ಸಮಗ್ರ ಸುದ್ದಿ

ನೀಟ್ ಮರು ಪರೀಕ್ಷೆ ಜೂನ್ 21 ಕ್ಕೆ ನಿಗದಿ

Share

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದ್ದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ- ನೀಟ್ ಮರುಪರೀಕ್ಷೆಯನ್ನು ಜೂನ್ 21ರಂದು ನಡೆಸಲು ತೀರ್ಮಾನಿಸಲಾಗಿದೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ-ಎನ್.ಟಿ.ಎ ಇಂದು ಅಧಿಕೃತವಾಗಿ ನೀಟ್ ನ ಮರು ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಿದೆ.
ಈ ಮುನ್ನ ಮೇ 3ರಂದು ನೀಟ್ ಪರೀಕ್ಷೆ ನಡೆಸಲಾಗಿತ್ತು.

ಆದರೆ ದೇಶದ ಹಲವು ರಾಜ್ಯಗಳಲ್ಲಿ ಈ ಪರೀಕ್ಷೆಗೆ ಎರಡು ದಿನಗಳ ಮೊದಲೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು ಎಂಬುದು ನಂತರ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು.
ಇದೀಗ ಜೂನ್ 21ಕ್ಕೆ ಮರು ಪರೀಕ್ಷೆ ನಿಗದಿ ಮಾಡಲಾಗಿದೆ. ಅಭ್ಯರ್ಥಿಗಳು ಮತ್ತು ಪೋಷಕರು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಅಧಿಕೃತ ಜಾಲತಾಣಗಳನ್ನು ಮಾತ್ರ ಅವಲಂಬಿಸುವಂತೆ ಎನ್.ಟಿ.ಎ ಮನವಿ ಮಾಡಿದೆ.

ಈ ಕುರಿತು ದೆಹಲಿಯಲ್ಲಿಂದು ಸುದ್ದಿಗಾರರಿಗೆ ಮಾಹಿತಿ ನೀಡಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಜೂನ್ 21ರಂದು ನೀಟ್-ಯುಜಿ ಮರು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆಯನ್ನು ರದ್ಗುಗೊಳಿಸಲಾಯಿತು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಅವರಿಗೆ ಅನ್ಯಾಯವಾಗಬಾರದೆಂದು ನೀಟ್ ಪರೀಕ್ಷೆ ರದ್ದುಗೊಳಿಸಲು ನಿರ್ಣಯಿಸಲಾಯಿತು. ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಸಿಬಿಐ ವತಿಯಿಂದ ಸೂಕ್ತ ತನಿಖೆ ನಡೆಸಲಾಗುತ್ತಿದೆ. ಇದರಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.


Share

You cannot copy content of this page