆಯಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ. 2025-26ರಲ್ಲಿ ಐತಿಹಾಸಿಕ 6.1 GW ಪವನ ಶಕ್ತಿ ಉತ್ಪಾದನೆ ಮೂಲಕ ಐತಿಹಾಸಿಕ ದಾಖಲೆ ಬರೆದಿದೆ. ಪ್ರಸ್ತುತ 56.1 GW ಗಿಂತ ಹೆಚ್ಚಿನ ಸ್ಥಾಪಿತ ಸಾಮರ್ಥ್ಯ ಮತ್ತು ಹೆಚ್ಚುವರಿಯಾಗಿ 28 GW ಅನುಷ್ಠಾನ ಹಂತದಲ್ಲಿದೆ ಎಂದು ಹೇಳಿದರು.

150 ಮೀಟರ್ ಹಬ್ ಎತ್ತರದಲ್ಲಿ ಭಾರತದ ಪವನ ಶಕ್ತಿ ಸಾಮರ್ಥ್ಯ ಸುಮಾರು 1164 GW ಎಂಬ ಅಂದಾಜಿದ್ದು, 2030ರ ವೇಳೆಗೆ 100 GW ಮತ್ತು 2036ರ ವೇಳೆಗೆ 156 GW ಪವನ ಶಕ್ತಿಯನ್ನು ಸಾಧಿಸುತ್ತದೆ ಮತ್ತು 2070ರ ವೇಳೆಗೆ ನಿವ್ವಳ-ಶೂನ್ಯ ಗುರಿಗೆ ಗಮನಾರ್ಹ ಕೊಡುಗೆ ನೀಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇಂಧನ ವ್ಯವಸ್ಥೆಯಲ್ಲಿ ಪವನ ಶಕ್ತಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಅಲ್ಲದೆ, ಶೇ.45ರಷ್ಟು ಪವನ ಶಕ್ತಿ ವಿದ್ಯುತ್ ಬೇಡಿಕೆ ಸಮಯದಲ್ಲಿಯೇ ಉತ್ಪಾದನೆಯಾಗುತ್ತಿದೆ. ವಾರ್ಷಿಕ 24 GW ಗಿಂತ ಹೆಚ್ಚಿನ ಸಾಮರ್ಥ್ಯ ಮತ್ತು 70-80% ದೇಶೀಯ ಮಟ್ಟ ತಲುಪಿದೆ ಎಂದರು.

ಕೈಗಾರಿಕೆಗಳಿಂದ ನೇರ ಖರೀದಿಗೆ ಅನುಕೂಲ:
ಹಸಿರು ಇಂಧನ ವ್ಯವಸ್ಥೆಯಲ್ಲಿ ಕೈಗಾರಿಕೆಗಳಿಂದ ನವೀಕರಿಸಬಹುದಾದ ವಿದ್ಯುತ್ ನೇರ ಖರೀದಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದ ಸಚಿವರು, ಭಾರತ ಸುಸ್ಥಿರ ಇಂಧನ ಭವಿಷ್ಯಕ್ಕಾಗಿ ಗಾಳಿ ಮತ್ತು. ಸೌರ ವಿದ್ಯುತ್ ಸಂಗ್ರಹಣೆಯನ್ನು ಸಂಯೋಜಿಸಲು ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಹೇಳಿದರು.

WIPPA ಪವನ ಇಂಧನ ಉದ್ಯಮದಲ್ಲಿ ವಿಶ್ವಾಸಾರ್ಹ ಧ್ವನಿಯಾಗಿ ಕೆಲಸ ಮಾಡುತ್ತಿದ್ದು, ಇಂಧನ ವಲಯದ ಸವಾಲುಗಳನ್ನು ಪರಿಹರಿಸುವಲ್ಲಿ ಮತ್ತು ದೇಶದ ನವೀಕರಿಸಬಹುದಾದ ಇಂಧನ ಮಹತ್ವಾಕಾಂಕ್ಷೆಗಳನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಸಂತೋಷ್ ಸಾರಂಗಿ ಮತ್ತಿತರರು ಉಪಸ್ಥಿತರಿದ್ದರು.


Share

You cannot copy content of this page