ಸಮಗ್ರ ಸುದ್ದಿ

102 GW ಸಾಮರ್ಥ್ಯದ ʼಫ್ಲೋಟಿಂಗ್‌ ಸೌರ ಯೋಜನೆʼ|ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಕಟ

Share

ನವದೆಹಲಿ: ಸಣ್ಣ ಜಲ ವಿದ್ಯುತ್ ಅಭಿವೃದ್ಧಿ ಯೋಜನೆಗಾಗಿ ಕೇಂದ್ರ ಸರ್ಕಾರ ʼತೇಲುವ (Floating Solar Scheme) ಸೌರ ಯೋಜನೆʼ ಪರಿಚಯಿಸುತ್ತಿದೆ ಎಂದು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಪ್ರಕಟಿಸಿದರು.

ದೆಹಲಿಯಲ್ಲಿ ಬುಧವಾರ, ಡಾ.ಮೊಹಮ್ಮದ್ ರಿಹಾನ್ ಬರೆದ “ಗ್ರೀನ್ ಎನರ್ಜಿ ಅಂಡ್ ಸ್ಟೈನಬಲ್ ಡೆವಲಪ್‌ಮೆಂಟ್” ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಭಾರತದಲ್ಲಿ 102 GWpಗಿಂತ ಹೆಚ್ಚು ʼತೇಲುವ ಸೌರ ಪಿವಿʼ ಸಾಮರ್ಥ್ಯವನ್ನು ನಿರ್ಣಯಿಸಲಾಗಿದೆ ಎಂದು ಹೇಳಿದರು.

ಭಾರತದ ತೇಲುವ ಸೌರ ಪಿವಿ ಸಂಭಾವ್ಯ ಮೌಲ್ಯಮಾಪನದ ವರದಿ ಸಹ ಬಿಡುಗಡೆ ಮಾಡಿದ ಸಚಿವರು, ದೇಶದ ತೇಲುವ ಸೌರ ಸಾಮರ್ಥ್ಯವನ್ನು 102 GWp ಗಿಂತ ಅಧಿಕ ಎಂಬುದನ್ನು ಈ ವರದಿ ಅಂದಾಜಿಸಿದ್ದು, ಈ ಮೂಲಕ ಭಾರತದ ಒಟ್ಟು ಅಂದಾಜು ಸೌರ ಸಾಮರ್ಥ್ಯವನ್ನು 3,445 GWpಗೆ ಕೊಂಡೊಯ್ಯುತ್ತದೆ ಎಂದು ಹೇಳಿದರು.

ದೇಶಾದ್ಯಂತ ತೇಲುವ ಸೌರ ನಿಯೋಜನೆ ಉತ್ತೇಜಿಸಲಾಗುತ್ತಿದೆ. ನವೀಕರಿಸಬಹುದಾದ ಇಂಧನ ಸಾಮರ್ಥ್ಯ, ಉತ್ಪಾದನೆ ಮತ್ತು ನಾಗರಿಕರ ಭಾಗವಹಿಸುವಿಕೆ ದೇಶದ ಶುದ್ಧ ಇಂಧನ ಪರಿವರ್ತನೆಯನ್ನು ಸಾಕಾರಗೊಳಿಸುತ್ತಿದೆ ಎಂದು ಹೇಳಿದರು.

ಜಲಾಶಯಗಳು, ಮತ್ತಿತರ ಜಲಮೂಲಗಳು ತೇಲುವ ಸೌರ ಯೋಜನೆಗಳ ಮೂಲಕ ಶುದ್ಧ ಇಂಧನ ಉತ್ಪಾದನೆಗೆ ಪ್ರಮುಖ ಕೊಡುಗೆಯಾಗಿವೆ. ಇದು ಶುದ್ಧ ಇಂಧನ ಪರಿವರ್ತನೆ ಗುರಿಗೆ ನೈಸರ್ಗಿಕ ಸಂಪನ್ಮೂಲಗಳನ್ನು ಪರಿಣಾಮಕಾರಿ ರೀತಿಯಲ್ಲಿ ಬಳಸಿಕೊಳ್ಳುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದರು.

ಇದೇ ವೇಳೆ ಸಣ್ಣ ಜಲವಿದ್ಯುತ್ ಅಭಿವೃದ್ಧಿ ಯೋಜನೆಯ ಆನ್‌ಲೈನ್ ಪೋರ್ಟಲ್ ಸಹ ಉದ್ಘಾಟಿಸಿದ ಸಚಿವರು, ಈ ಪೋರ್ಟಲ್‌ ಯೋಜನೆ ಅನುಷ್ಠಾನದಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತದೆ ಎಂದರು.

ಹೆಚ್ಚುವರಿ ವಿದ್ಯುತ್‌ ಸಾಮರ್ಥ್ಯದ ರಾಷ್ಟ್ರ ಭಾರತ:
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಫಲವಾಗಿ ಭಾರತವೀಗ ʼವಿದ್ಯುತ್‌ ಕೊರತೆʼ ಬದಲಾಗಿ ಹೆಚ್ಚುವರಿ ವಿದ್ಯುತ್‌ ಸಾಮರ್ಥ್ಯದ ರಾಷ್ಟ್ರವಾಗಿ ಮಾರ್ಪಟ್ಟಿದೆ. ಶುದ್ಧ ಇಂಧನದಲ್ಲಿ ಜಾಗತಿಕ ನಾಯಕತ್ವವನ್ನು ಪ್ರದರ್ಶಿಸಿದೆ ಎಂದು ಪ್ರತಿಪಾದಿಸಿದರು.

ಭಾರತದ ಶುದ್ಧ ಇಂಧನ ಸಾಧನೆಗಳು ಜಾಗತಿಕ ಮನ್ನಣೆಯನ್ನು ಗಳಿಸಿವೆ ಮತ್ತು ಮಹತ್ವಾಕಾಂಕ್ಷೆಯ ಹವಾಮಾನ ಮತ್ತು ಇಂಧನ ಗುರಿಗಳನ್ನು ಸಾಧಿಸುವ ದೇಶದ ಸಾಮರ್ಥ್ಯವನ್ನು ಪ್ರದರ್ಶಿಸಿವೆ ಎಂದು ಸಚಿವರು ಹೇಳಿದರು.

ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯ 288 GWಗೆ ವಿಸ್ತರಣೆ:

ದೇಶದಲ್ಲಿ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯ 2014ರಲ್ಲಿ 81 GW ಇತ್ತು. ಅದೀಗ ದುಪ್ಪಟ್ಟು ಏರಿಕೆ ಕಂಡಿದೆ. ಬರೋಬ್ಬರಿ 288 GWಗೆ ವಿಸ್ತರಣೆಯಾಗಿದೆ. ಸೌರ ಸಾಮರ್ಥ್ಯವೂ ಅಷ್ಟೇ ವೇಗದಲ್ಲಿದೆ. 2.8GW ನಿಂದ 155 GW ಗರಿಷ್ಠ ಮಟ್ಟಕ್ಕೇರಿದೆ. ದೇಶೀಯ ಸೌರ ಉತ್ಪಾದನಾ ಸಾಮರ್ಥ್ಯವು ಗಮನಾರ್ಹ ರೀತಿಯಲ್ಲಿ ವಿಸ್ತರಿಸಿದೆ. ಮಾಡ್ಯೂಲ್ ಉತ್ಪಾದನೆ 192 GW ತಲುಪಿದೆ ಮತ್ತು ಕೋಶ ಉತ್ಪಾದನಾ ಸಾಮರ್ಥ್ಯವು 30GW ತಲುಪಿದೆ ಎಂದು ವಿವರಿಸಿದರು.

ʼಪಿಎಂ ಸೂರ್ಯ ಘರ್ʼ ಮತ್ತು ʼಪಿಎಂ-ಕುಸುಮ್‌ʼ ಭಾರತದ ಶುದ್ಧ ಇಂಧನ ಪರಿವರ್ತನೆಯಲ್ಲಿ ನಾಗರಿಕರ ಭಾಗವಹಿಸುವಿಕೆಗೆ ವೇಗ ನೀಡಿದೆ. ದೇಶಾದ್ಯಂತ ನವೀಕರಿಸಬಹುದಾದ ಇಂಧನ ಅಳವಡಿಕೆಯನ್ನು ಚುರುಕುಗೊಳಿಸಿದೆ ಎಂದರು.

ಈ ಸಂದರ್ಭದಲ್ಲಿ NISE ಮತ್ತು ಮಿಲಿಟರಿ ಎಂಜಿನಿಯರಿಂಗ್ ಸೇವೆಗಳು ರಕ್ಷಣಾ ಸಂಸ್ಥೆಗಳಲ್ಲಿ ಸೌರಶಕ್ತಿ ಅಳವಡಿಕೆ ಬಲಪಡಿಸಲು ಒಪ್ಪಂದ ಮಾಡಿಕೊಂಡಿದ್ದು, ನವೀಕರಿಸಬಹುದಾದ ಇಂಧನ ಯೋಜನೆಗಳ ಅನುಷ್ಠಾನ ಮತ್ತು ಮೇಲ್ವಿಚಾರಣೆಗೆ NISE ತಾಂತ್ರಿಕ ಬೆಂಬಲ ಒದಗಿಸುತ್ತದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.


Share

You cannot copy content of this page