ಬೆಂಗಳೂರು: ಚಿಕ್ಕಪೇಟೆ ವಿಭಾಗದ ಗಾಂಧಿಬಜಾರ್ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೊಳನ್ ಅವರು ತಿಳಿಸಿದರು.
ಚಿಕ್ಕಪೇಟೆ ವಿಭಾಗದ ಗಾಂಧಿ ಬಜಾರ್ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲು ಆಯುಕ್ತರು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಈ ಸಂಬಂಧ ಚಿಕ್ಕಪೇಟೆ ಕಾರ್ಯಪಾಲಕ ಅಭಿಯಂತರರಾದ ಪ್ರದೀಪ್ ಕುಮಾರ್ ನೇತೃತ್ವದ ತಂಡವು ಇಂದು ಬೆಳಿಗ್ಗೆ ಅನಧಿಕೃತ ಒತ್ತುವರಿಗಳನ್ನು ತೆರವುಗೊಳಿಸಿದ್ದಾರೆ.
ಗಾಂಧಿ ಬಜಾರ್ ನಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಸುಮಾರು 120 ಮಳಿಗೆಗಳಿಗೆ ಸ್ಥಳ ಗುರುತಿಸಿ ಆ ಸ್ಥಳದಲ್ಲಿಯೇ ವ್ಯಾಪಾರ ಮಾಡಲು ಸೂಚನೆ ನೀಡಲಾಗಿತ್ತು. ಆದರೆ ನಿಗದಿಪಡಿಸಿರುವ ಸ್ಥಳ ಬಿಟ್ಟು ಹೆಚ್ಚುವರಿ ಜಾಗದಲ್ಲಿ ವ್ಯಾಪಾರ ಮಾಡುತ್ತಿದ್ದು, ಇದರಿಂದ ಪಾದಚಾರಿಗಳಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಒತ್ತುವರಿ ತೆರವುಗೊಳಿಸಲು ಸಾಕಷ್ಟು ಬಾರಿ ತಿಳಿಸಿದ್ದರೂ ತೆರವುಗೊಳಿಸಿರಲಿಲ್ಲ. ಈ ನಿಟ್ಟಿನಲ್ಲಿ ಇಂದು ಪಾದಚಾರಿ ಮಾರ್ಗ ತೆರವು ಕಾರ್ಯ ನಡೆಸಲಾಗಿದೆ.
ತೆರವು ಕಾರ್ಯಾಚರಣೆಯ ವೇಳೆ 2 ಜೆಸಿಬಿ, 7 ಟ್ರ್ಯಾಕ್ಟರ್ ಗಳು, 3 ಲಾರಿ ಗಳು ಹಾಗೂ 40 ಸಿಬ್ಬಂದಿಗಳನ್ನು ಬಳಸಿಕೊಂಡು, ನಿಗದಿಪಡಿಸಿರುವ ಜಾಗಕ್ಕಿಂತ ಹೆಚ್ಚುವರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದ ಜಾಗ ಹಾಗೂ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿದ್ದ 5 ಶಾಪ್ ಗಳನ್ನು ತೆರವುಗೊಳಿಸಲಾಗಿದೆ.
ಇನ್ನು ಮುಂದೆ ಬೀದಿ ಬದಿ ವ್ಯಾಪಾರಿಗಳಿಗೆ ನಿಗದಿಪಡಿಸಿರುವ ಜಾಗದಲ್ಲಿಯೇ ವ್ಯಾಪಾರ ಮಾಡಬೇಕು. ಅದನ್ನು ಹೊರತುಪಡಿಸಿ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ಕಾರ್ಯಾಚರಣೆಯಲ್ಲಿ ಕಾರ್ಯಪಾಲಕ ಅಭಿಯಂತರರಾದ ಪ್ರದೀಪ್ ಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರರುಗಳಾದ ಕೃಷ್ಣಕುಮಾರ್, ರಾಮೇಗೌಡ, ಮಾರ್ಷಲ್ ಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
