ಸಮಗ್ರ ಸುದ್ದಿ

ಮಾಜಿ ಸಚಿವ ವೆಂಕಟರಮಣಪ್ಪ ಅಗಲಿಕೆ : ಸಚಿವ ಡಾ. ಜಿ.ಪರಮೇಶ್ವರ ಕಂಬನಿ

Share

ಬೆಂಗಳೂರು:ಸಚಿವರಾದ ಡಾ. ಜಿ.ಪರಮೇಶ್ವರ ಅವರು ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಪೋರ್ಟೀಸ್ ಆಸ್ಪತ್ರೆಗೆ ಭೇಟಿ ನೀಡಿ, ಹೃದಯಾಘಾತದಿಂದ ನಿಧನ ಹೊಂದಿರುವ ಪಾವಗಡ ಮಾಜಿ ಶಾಸಕರು ಹಾಗೂ ಮಾಜಿ ಸಚಿವರಾದ ವೆಂಕಟರಮಣಪ್ಪ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು, ಶ್ರದ್ಧಾಂಜಲಿ ಸಲ್ಲಿಸಿದರು. ಮೃತರ ಆತ್ಮಕ್ಕೆ ಸದ್ಗತಿ ಕೋರಿ, ಶಾಸಕ ಹೆಚ್.ವಿ.ವೆಂಕಟೇಶ್ ಮತ್ತು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ ಅವರು, ಮಾಜಿ ಸಚಿವ ವೆಂಕಟರಮಣಪ್ಪ ಅಗಲಿಕೆಯು ಅತ್ಯಂತ ನೋವಿನ ವಿಚಾರ. ಸರಳ ವ್ಯಕ್ತಿತ್ವದಿಂದ ಜನಪರ ಕೆಲಸ ಮಾಡಿ ಹೆಸರುಗಳಿಸಿದ ವ್ಯಕ್ತಿ. ಅವರ ಆತ್ಮಕ್ಕೆ ಚಿರ ಶಾಂತಿ ಕೋರುತ್ತೇನೆ. ಭಗವಂತನು ಕುಟುಂಬವರ್ಗದವರಿಗೆ ನಷ್ಟವನ್ನು ಭರಿಸುವ ಶಕ್ತಿ ನೀಡಲಿ ಎಂದರು.

ವೆಂಕಟರಮಣಪ್ಪ ಅವರು ತುಮಕೂರು ಜಿಲ್ಲೆಯಲ್ಲಿ ಹೋರಾಟ ಮಾಡಿ ಜನಪ್ರಿಯತೆ ಗಳಿಸಿದ್ದ ಶೋಷಿತ ವರ್ಗದ ನಾಯಕ. ಸಚಿವರಾಗಿದ್ದ ವೇಳೆ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ವೆಂಕಟರಮಣಪ್ಪ ಅವರ ಪುತ್ರ ವೆಂಕಟೇಶ್ ಪಾವಗಡ ಕ್ಷೇತ್ರದ ಶಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಆದರೂ ಸಹ ವೆಂಕಟರಮಣಪ್ಪ ಶಾಸಕ ಅಂತ ಜನ ಕರೆಯುತ್ತಿದ್ದರು. ಪಾವಗಡದಲ್ಲಿ ಅಷ್ಟೊಂದು ಜನಪ್ರಿಯ ವ್ಯಕ್ತಿ. ನನಗೂ ಸಹ ಆತ್ಮೀಯರಾಗಿದ್ದರು. ಅವರ ಅಗಲಿಕೆಯು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಶಿವರಾಜ ತಂಗಡಗಿ ಅವರು, ಶಾಸಕರಾದ ಹೆಚ್.ವಿ.ವೆಂಕಟೇಶ್ ಅವರು ಇದ್ದರು.


Share

You cannot copy content of this page