ಸಮಗ್ರ ಸುದ್ದಿ

ರಾಜ್ಯದ ನಾಗರಿಕರ ಮತದಾನದ ಹಕ್ಕನ್ನು ಕಾಪಾಡಲು ಸರ್ವಪ್ರಯತ್ನ-ಸಚಿವ ಹೆಚ್.ಕೆ.ಪಾಟೀಲ್

Share

ಬೆಂಗಳೂರು: ರಾಷ್ಟ್ರದ ನಾಗರಿಕನಾಗಿರುವ ರಾಜ್ಯದ ಯಾವುದೇ ಪ್ರಜೆಗೆ ತನ್ನ ಮತದಾನದ ಹಕ್ಕನ್ನು ಅನಾವಶ್ಯಕವಾಗಿ ಕಸಿದುಕೊಳ್ಳುವಂತಹ ಪ್ರಕ್ರಿಯೆ ನಡೆದರೆ, ಅಂತಹ ಪ್ರಕ್ರಿಯೆಯಿಂದ ನಾಗರೀಕನ ಮತದಾನದ ಹಕ್ಕನ್ನು ಕಾಪಾಡಲು ಸರ್ವಪ್ರಯತ್ನಗಳನ್ನು ಮಾಡಲು ಚಿಂತನೆ ನಡೆಸಲಾಗುವುದು ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಅವರು ತಿಳಿಸಿದರು.

ಕರ್ನಾಟಕ ರಾಜ್ಯದಲ್ಲಿ ಪಟ್ಟಿಗಳ ಮತದಾರರ ವಿಶೇಷ ತೀವು ಪರಿಷ್ಕರಣೆ (Special Intensive Revision – SIR) ಬಗ್ಗೆ ಸುಧೀರ್ಘ ಚರ್ಚೆಗಳು ನಡೆದವು. ಭಾರತದಲ್ಲಿ ವಿವಿಧ ರಾಜ್ಯಗಳಲ್ಲಿ ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಎಸ್ ಐ ಆರ್ ಪ್ರಕ್ರಿಯೆಯಿಂದ 27 ಲಕ್ಷ ಜನರ ಮತದ ಹಕ್ಕು ಕಸಿಯಲಾಯಿತು. ಎಸ್ ಐ ಆರ್ ನ ಅವಘಡಗಳು ಮತ್ತು ಗಂಭೀರ ಆಕ್ಷೇಪಗಳ ಬಗ್ಗೆ ಚರ್ಚಿಸಲಾಗಿ, ಈ ವಿಷಯದ ಬಗ್ಗೆ ಸರ್ವೋಚ್ಛ ನ್ಯಾಯಾಲಯದ ಮೆಟ್ಟೆಲೇರುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಅಂತಿಮ ಮತದಾರರ ಪಟ್ಟಿ , ಎಸ್ ಐ ಆರ್ ಪ್ರಕ್ರಿಯೆ, ಅದರ ಪಾರದರ್ಶಕತೆಗೆ ಸಂಬಂಧಿಸಿದ ಹಲವು ಅಂಶಗಳ ಬಗ್ಗೆ ಮತ್ತಷ್ಟು ವಿವರವಾದ ಚರ್ಚೆಗಳನ್ನು ನಡೆಯಬೇಕಿದ್ದು, ಈ ಬಗ್ಗೆ ಶೀಘ್ರದಲ್ಲಿಯೇ ನಿರ್ಣಯ ಕೈಗೊಳ್ಳಲಾಗುವುದು ಎಂದರು.

ಮೇ 21ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

ಎನ್.ಜಿ.ಇ.ಎಫ್ (ಹುಬ್ಬಳ್ಳಿ) ಲಿ., ಸಂಸ್ಥೆಗೆ ನೀಡಿದ ದುಡಿಯುವ ಬಂಡವಾಳ ರೂಪದ ಸಾಲ ರೂ.2 ಕೋಟಿಗಳು ಮತ್ತು ಅದರ ಮೇಲಿನ ಬಡ್ಡಿ ರೂ.4 ಕೋಟಿಗಳು ಸೇರಿ ಒಟ್ಟು ರೂ.6 ಕೋಟಿಗಳು ಹಾಗೂ ರೂ.10 ಕೋಟಿಗಳ ಬಡ್ಡಿ ರಹಿತ ಸಾಲವನ್ನು ಈಕ್ವಿಟಿಯಾಗಿ ಪರಿವರ್ತಿಸುವುದಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಹಾಗೂ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ತಲಾ 50 ಹಾಸಿಗೆಗಳ MCH ನಿರ್ಮಾಣ ಆಸ್ಪತ್ರೆ ಅಂದಾಜು ಮೊತ್ತದಲ್ಲಿ ಕಾಮಗಾರಿಗಳನ್ನು ಒಟ್ಟಾರೆ ರೂ.38 ಕೋಟಿಗಳ ಕೈಗೊಳ್ಳಲು ಸಚಿವ ಸಂಪುಟ ಅನುಮೋದನೆ ನೀಡಲಾಗಿದೆ.

ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಗರ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ನಮ್ಮ ಕ್ಲಿನಿಕ್ಗಳಿಗೆ ಅವಶ್ಯವಿರುವ ಪ್ರಯೋಗಾಲಯ ಉಪಭೋಗ್ಯಗಳನ್ನು (RD KIT) ಮತ್ತು ವಿವಿಧ ಉಪಕರಣಗಳನ್ನು ರೂ.22 ಕೋಟಿಗಳ ಅಂದಾಜು ಮೊತ್ತದಲ್ಲಿ 15 ಹಣಕಾಸು ಆಯೋಗದ ಅನುದಾನದಲ್ಲಿ ಖರೀದಿಸಲು ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ.

ಬೆಂಗಳೂರು ಕೇಂದ್ರ ಕಾರಾಗೃಹದ ಆವರಣದಲ್ಲಿ ಕಾರಾಗೃಹ ಇಲಾಖೆಗೆ ಸೇರಿದ ಜಮೀನಿನಲ್ಲಿ Dealership Model ಮಾದರಿಯಲ್ಲಿ M/s Indian Oil Corporation Ltd., (IOCL) ಸಂಸ್ಥೆಯ ವತಿಯಿಂದ ಪೆಟ್ರೋಲ್ ಪಂಪ್ ಮತ್ತು ಮಾರಾಟ ಮಳಿಗೆಯನ್ನು ಸ್ಥಾಪಿಸುವ ಬಗ್ಗೆ ಸಚಿವ ಸಂಪುಟ ಒಪ್ಪಿಗೆ ನೀಡಿತು

ಧಾರವಾಡ ಕೇಂದ್ರ ಕಾರಾಗೃಹಗಳ ಆವರಣದಲ್ಲಿ ಕಾರಾಗೃಹ ಇಲಾಖೆಗೆ ಸೇರಿದ ಜಮೀನಿನಲ್ಲಿ Dealership Model ಮಾದರಿಯಲ್ಲಿ M/s Hindustan Petroleum Corporation Ltd (HPCL) ಸಂಸ್ಥೆಯ ವತಿಯಿಂದ ಪೆಟ್ರೋಲ್ ಪಂಪ್ ಮತ್ತು ಮಾರಾಟ ಮಳಿಗೆಯನ್ನು ಸ್ಥಾಪಿಸಲು ಒಪ್ಪಿಗೆ ನೀಡಲಾಗಿದೆ.

ಬೆಳಗಾವಿ ಮತ್ತು ಬಳ್ಳಾರಿ ಕೇಂದ್ರ ಕಾರಾಗೃಹಗಳ ಆವರಣದಲ್ಲಿ ಕಾರಾಗೃಹ ಇಲಾಖೆಗೆ ಸೇರಿದ ಜಮೀನಿನಲ್ಲಿ M/s Bharath Petroleum Corporation Ltd., (BPCL) ಸಂಸ್ಥೆಯ ವತಿಯಿಂದ ಪೆಟ್ರೋಲ್ ಪಂಪ್ ಮತ್ತು ಮಾರಾಟ ಮಳಿಗೆಯನ್ನು ಸ್ಥಾಪಿಸಲು ಒಪ್ಪಿಗೆ ನೀಡಲಾಗಿದೆ.

ಕೋರಮಂಡಲ್ ಶುಗರ್ಸ್ ಲಿಮಿಟೆಡ್ ಇವರಿಗೆ ಮಂಜೂರಾಗಿರುವ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಮಾಕವಳ್ಳಿ ಗ್ರಾಮದಲ್ಲಿ ಸ.ನಂ. 119, ಹೊಸ ಸ.ನಂ. 151 ರಲ್ಲಿನ 100 ಎಕರೆ ಜಮೀನನ್ನು ಶ್ರೀ ಚಾಮುಂಡೇಶ್ವರಿ ಶುಗರ್ಸ್ ಲಿಮಿಟೆಡ್ ನ ಸಮೂಹ ಕಂಪನಿಯಾದ ಮೆ. ಹೇಮಗಿರಿ ಶುಗರ್ಸ್ & ರಿನ್ಯೂವಬಲ್ಸ್ ಪ್ರೈವೇಟ್ ಲಿಮಿಟೆಡ್ಗೆ ಮಾರಾಟ ಮಾಡಲು ಕೆಲವು ಷರತ್ತುಗಳ ಜೊತೆಗೆ ಅನುಮತಿ ನೀಡಲಾಗಿದೆ.

32 ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(GTTC) ಗಳಲ್ಲಿ ಹೊಸ ಯಂತ್ರೋಪಕರಣಗಳು ಮತ್ತು ಸಲಕರಣೆಗಳನ್ನು ರೂ.90.00 ಕೋಟಿಗಳ ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಕನಕಪುರ ನಗರಸಭೆ ವ್ಯಾಪ್ತಿಯಲ್ಲಿ ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿ (UIDF) ಯೋಜನೆಯ ಟ್ರಾಂಚ್-2 ರಡಿ ರೂ.20.00 ಕೋಟಿಗಳ ಅಂದಾಜು ಮೊತ್ತದಲ್ಲಿ ಮಳೆ ನೀರು ಚರಂಡಿ ಕಾಮಗಾರಿಗಳನ್ನು ನಿರ್ಮಾಣ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಮಾಲೀಕತ್ವದಲ್ಲಿರುವ ಹಾಗೂ ಬಡಾವಣೆಯಲ್ಲಿರುವ ಪ್ರಾಧಿಕಾರದ ಉದ್ಯಾನವನ/ ಬಯಲು ಜಾಗಕ್ಕೆ ಕಾಯ್ದಿರಿಸಿರುವ ಮೈಸೂರು ಜಿಲ್ಲೆ ಸಾತಗಳ್ಳಿ ಗ್ರಾಮದ ಸ.ನಂ. 85, 88, 106 ಹಾಗೂ 107ರಲ್ಲಿನ ಕೆರೆ ಜಾಗವನ್ನು ಹೊರತುಪಡಿಸಿ 17.35 ಎಕರೆ ಜಮೀನನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸುಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಮೈಸೂರು ಜಿಲ್ಲೆ, ನಂಜನಗೂಡು ತಾಲ್ಲೂಕಿನ ಶ್ರೀಕಂಠೇಶ್ವರ ದೇವಾಲಯದ ಸ್ನಾನಘಟ್ಟದ ಹತ್ತಿರ ಕಬಿನಿ ನದಿಗೆ ಅಡ್ಡಲಾಗಿ ವಿಯರ್ ನಿರ್ಮಾಣ ಕಾಮಗಾರಿಯನ್ನು ರೂ.15.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿದೆ.

ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು ವ್ಯಾಪ್ತಿಯಲ್ಲಿನ ಬೆಳ್ಳೂರು ಹೋಬಳಿಯ ದಾಸನಕೆರೆ ಅಭಿವೃದ್ಧಿ ಹಾಗೂ ವಿದ್ಯುದ್ದೀಕರಣ ಕಾಮಗಾರಿಗಳನ್ನು ರೂ.25 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿದೆ.

ಕೇಂದ್ರ ಆಡಳಿತ ನ್ಯಾಯಮಂಡಳಿಯ ಪ್ರಕರಣ ಸಂಖ್ಯೆ: Ο.Α.Νο.339/2023 C/w 98/2023 ಮತ್ತು 103/2025 ರಲ್ಲಿ ದಿನಾಂಕ: 16.03.2026 ರಂದು ನೀಡಿರುವ ಆದೇಶದಂತೆ ಶ್ರೀಮತಿ ಸುಶೀಲಮ್ಮ ಎನ್., ಹಾಗೂ ಇತರೆ 3 ಮಂದಿ ಕೆಎಎಸ್ ಅಧಿಕಾರಿಗಳನ್ನು ಐಎಎಸ್ ವೃಂದಕ್ಕೆ ಮುಂಬಡ್ತಿಗೆ ಪರಿಗಣಿಸಲು ಕಾನೂನು ಇಲಾಖೆ ಪರಿಶೀಲಿಸಿದ ನಂತರ ಸಚಿವ ಸಂಪುಟ ಸಭೆಗೆ ಮಂಡಿಸಲು ನಿರ್ಣಯಿಸಲಾಯಿತು.

ಕಾರವಾರ ಬಂದರಿನ ತೈಲ ಸೋರಿಕೆ ತುರ್ತು ನಿರ್ವಹಣಾ ಯೋಜನೆ (OSCP)ಯನ್ವಯ ತೈಲ ಸೋರಿಕೆ ಪ್ರತಿಕ್ರಿಯೆ ಉಪಕರಣಗಳನ್ನು (OSR equipment’s) ರೂ.13 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ 200 ಹಾಸಿಗೆಗಳ ಸಾಮರ್ಥ್ಯದ ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡವನ್ನು ರೂ.100 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಮಂಡ್ಯ ತಾಲ್ಲೂಕು, ಎಸ್.ಐ. ಕೋಡಿಹಳ್ಳಿ ಗೇಟ್‌ನಿಂದ ಬಸರಾಳು-ಕೊಪ್ಪ ರಸ್ತೆಗೆ ಸೇರುವ ಜಿಲ್ಲಾ ಮುಖ್ಯ ರಸ್ತೆಯ ಸರಪಳಿ: 0.00 ರಿಂದ 7.40 ಕಿ.ಮೀ. ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ರೂ.11.40 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿದೆ.

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕು ಪ್ರಜಾಸೌಧ ಕಟ್ಟಡ ನಿರ್ಮಾಣ ಕಾಮಗಾರಿಗಳ ರೂ.10.61 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಕಲಬುರಗಿ ಜಿಲ್ಲೆ, ಕಲಬುರಗಿ ತಾಲ್ಲೂಕು, ಶರಣಸಿರಸಗಿ ಗ್ರಾಮದ ಸ.ನಂ. 243//ರಲ್ಲಿ 4.00 ಎಕರೆ “ಗೋಮಾಳ” ಜಮೀನನ್ನು ಕಲಬುರಗಿ ಜಿಲ್ಲಾ ಆದಿ ವೀರಶೈವ ಬಣಜಿಗ ಸಮಾಜ ಇವರಿಗೆ ಮಂಜೂರು ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಬೆಂಗಳೂರು ನಗರ ಜಿಲ್ಲೆ, ಆನೇಕಲ್ ತಾಲ್ಲೂಕು, ಅತ್ತಿಬೆಲೆ ಹೋಬಳಿ, ಜಿಗಳ ಗ್ರಾಮದ ಸ.ನಂ. 45ರಲ್ಲಿ 25 ಗುಂಟೆ ಸರ್ಕಾರಿ ಗುಂಡುತೋಪು ಜಮೀನನ್ನು ಅತ್ತಿಬೆಲೆ ಪುರಸಭೆಗೆ FSTP ನಿರ್ಮಾಣಕ್ಕಾಗಿ ಮಂಜೂರು ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ .

“ಕರ್ನಾಟಕ ಮಹಾನಗರ ಪಾಲಿಕೆಗಳು (ಮಹಾನಗರ ಪಾಲಿಕೆಗಳಲ್ಲಿ UGD ಸಹಾಯಕರ ನೇಮಕಾತಿ) ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮಹಾನಗರ ಪಾಲಿಕೆಗಳನ್ನು ಹೊರತುಪಡಿಸಿ) (ವಿಶೇಷ) ನಿಯಮಗಳು, 2026″ಕ್ಕೆ ಅನುಮೋದನೆ ನೀಡಿದೆ.

ದಾವಣಗೆರೆ ಶ್ರೀ ಪಂಚಮುಖಿ ವಿವಿಧೋದ್ದೇಶ ಸಹಕಾರ ಸಂಘ ಇವರಿಗೆ ಶೈಕ್ಷಣಿಕ ಮತ್ತು ಸಮುದಾಯ ಭವನ ನಿರ್ಮಾಣದ ಉದ್ದೇಶಕ್ಕಾಗಿ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಗುತ್ತಿಗೆ ಆಧಾರದ ಮೇಲೆ ಹಂಚಿಕೆ ಮಾಡಿರುವ 497.60 ಚ.ಮೀ. ನಾಗರಿಕ ಸೌಲಭ್ಯ ನಿವೇಶನಕ್ಕೆ ರಿಯಾಯಿತಿ ದರದ ಗುತ್ತಿಗೆ ಮೊತ್ತ ನಿಗದಿಪಡಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ರಾಯಚೂರು ಜಿಲ್ಲೆ, ರಾಯಚೂರು ಮತ್ತು ಮಾನ್ಸಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯಡಿ ಬರುವ ವಿತರಣಾ ಕಾಲುವೆ ಸಂಖ್ಯೆ: 102 ಮತ್ತು 1020 ಗಳ ಅಚ್ಚುಕಟ್ಟು ಪ್ರದೇಶದಲ್ಲಿ 8320 ಹೆಕ್ಟೇರ್ ಬಾಧಿತ ಅಚ್ಚುಕಟ್ಟಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ರೂ.182.70 ಕೋಟಿಗಳ ಅಂದಾಜು ಮೊತ್ತದ “ಮಟಮಾರಿ ವೀರಭದ್ರೇಶ್ವರ ಏತ ನೀರಾವರಿ ಯೋಜನೆ”ಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಶಾಲಾಪೂರ್ವ ಶಿಕ್ಷಣ ಕಿಟ್ಗಳನ್ನು ಪ್ರತಿ ಕೇಂದ್ರಕ್ಕೆ, ರೂ.3000/- ಘಟಕ ವೆಚ್ಚದಲ್ಲಿ 69,922 ಅಂಗನವಾಡಿಗಳಿಗೆ, ಒಟ್ಟು ರೂ.20.98 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ .

ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ನೆರವಿನ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿವರ್ತನೆ (KSHET) ಯೋಜನೆಯಡಿ ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಇಲಾಖೆಯ ಸಾಲದ ಮಾತುಕತೆ ಸಿದ್ಧತೆಯ ಮಾನದಂಡಗಳ ಪ್ರಕಾರ 53 ಸರ್ಕಾರಿ ಪದವಿ ಕಾಲೇಜುಗಳು, ಪಾಲಿಟೆಕ್ನಿಕ್‌ಗಳು, 14 ಸರ್ಕಾರಿ 5 ಉತ್ಕೃಷ್ಠತಾ ಯೋಜನಾ ಕೇಂದ್ರಗಳು ಹಾಗೂ ನಿರ್ವಹಣಾ (PMU) ಘಟಕಕ್ಕೆ ಒಟ್ಟು ರೂ.802 ಕೋಟಿಗಳ ಮೊತ್ತದ ವಸ್ತುಗಳ ಮುಂಗಡ ಖರೀದಿಗೆ ಅನುಮೋದನೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ಪ್ರತಿ ಜಿಲ್ಲೆಗೆ 15 ವಿದ್ಯಾರ್ಥಿಗಳಂತೆ 500 ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ರೂ.15 ಕೋಟಿಗಳ ವೆಚ್ಚದಲ್ಲಿ 02 ವರ್ಷಗಳ ವಸತಿ ಸಹಿತ ಪಿ.ಯು.ಸಿ. (ಪ್ರಥಮ ಪಿ.ಯು.ಸಿ ಮತ್ತು ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ) ಶಿಕ್ಷಣದೊಂದಿಗೆ NEET/ JEE/ CET ಪರೀಕ್ಷಾ ಪೂರ್ವ ತರಬೇತಿ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ನೈರ್ಮಲ್ಯ ತ್ಯಾಜ್ಯ ಮತ್ತು ರಸ್ತೆ ಗುಡಿಸುವಿಕೆಯ ತ್ಯಾಜ್ಯದ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಗಣೆಯನ್ನು ಸಮರ್ಪಕವಾಗಿ ನಿರ್ವಹಿಸುವ ಉದ್ದೇಶದಿಂದ ದ್ವಿತೀಯ ಹಂತವೂ ಸೇರಿ ತ್ಯಾಜ್ಯ ಸಾಗಾಣಿಕೆ ಸೇವೆಯನ್ನು ಒಂದು ವೇಳೆ ಶೇಕಡಾ 5 ಕ್ಕಿಂತ ಹೆಚ್ಚಿನ ಮೌಲ್ಯದ ಟೆಂಡರ್ ನ್ನು ಅಂಗೀಕರಿಸಲು ಸಮರ್ಥನೀಯ ಕಾರಣಗಳನ್ನು ದಾಖಲಿಸಿ ಉನ್ನತ ಪ್ರಾಧಿಕಾರದ ಅಧಿಕಾರಕ್ಕೆ ಬಿಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರನ್ನು ಆಯ್ಕೆ ಮಾಡುವ ಕುರಿತು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ವಿಧಾನ ಪರಿಷತ್ ಅಧ್ಯಕ್ಷರಾದ ಬಸವರಾಜ ಹೊರಟ್ಟಿ, ವಿಧಾನಸಭಾಧ್ಯಕ್ಷ ಯು ಟಿ ಖಾದರ್, ವಿರೋಧ ಪಕ್ಷದ ನಾಯಕ ಆರ್ . ಅಶೋಕ್ , ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಗೃಹ ಸಚಿವ ಸಭೆ ನಡೆದು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿಯವರನ್ನು ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ಸಚಿವ ಸಂಪುಟ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.

ಮಳೆಗಾಲದ ಅಧಿವೇಶನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.


Share

You cannot copy content of this page